ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿನ ಬಹುತೇಕ ಜಲಾಶಯಗಳಲ್ಲಿ ನೀರಿನ ಪ್ರಮಾಣವು ದಿನದಿಂದ ದಿನಕ್ಕೆ ಕುಸಿತ ಕಂಡಿದ್ದು ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ನಿರ್ವಹಣೆಯು ತಲೆ ನೋವಾಗಿ ಕಾಡುತ್ತಿದೆ.
ಕಳೆದ ಸಾಲಿನ ಮುಂಗಾರು ಮತ್ತು ಹಿಂಗಾರಿನಲ್ಲಿ ತೀವ್ರ ಮಳೆಯ ಕೊರತೆ ಉಂಟಾಗಿದ್ದು ಜಿಲ್ಲೆಯನ್ನು ಬರಪೀಡಿತ ಪ್ರದೇಶ ಎಂಬುದಾಗಿ ಘೋಷಿಸಲಾಗಿದೆ. ಇದರ ನಡುವೆ ಜಲಾಶಯಗಳಲ್ಲಿ, ಕೊರೆಸಿದ ಕೊಳವೆ ಬಾವಿಗಳಲ್ಲಿನ ಅಲ್ಪಸ್ವಲ್ಪ ಪ್ರಮಾಣದಲ್ಲಿದ್ದ ನೀರಿನ ಬಳಕೆಯಿಂದ ಬೇಸಿಗೆಯ ಪರಿಸ್ಥಿತಿ ನಿಭಾಯಿಸಿದ್ದು ಇದೀಗ ಹಾಹಾಕಾರ ಸಮಸ್ಯೆ ಹೆಚ್ಚಾಗಿದೆ. ಮಳೆಗಾಗಿ ಎದುರು ನೋಡುವಂತಾಗಿದೆ.
ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ನಗರಕ್ಕೆ ಜಕ್ಕಲಮಡಗು ಜಲಾಶಯ, ಬಾಗೇಪಲ್ಲಿ ಪಟ್ಟಣ ಮತ್ತು ತಾಲೂಕಿನ ವಿವಿಧ ಗ್ರಾಮಗಳಿಗೆ ಚಿತ್ರಾವತಿ, ವಂಡಮಾನ್ ಜಲಾಶಯ, ಚಿಂತಾಮಣಿ ನಗರಕ್ಕೆ ಕನ್ನಂಪಲ್ಲಿ ಕೆರೆ ಜಲಾಶಯವು ಕುಡಿಯುವ ನೀರಿನ ಮೂಲ. ಇವು ಹಲವು ತಿಂಗಳ ಹಿಂದೆ ನೀರಿನಿಂದ ತುಂಬಿ ತುಳುಕಾಡುತ್ತಿದ್ದವು. ಆದರೆ, ಮಳೆ ಬಾರದ ಹಿನ್ನೆಲೆಯಲ್ಲಿ ಖಾಲಿಯಾಗಿದ್ದು ಸಮಸ್ಯೆ ತೀವ್ರವಾಗಿ ಕಾಡಲು ಕಾರಣವಾಗಿದೆ. ಈಗ ಬಹುತೇಕ ಜಲಾಶಯಗಳ ಬದಲಿಗೆ ಕೊಳವೆ ಬಾವಿ ಮೂಲಕ ನೀರು ಪೂರೈಸುವಂತಾಗಿದೆ.
*ಉತ್ತಮ ಮಳೆಯ ನಿರೀಕ್ಷೆ
ಬರಿದಾಗಿರುವ ಜಲಾಶಯಗಳು ಪುನಃ ಗತ ವೈಭವವನ್ನು ಮರಳಿ ಪಡೆಯುವಂತಾಗಲು ಉತ್ತಮ ಮಳೆಯಾಗಬೇಕು. ಮುಂಗಾರು ಪೂರ್ವ ಮಳೆ ಮೇ ಅಂತ್ಯದಿಂದ ಜುಲೈರವರೆಗೂ ಮಳೆಯಾದರೆ ನೀರು ಸಂಗ್ರಹವಾಗುತ್ತದೆ ಎಂಬುದು ಅಧಿಕಾರಿಗಳ ಲೆಕ್ಕಾಚಾರ.
ಕಳೆದ 2021 ಮತ್ತು 2022 ನೇ ಸಾಲಿನಲ್ಲಿ ಈ ಭಾಗದಲ್ಲಿ ದಾಖಲೆಯ ಪ್ರಮಾಣದಲ್ಲಿ ಮಳೆಯಾಗಿತ್ತು. ಆದರೆ, 2023 ರಲ್ಲಿ ಅಭಾವ ಕಂಡು ಬಂದಿದ್ದು ಪ್ರಸ್ತುತ ಬರ ಪರಿಸ್ಥಿತಿಯು ಭೀಕರವಾಗಿದೆ.
ಮೇ ನಲ್ಲಿ ಮುಂಗಾರು ಪೂರ್ವ ಮಳೆಯು ಸಮರ್ಪಕವಾಗಿ ಬಿದ್ದಿಲ್ಲ. ಆಗಾಗ ಅಲ್ಲಲ್ಲಿ ತುಂತುರು ಹನಿಗಳ ಸಿಂಚನ, ಮೋಡ ಮುಸುಕಿದ ವಾತಾವರಣ ಜೋರುಗಾಳಿಯೇ ಸಣ್ಣ ಪ್ರಮಾಣದಲ್ಲಿ ಅಬ್ಬರಿಸಿದೆ.