ಕಾರವಾರ: ಕೋವಿಡ್ ಲಾಕ್ಡೌನ್ ಈ ಬಾರಿ ನಗರ ಸ್ಥಳೀಯ ಸಂಸ್ಥೆಗಳ ಆಸ್ತಿ ತೆರಿಗೆ ಸಂಗ್ರಹಣೆ ಇಳಿಕೆಯಾಗಲು ಕಾರಣವಾಗಿದೆ. ಪರಿಣಾಮ ಅಭಿವೃದ್ಧಿ ಕಾಮಗಾರಿಗಳಿಗೆ ಹಣದ ಕೊರತೆ ಉಂಟಾಗುವ ಆತಂಕವಿದೆ.
ನಗರ ಸ್ಥಳೀಯ ಸಂಸ್ಥೆಗಳಿಗೆ ಎಸ್ಎಫ್ಸಿ, 14 ನೇ ಹಣಕಾಸು ಮುಂತಾದ ಅನುದಾನಗಳು ಸರ್ಕಾರದಿಂದ ಬರುತ್ತವೆ. ಜತೆಗೆ ತೆರಿಗೆಗಳಿಂದಲೂ ಹಣ ಸಂಗ್ರಹವಾಗುತ್ತದೆ. ಒಟ್ಟಾರೆ ಆದಾಯದಲ್ಲಿ ಹೊರ ಗುತ್ತಿಗೆ ಸಿಬ್ಬಂದಿ ವೇತನ, ವಾಹನ ರಿಪೇರಿ ಮುಂತಾದ ಸಣ್ಣಪುಟ್ಟ ಖರ್ಚು ಬಿಟ್ಟು ಉಳಿದ ಶೇ. 80 ರಷ್ಟು ಆಸ್ತಿ ತೆರಿಗೆಯನ್ನು ರಸ್ತೆ, ಚರಂಡಿ ಮುಂತಾದ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಲಾಗುತ್ತಿತ್ತು. ಆದರೆ, ಈ ಬಾರಿ ತೆರಿಗೆ ಸಂಗ್ರಹಕ್ಕೆ ಲಾಕ್ಡೌನ್ ಅಡಚಣೆಯಾಗಿದೆ.
ಜಿಲ್ಲೆಯಲ್ಲಿ 3 ನಗರಸಭೆಗಳು, 4 ಪುರಸಭೆಗಳು, 5 ಪಟ್ಟಣ ಪಂಚಾಯಿತಿಗಳು ಸೇರಿ ಒಟ್ಟು 13 ನಗರ ಸ್ಥಳೀಯ ಸಂಸ್ಥೆ ಯುಎಲ್ಬಿ)ಗಳಿವೆ. ಒಟ್ಟಾರೆ ಜಿಲ್ಲೆಯ ಜನಸಂಖ್ಯೆಯ ಶೇ. 29 ರಷ್ಟು ಎಂದರೆ 4.18 ಲಕ್ಷ ಜನ ನಗರಗಳಲ್ಲಿದ್ದಾರೆ. 1,23,147 ಮನೆ, ಅಂಗಡಿ, ಕಾರ್ಖಾನೆ ಮುಂತಾದ ಆಸ್ತಿಗಳಿವೆ. ಪ್ರತಿ ವರ್ಷ ಜಿಲ್ಲೆಯಲ್ಲಿ ಸರಾಸರಿ 19 ರಿಂದ 20 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹದ ಗುರಿ ಹೊಂದಲಾಗುತ್ತದೆ. ಇದುವರೆಗೆ ವಾರ್ಷಿಕ ಗುರಿಯ ಶೇ. 80 ರಿಂದ 90 ರಷ್ಟು ಅಧಿಕ ಆಸ್ತಿ ತೆರಿಗೆ ಸಂಗ್ರಹವಾಗುತ್ತಿತ್ತು. 2020 ರಲ್ಲಿ ಅದು ಶೇ.77.9 ಕ್ಕೆ ಇಳಿಕೆಯಾಗಿದೆ. ಈ ಬಾರಿ ಇನ್ನಷ್ಟು ಕಡಿಮೆಯಾಗುವ ಆತಂಕವಿದೆ.
15.13 ಕೋಟಿ ಸಂಗ್ರಹ: 2020-21 ನೇ ಸಾಲಿನಲ್ಲಿ ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಂದ 15.44 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿತ್ತು. ಹಿಂದಿನ ಬಾಕಿ 3.9 ಕೋಟಿ ರೂ. ಸೇರಿ 19.34 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸಬೇಕಿತ್ತು. ಆದರೆ, ಆರ್ಥಿಕ ವರ್ಷದ ಅಂತ್ಯಕ್ಕೆ 15.13 ಕೋಟಿ ರೂ.(ಶೇ. 77.9 ರಷ್ಟು )ಆಸ್ತಿ ತೆರಿಗೆ ಸಂಗ್ರಹಿಸಲಾಗಿದೆ. ಈ ಬಾರಿ 16.02 ಕೋಟಿ ರೂ. ಹಾಗೂ ಹಳೆಯ ಬಾಕಿ 4.03 ಕೋಟಿ ರೂ. ಸೇರಿ 20.06 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸಬೇಕಿದೆ. ಜೂನ್ ಅಂತ್ಯದವರೆಗೆ ಮೊದಲ ಮೂರು ತಿಂಗಳಲ್ಲಿ 5.55 ಕೋಟಿ ರೂ. (ಶೇ.30)ಮಾತ್ರ ಆಸ್ತಿ ತೆರಿಗೆ ಸಂಗ್ರಹವಾಗಿದೆ.
ಸಾಮಾನ್ಯವಾಗಿ ಆರ್ಥಿಕ ವರ್ಷದ ಮೊದಲ ತಿಂಗಳಲ್ಲಿ ಎಂದರೆ ಏಪ್ರಿಲ್ ಅಂತ್ಯಕ್ಕೆ ಆಸ್ತಿ ತೆರಿಗೆ ಸಂಗ್ರಹ ಮುಗಿದು ಹೋಗುತ್ತಿತ್ತು. ಆದರೆ, ಈ ಬಾರಿ ಆಸ್ತಿ ತೆರಿಗೆ ಸಂಗ್ರಹಿಸುವ ಕಾಲದಲ್ಲೇ ಲಾಕ್ಡೌನ್ ಆಗಿದ್ದರಿಂದ ಜನ ಮನೆಯಿಂದ ಹೊರ ಬರಲು ಸಾಧ್ಯವಾಗಿಲ್ಲ. ಇನ್ನು ಲಾಕ್ಡೌನ್ ಮುಗಿದರೂ ಆರ್ಥಿಕ ಸಂಕಷ್ಟದಲ್ಲಿರುವ ಜನ ತೆರಿಗೆ ಪಾವತಿಯ ಗೋಜಿಗೆ ಹೋಗುತ್ತಿಲ್ಲ. ಈಗ ಜುಲೈ 31 ರೊಳಗೆ ತೆರಿಗೆ ಪಾವತಿಸಿದವರಿಗೆ ಶೇ. 5 ರಷ್ಟು ರಿಯಾಯಿತಿ ಘೋಷಿಸಲಾಗಿದೆ. ಆದರೂ ಆಸ್ತಿ ತೆರಿಗೆ ಪಾವತಿಗೆ ಹೆಚ್ಚಿನ ಜನ ಮುಂದಾಗುತ್ತಿಲ್ಲ.
ಆಸ್ತಿ ತೆರಿಗೆ ನಗರ ಸ್ಥಳೀಯ ಸಂಸ್ಥೆಗಳ ಆದಾಯದ ಪ್ರಮುಖ ಭಾಗ. ಈ ಬಾರಿ ಲಾಕ್ಡೌನ್ ಆಗಿದ್ದರಿಂದ ಜನ ಕಚೇರಿಗೆ ಬರಲಾರದೆ ತೆರಿಗೆ ಸಂಗ್ರಹಕ್ಕೆ ಕೊಂಚ ಹಿನ್ನಡೆಯಾಗಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್ ಒಳಗೆ ನಿಗದಿತ ಗುರಿ ತಲುಪಲು ಪ್ರಯತ್ನಿಸಲಾಗುವುದು.| ಕೆ.ಎಸ್. ಕಮ್ಮಾರ ಎಇಇ, ಜಿಲ್ಲಾ ನಗರಾಭಿವೃದ್ಧಿ ಕೋಶ