ಜಿಲ್ಲೆ

‘ಡಾ.ಕೌಶಲ್ಯ ಸ್ಟುಡಿಯೋ’ಗೆ ಚಾಲನೆ

Tumakuru

ತುಮಕೂರು: ವಿದ್ಯಾರ್ಥಿ ಯುವ ಸಮೂಹಕ್ಕೆ ಆನ್‌ಲೈನ್ ಮೂಲಕ ಕೌಶಲ ತರಬೇತಿ ನೀಡುವ ಕಾರ್ಯಕ್ರಮ ‘ಡಾ.ಕೌಶಲ್ಯ ಸ್ಟುಡಿಯೋ’ಗೆ ಸಿದ್ಧಗಂಗಾ ಮಠದಲ್ಲಿ ಶ್ರೀ ಸಿದ್ದಲಿಂಗಸ್ವಾಮೀಜಿ ಚಾಲನೆ ನೀಡಿದರು.

ಕೌಶಲ ತರಬೇತಿ ವಾಹನದ ಮೂಲಕ ಜಿಲ್ಲೆಯ ಎಲ್ಲ ತಾಲೂಕು ಹಾಗೂ ಹೋಬಳಿ ಕೇಂದ್ರದಲ್ಲಿ ಜು.20ರಿಂದ ವಾಹನ ಸಂಚರಿಸಲಿದೆ. ಸರ್ಕಾರ ಹಾಗೂ ವಿವಿಧ ಸರ್ಕಾರೇತರ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮ ಗ್ರಾಮೀಣ ಭಾಗದ ಯುವಕರು ಭವಿಷ್ಯದಲ್ಲಿ ಉದ್ಯೋಗ ಪಡೆಯಲು ನೆರವಾಗಲಿ ಎಂದು ಸ್ವಾಮೀಜಿ ಆಶಿಸಿದರು.

ಕೌಶಲ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಮಾತನಾಡಿ, ಪ್ರತಿಯೊಬ್ಬರಿಗೂ ಸ್ವಯಂ ಉದ್ಯೋಗ ಸಿಗಲಿ, ಕಾರ್ಖಾನೆಗಳಲ್ಲಿ ಕೆಲಸ ಸಿಗಲಿ ಎನ್ನುವ ನಿಟ್ಟಿನಲ್ಲಿ ಹೋಬಳಿ ಮಟ್ಟಕ್ಕೆ ಹೋಗಿ ವಾಹನದಲ್ಲಿ ಅವರಿಗೆ ತರಬೇತಿ ಕೊಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಆರ್‌ಎಚ್‌ಆರ್‌ಟಿಎಫ್ ಫೌಂಡೇಷನ್ ಅಧ್ಯಕ್ಷ ನಟರಾಜು ಮಾತನಾಡಿ, ಕೌಶಲ ತರಬೇತಿ ವಾಹನದ ಮೂಲಕ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಸಂಚರಿಸಲಿದೆ ಎಂದರು. ಕೌಶಲ ಅಭಿವೃದ್ಧಿ ನಿಗಮದ ಜಿಲ್ಲಾ ಅಧಿಕಾರಿ ಶ್ರೀನಿವಾಸ್ ಮತ್ತಿತರರು ಇದ್ದರು.