ಜಿಲ್ಲೆ

ಮೈಸೂರಿನಲ್ಲಿ ಶೈಕ್ಷಣಿಕ ಗುಣಮಟ್ಟ ಕುಸಿತ, ಮಂಗಳೂರಿನತ್ತ ಮೈಸೂರಿನ ವಿದ್ಯಾರ್ಥಿಗಳು : ಸಚಿವ ಮಧು ಬಂಗಾರಪ್ಪ ಅಸಮಾಧಾನ

ಸದೇಶ್ ಕಾರ್ಮಾಡ್

ಮೈಸೂರು: ಮೈಸೂರು ಜಿಲ್ಲೆಯಲ್ಲಿ 25 ಸಾವಿರ ವಿದ್ಯಾರ್ಥಿಗಳು ಶಿಕ್ಷಣಕೋಸ್ಕರ ಬೆಂಗಳೂರು, ಮಂಗಳೂರು ಜಿಲ್ಲೆಯತ್ತ ಮುಖ ಮಾಡಿದ್ದು, ಜಿಲ್ಲೆಯ ಶಿಕ್ಷಣದ ಗುಣಮಟ್ಟ ತೀವ್ರ ಕುಸಿತಗೊಂಡಿರುವುದೇ ಇದಕ್ಕೆ ಪ್ರಮುಖ ಕಾರಣ. ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಕ್ರಮ ವಹಿಸಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಸಚಿವರು, ಯಾವುದೇ ಜಿಲ್ಲೆಯಲ್ಲೂ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬೇರೆ ಜಿಲ್ಲೆಗೆ ವಿದ್ಯಾಭ್ಯಾಸಕ್ಕೆ ಹೋಗಿರುವ ಉದಾಹರಣೆ ಇಲ್ಲ. ಮೈಸೂರು ಜಿಲ್ಲೆಯಲ್ಲಿ ಕೇವಲ ಸರ್ಕಾರಿ ಮಾತ್ರವಲ್ಲ ಅನುದಾನಿತ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಯಲ್ಲೂ ಶಿಕ್ಷಣದ ಗುಣಮಟ್ಟ ಕುಸಿದಿದೆ ಎಂದರು.

ಪ್ರಾಥಮಿಕ ಶಾಲಾ ಹಂತದಲ್ಲಿ ಜಿಲ್ಲೆಯಿಂದ ಹೊರ ಜಿಲ್ಲೆಗೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಿಲ್ಲ. ಆದರೆ, ಪ್ರೌಢ ಶಾಲಾ ಹಂತದಿಂದ ವಿದ್ಯಾರ್ಥಿಗಳು ಮಂಗಳೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ತೆರಳಲು ಕಾರಣವೇನು? ಇಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ ಎಂಬುದೇ ಪ್ರಮುಖ ಕಾರಣ. ಸರ್ಕಾರ ಸರ್ಕಾರಿ ಶಾಲೆಗಳಿಗೆ ಎಲ್ಲ ರೀತಿಯ ಸವಲತ್ತುಗಳನ್ನು ನೀಡಲು ಸಿದ್ಧವಿದೆ. ಶಿಕ್ಷಕರು ವಿದ್ಯಾರ್ಥಿ ಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಬೇಕು ಎಂದು ನಿರ್ದೇಶನ ನೀಡಿದರು.

ಶಿಕ್ಷಕರ ಕೊರತೆ ನೀಗಿಸಲು ರಾಜ್ಯದಲ್ಲಿ 12 ಸಾವಿರ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಕೆಲವು ಕಡೆಗಳಲ್ಲಿ 8-10 ಮಕ್ಕಳಿಗೋಸ್ಕರ ಶಾಲೆಗಳು ನಡೆಯುತ್ತಿವೆ. ಅಂತಹ ಶಾಲೆಗಳನ್ನು ಪಕ್ಕದ ಶಾಲೆಗಳೊಂದಿಗೆ ವಿಲೀನ ಮಾಡಬೇಕು. ಆ ಮೂಲಕ ಶಿಕ್ಷಕರನ್ನು ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ಬಳಕೆ ಮಾಡಿಕೊಳ್ಳಬೇಕು. ವಿಲೀನ ಸಂದರ್ಭ ಸ್ಥಳೀಯ ಶಾಸಕರ ಒಪ್ಪಿಗೆ ಪಡೆಯಬೇಕು ಎಂದು ಇಲಾಖೆ ಅಧಿಕಾರಿಗಳಿಗೆ ಸಲಹೆ ನೀಡಿದರು.

ರಾಜ್ಯದ ಎಲ್ಲ ಸರ್ಕಾರಿ ಶಾಲಾ, ಕಾಲೇಜುಗಳಿಗೆ ಉಚಿತ ವಿದ್ಯುತ್ ಹಾಗೂ ನೀರು ಪೂರೈಕೆ ಮಾಡಲಾಗುತ್ತಿದೆ. ವಿದ್ಯುತ್ ಬಿಲ್ ಹೆಚ್ಚು ಬರುತ್ತಿದೆ ಎಂಬ ಕಾರಣಕ್ಕೆ ಸಾಕಷ್ಟು ಶಾಲೆಗಳಲ್ಲಿ ಕಂಪ್ಯೂಟರ್ ಇದ್ದರೂ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ನೀಡುತ್ತಿರಲಿಲ್ಲ. ಇದೀಗ ವಿದ್ಯುತ್ ಉಚಿತವಾಗಿ ನೀಡುತ್ತಿರುವ ಹಿನ್ನೆಲೆಯಲ್ಲಿ ಕೂಡಲೇ ಕಂಪ್ಯೂಟರ್ ಶಿಕ್ಷಣ ಪ್ರಾರಂಭಿಸಬೇಕು ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿ ಫಲಿತಾಂಶ ಸುಧಾರಣೆಗೆ ಸಂಜೆ ತರಗತಿಗಳನ್ನು ನಡೆಸಬೇಕು ಎಂದು ನಿರ್ದೇಶನ ನೀಡಿದರು.