ಜಿಲ್ಲೆ

ಭ್ರೂಣ ಹತ್ಯೆಗೆ ‘ಡೆಕಾಯ್’ ಬ್ರೇಕ್: ಕಾರ್ಯಾಚರಣೆ ಹಿಂದಿದೆ ರೋಚಕ ಕಹಾನಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಆಂಧ್ರಪ್ರದೇಶದಲ್ಲಿ ನಡೆಯಬೇಕಿದ್ದ ಹೆಣ್ಣು ಭ್ರೂಣವೊಂದರ ನಡೆಯಬಹುದಾಗಿದ್ದ ಹತ್ಯೆಯನ್ನು ತಡೆಯುವಲ್ಲಿ ಜಿಲ್ಲೆಯ ಆರೋಗ್ಯ ಇಲಾಖೆ ಅಧಿಕಾರಿಗಳ ಸಮಯಪ್ರಜ್ಞೆ ಹಾಗೂ ಡೆಕಾಯ್ ಕಾರ್ಯಾಚರಣೆ ಯಶಸ್ವಿಯಾಗಿದೆ. ಕೆಲವೇ ದಿನದಲ್ಲಿ ನಡೆದ ಈ ಬೆಳವಣಿಗೆಯ ಹಿಂದೆ ಹಲವು ಕುತೂಹಲಕಾರಿ ಅಂಶವಿದೆ.

ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ವಿಚಾರ ಮಂಡ್ಯ ಜಿಲ್ಲೆಗೆ ಕಳಂಕ ತಂದಿತ್ತು. ಆದರೆ ಆರೋಗ್ಯ ಇಲಾಖೆ ಅಧಿಕಾರಿಗಳ ದಿಟ್ಟ ನಡೆ ಹಾಗೂ ರಹಸ್ಯ ಕಾರ್ಯಾಚರಣೆ ದಂಧೆಗೆ ಬ್ರೇಕ್ ಹಾಕಿದೆ. ಗಮನಾರ್ಹ ವಿಷಯವೆಂದರೆ ಈಗ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಹಾಗೂ ಆಸ್ಪತ್ರೆಗೆ ಜಿಲ್ಲೆಗೆ ಸಂಬಂಧಿಸಿದ್ದಲ್ಲ. ಬದಲಿಗೆ ಹೊರ ಜಿಲ್ಲೆ ಹಾಗೂ ರಾಜ್ಯಕ್ಕೆ ಸಂಬಂಧಿಸಿದ್ದಾಗಿದೆ. ಆದಾಗ್ಯೂ ದಂಧೆ ಪತ್ತೆ ಮಾಡುವುದರ ಜತೆಗೆ ಭ್ರೂಣ ಹತ್ಯೆಯಾಗದಂತೆ ತಡೆದ ಹೆಗ್ಗಳಿಕೆ ಜಿಲ್ಲೆಯ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಲ್ಲುತ್ತದೆ.

ಮಂಡ್ಯದಿಂದ ಆಂಧ್ರಕ್ಕೆ ನಂಟು: ಹೆಣ್ಣು ಭ್ರೂಣ ಪತ್ತೆಗೆ ಸಂಬಂಧಿಸಿದಂತೆ ಮಹಿಳೆ ಮೂಲತಃ ಬಳ್ಳಾರಿ ಜಿಲ್ಲೆಯವರು. ಈಕೆ ಕೆಲ ದಿನದ ಹಿಂದಷ್ಟೇ ತನ್ನ ಕುಟುಂಬದೊಂದಿಗೆ ಕಬ್ಬು ಕಟಾವು ಕೆಲಸಕ್ಕೆಂದು ಮಳವಳ್ಳಿ ತಾಲೂಕಿಗೆ ಬಂದಿದ್ದರು. ಸಾಮಾನ್ಯವಾಗಿ ಕೂಲಿ ಕೆಲಸಕ್ಕೆಂದು ಹೊರ ಜಿಲ್ಲೆ ಅಥವಾ ರಾಜ್ಯದಿಂದ ಬರುವವರ ಆರೋಗ್ಯ ತಪಾಸಣೆ ಮಾಡುವ ಕೆಲಸವನ್ನು ಇಲಾಖೆ ಮಾಡುತ್ತಿರುತ್ತದೆ. ಇದೊಂದು ನಿರಂತರ ಪ್ರಕ್ರಿಯೆ. ಅದೇ ರೀತಿ ಇಲಾಖೆ ಸಿಬ್ಬಂದಿ ಮಹಿಳೆಯ ಆರೋಗ್ಯ ವಿಚಾರಣೆ ನಡೆಸಿದಾಗ ಗರ್ಭಿಣಿ ಎನ್ನುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಸ್ಕಾೃನಿಂಗ್ ಮಾಡಿಸಿಕೊಂಡು ಬರುವಂತೆ ಸೂಚನೆ ನೀಡಿದ್ದರು.

ಈ ಬೆಳವಣಿಗೆ ನಂತರ ಕೆಲ ದಿನವಾದರೂ ಆಕೆ ಇಲಾಖೆ ಸಿಬ್ಬಂದಿಯನ್ನು ಭೇಟಿ ಮಾಡಿಲ್ಲ. ಇದರಿಂದ ಅನುಮಾನಗೊಂಡ ಸಿಬ್ಬಂದಿ ಮತ್ತೆ ಆಕೆ ಕುಟುಂಬ ವಾಸವಿದ್ದ ಸ್ಥಳಕ್ಕೆ ಬಂದಿದ್ದಾರೆ. ಈ ಸಮಯದಲ್ಲಿ ಮಹಿಳೆ ಬೇಸರದಲ್ಲಿ ಕುಳಿತ್ತಿದ್ದನ್ನು ಗಮನಿಸಿ ಮಾಹಿತಿ ಕೇಳಿದಾಗ ಮಹತ್ವದ ಅಂಶ ಹೊರಬಿದ್ದಿದೆ. ಈಗಾಗಲೇ ತನಗೆ ಮೂರು ಹೆಣ್ಣು ಮಕ್ಕಳಿವೆ. ನಾಲ್ಕನೇ ಮಗು ಗರ್ಭಪಾತವಾಗಿತ್ತು. ಐದನೇ ಮಗು ಕೂಡ ಹೆಣ್ಣಾಗಿದೆ ಎನ್ನುವ ಮಾಹಿತಿ ಅನಿರೀಕ್ಷಿತವಾಗಿ ಕೊಟ್ಟಿದ್ದಾರೆ. ಇದರಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ದುಗ್ಗನಹಳ್ಳಿ ಪಿಎಚ್‌ಸಿ ವೈದ್ಯಾಧಿಕಾರಿ ಡಾ.ಸೆರೆನ್ ನಮ್ರತಾ, ಎನ್‌ಎನ್‌ಎಂ ನಂದಿನಿ, ಸಮುದಾಯ ಆರೋಗ್ಯಾಧಿಕಾರಿ ಕಿರಣ್ ಕೂಡಲೇ ಡಿಎಚ್‌ಒ ಡಾ.ಕೆ.ಮೋಹನ್ ಮತ್ತು ಟಿಎಚ್‌ಒ ಡಾ.ವೀರಭದ್ರಪ್ಪ ಅವರ ಗಮನಕ್ಕೆ ತಂದಿದ್ದಾರೆ. ನಂತರ ಡಿಎಚ್‌ಒ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಸಿ.ಬೆಟ್ಟಸ್ವಾಮಿ, ಮಳವಳ್ಳಿ ಟಿಎಚ್‌ಒ ಮಹಿಳೆ ಕುಟುಂಬದವರನ್ನು ಸಂಪರ್ಕಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಅದರಂತೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಕೊಡಮೂರು ತಾಲೂಕಿನ ಖಾಸಗಿ ನರ್ಸಿಂಗ್ ಹೋಂನಲ್ಲಿ ಸ್ಕಾೃನಿಂಗ್ ಮಾಡಿಸಿರುವ ವಿಚಾರ ಬೆಳಕಿಗೆ ಬಂದಿದೆ. ಬಳಿಕ ಕೇಂದ್ರ ಕಚೇರಿಯ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಮತ್ತೊಮ್ಮೆ ಆಪರೇಷನ್ ಡೆಕಾಯ್ ಹಿಂದೆ ಜಿಲ್ಲೆಯಲ್ಲಿ ಭ್ರೂಣ ಹತ್ಯೆ ದಂಧೆಕೋರರನ್ನು ಪತ್ತೆ ಮಾಡಲು ಅನುಷ್ಠಾನಗೊಳಿಸಿದ ಡೆಕಾಯ್ ಕಾರ್ಯಾಚರಣೆಯನ್ನು ಈ ಪ್ರಕರಣದಲ್ಲಿಯೂ ಮುಂದುವರೆಸಲು ಡಿಎಚ್‌ಒ ಡಾ.ಕೆ.ಮೋಹನ್ ನಿರ್ಧರಿಸಿದರು. ಅದರಂತೆ ಸ್ಕಾೃನಿಂಗ್ ಮಾಡಿಸಿದ ವಿಚಾರದ ಮಾಹಿತಿ ತಿಳಿದಿದ್ದ ಆಕೆಯ ಸಂಬಂಧಿಯೊಂದಿಗೆ ಮಾತುಕತೆ ನಡೆಸಿದಲ್ಲದೆ, ಪೂರ್ಣ ವಿಚಾರ ತಿಳಿಸಿದರೆ ಬಹುಮಾನ ನೀಡುವುದಾಗಿಯೂ ತಿಳಿಸಿದ್ದಾರೆ. ಅದರಂತೆ ಮಹಿಳೆ ಹಾಗೂ ಸಂಬಂಧಿಯೊಂದಿಗೆ ದುಗ್ಗನಹಳ್ಳಿ ಆರೋಗ್ಯ ಕೇಂದ್ರ ಸಿಬ್ಬಂದಿ, ಕೇಂದ್ರ ಕಚೇರಿ ಅಧಿಕಾರಿ ಹಾಗೂ ಆಂಧ್ರಪ್ರದೇಶದ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡದೊಂದಿಗೆ ಕಾರ್ಯಾಚರಣೆ ನಡೆಸಲಾಗಿದೆ. ಅದರಂತೆ ಮಹಿಳೆಯನ್ನು ಮೊದಲು ತಪಾಸಣೆಗೆ ಕಳಿಸಿ ಹಿಂದೆಯೇ ಅಧಿಕಾರಿಗಳ ತಂಡ ದಾಳಿ ನಡೆಸಿ ದಂಧೆಯನ್ನು ಸಾಕ್ಷಿ ಸಹಿತ ಬಯಲಿಗೆಳೆದಿದ್ದಾರೆ. ಮಾತ್ರವಲ್ಲದೆ ನರ್ಸಿಂಗ್ ಹೋಂಗೆ ಬೀಗ ಹಾಕಿಸಿದ್ದಾರೆ. ಡಿಎಚ್‌ಒ ಡಾ.ಕೆ.ಮೋಹನ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಬೆಟ್ಟಸ್ವಾಮಿ, ಟಿಎಚ್‌ಒ ಡಾ.ವೀರಭದ್ರಪ್ಪ ಮಾರ್ಗದರ್ಶನದಲ್ಲಿ ಮಳವಳ್ಳಿ ತಾಲೂಕು ದುಗ್ಗನಹಳ್ಳಿ ಪಿಎಚ್‌ಸಿ ವೈದ್ಯಾಧಿಕಾರಿ ಡಾ.ಸೆರೆನ್ ನಮ್ರತಾ, ಎನ್‌ಎನ್‌ಎಂ ನಂದಿನಿ, ಸಮುದಾಯ ಆರೋಗ್ಯಾಧಿಕಾರಿ ಕಿರಣ್ ಡೆಕಾಯ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಒಟ್ಟಾರೆ ಹೆಣ್ಣು ಭ್ರೂಣ ಹತ್ಯೆ ದಂಧೆಗೆ ಬಲಿಯಾಗಬೇಕಿದ್ದ ಮಗುವನ್ನು ಉಳಿಸುವಲ್ಲಿ ಜಿಲ್ಲೆಯ ಆರೋಗ್ಯ ಇಲಾಖೆ ಅಧಿಕಾರಿಗಳ ಪಾತ್ರ ಶ್ಲಾಘನೀಯ.
ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ವಿಚಾರದಲ್ಲಿ ಆರೋಗ್ಯ ಇಲಾಖೆ ತೀವ್ರ ಕಟ್ಟೆಚ್ಚರ ವಹಿಸಿ ಗಂಭೀರ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿರುವುದರಿಂದ ಪ್ರಕರಣ ಹೊರಗೆ ಬಂದಿದೆ. ಮಹಿಳೆ ಹಾಗೂ ನರ್ಸಿಂಗ್ ಹೋಂ ಹೊರ ಜಿಲ್ಲೆ ಮತ್ತು ರಾಜ್ಯಕ್ಕೆ ಸಂಬಂಧಿಸಿದ್ದವು. ಆದರೂ ಸ್ಕಾೃನಿಂಗ್ ಮಾಹಿತಿ ಬಗ್ಗೆ ನಮ್ಮ ಜಿಲ್ಲೆಯಲ್ಲಿ ಹೊರಬಿದ್ದ ಹಿನ್ನೆಲೆಯಲ್ಲಿ ಕೇಂದ್ರ ಕಚೇರಿಗೆ ತಿಳಿಸಿ ಡೆಕಾಯ್ ಕಾರ್ಯಾಚರಣೆ ನಡೆಸಿ ತಪ್ಪಿತಸ್ಥರನ್ನು ಪತ್ತೆ ಮಾಡಲಾಗಿದೆ. ಹೊರ ಜಿಲ್ಲೆಯಿಂದ ಮಂಡ್ಯಕ್ಕೆ ವಲಸೆ ಬಂದಿರುವವರ ಮಾಹಿತಿ ಸಂಗ್ರಹಿಸುವ ಪ್ರಕ್ರಿಯೆ ನಡೆಯುತ್ತಿದೆ. ಡಾ.ಕೆ.ಮೋಹನ್ ಜಿಲ್ಲಾ ಆರೋಗ್ಯಾಧಿಕಾರಿ
ಜಿಲ್ಲೆಯಲ್ಲೂ ಪಿಎಚ್‌ಸಿ, ಉಪ ಕೇಂದ್ರದ ಮಟ್ಟದಲ್ಲಿ ಕಟ್ಟುನಿಟ್ಟಿನ ಪರಿಶೀಲನಾ ಪ್ರಕ್ರಿಯೆ ನಡೆಯುತ್ತಿದೆ. ತಡವಾಗಿ ನೋಂದಣಿ ಮಾಡಿಸುವ ಗರ್ಭಿಣಿಯರ ಮಾಹಿತಿ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಬಳ್ಳಾರಿ ಮಹಿಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಮೇಲ್ವಿಚಾರಣೆ ಆ ಜಿಲ್ಲೆಯ ಆರೋಗ್ಯ ಇಲಾಖೆ ಅಧಿಕಾರಿಗಳು ನೋಡಿಕೊಳ್ಳಲಿದ್ದಾರೆ. ಡಾ.ಜಿ.ಸಿ.ಬೆಟ್ಟಸ್ವಾಮಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ