ಗೌರಿಬಿದನೂರು: ಇತ್ತೀಚಿನ ದಿನಗಳಲ್ಲಿ ರಾಜಕೀಯದಲ್ಲಿ ಪ್ರಾಮಾಣಿಕತೆ, ನೈತಿಕತೆ ಕುಸಿಯುತ್ತಿದೆ ಎಂದು ಮಾಜಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಕಳವಳ ವ್ಯಕ್ತಪಡಿಸಿದರು.
ಮಹಾತ್ಮಗಾಂಧಿ ಜಯಂತಿ ಅಂಗವಾಗಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಗರದ ಮಹಾತ್ಮ ಗಾಂಧಿ ವೃತ್ತದಿಂದ ವಿದುರಾಶ್ವತ್ಥದವರೆಗೆ ಹಮ್ಮಿಕೊಂಡಿದ್ದ ಗಾಂಧಿ ನಡಿಗೆ, ಗಾಂಧಿ ಭಾರತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನೀತಿ, ಅನೀತಿ ಅಂತರ ಕಡಿಮೆಯಾಗುತ್ತಿದೆ. ನೀತಿ ಜಾಗದಲ್ಲಿ ಅನೀತಿ ಕೂರುತ್ತಿದೆ. ಸಾರ್ವಜನಿಕರಿಗೆ ಸರ್ಕಾರಗಳ ಮೇಲೆ ಅಪನಂಬಿಕೆ ಹೆಚ್ಚುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಬುಡುಮೇಲುವಾಗುವ ಆತಂಕಗಳು ಕಾಣಿಸುತ್ತಿದೆ. ಸ್ವಾರ್ಥಕ್ಕೋಸ್ಕರ ಜಾತಿ- ಧರ್ಮಗಳ ನಡುವೆ ವಿಷ ಬೀಜ ಬಿತ್ತಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಾಡಬಾರದ್ದನ್ನು ಮಾಡಿ ಅಹಸ್ಯ ರಾಜಕೀಯ ಮಾಡಬಾರದು. ಮೌಲ್ಯ ಹಾಗೂ ಸತ್ಯಕ್ಕೆ ತಾತ್ಕಾಲಿಕ ತೊಂದರೆಯಾಗಬಹುದು. ಆದರೆ, ಕೊನೆಗೆ ಜಯ ಸಿಕ್ಕೇ ಸಿಗುತ್ತದೆ. ಗಾಂಧೀಜಿಯವರ ಜೀವನ ಬದುಕು ಜನತೆಗೆ ಆದರ್ಶವಾಗಬೇಕು ಎಂದರು.
ವಿರೋಧಿಗಳಿಗೆ ಟಾಂಗ್
ಇಪ್ಪತ್ತೈದು ವರ್ಷ ಶಾಸಕನಾಗಿ ಸಾಕಷ್ಟು ಹಣ ಮಾಡಿದ್ದೇನೆ. ವಿದೇಶದಲ್ಲಿ ಇರಿಸಿದ್ದೇನೆ ಎಂದು ನಮ್ಮವರೇ ನನ್ನ ವಿರುದ್ಧ ಅಪಪ್ರಚಾರ ಮಾಡಿದರು. ಚುನಾವಣೆಗೆ ಜನರಿಗೆ ದುಡ್ಡು ಕೊಡಲಿಲ್ಲ ಎಂದು ಟೀಕಿಸಿದರು. ಆದರೆ, ಹಿರಿಯ ಗಾಂಧೀವಾದಿ ಡಾ. ಎಚ್.ನರಸಿಂಹಯ್ಯ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಬಂದಿದ್ದೇನೆ. ಎಷ್ಟೇ ಕಷ್ಟವಾದರೂ ಮೌಲ್ಯಾಧಾರಿತ ರಾಜಕಾರಣ ಮಾಡುತ್ತೇನೆ. ನೈತಿಕತೆ ಮೇಲೆ ಗೌರಿಬಿದನೂರು ಕಾಂಗ್ರೆಸ್ ಕಟ್ಟಿ ಬೆಳೆಸುತ್ತೇನೆ ಎಂದ ಶಿವಶಂಕರ ರೆಡ್ಡಿ, 25 ವರ್ಷಗಳ ಅವಧಿಯಲ್ಲಿ 50 ವರ್ಷಗಳ ಅಭಿವೃದ್ಧಿಯನ್ನು ಮಾಡಿದ್ದೇನೆ. ಸಾಕ್ಷಿ ಗುಡ್ಡೆಯನ್ನು ಬಿಟ್ಟಿದ್ದೇನೆ. ಕೇವಲ ಭಾಷಣ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಪಡೆದು, ಪುಂಡರಿಂದ ಜೈಕಾರ ಹಾಕಿಸಿಕೊಳ್ಳುವುದು ಅಭಿವೃದ್ಧಿಯಲ್ಲ, ಆತ್ಮಪೂರ್ವಕವಾಗಿ ಅಭಿವೃದ್ಧಿ ಕೆಲಸ ಮಾಡಬೇಕು ಎಂದು ವಿರೋಧಿಗಳಿಗೆ ಕುಟುಕಿದರು.
ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮುದ್ದು ಗಂಗಾಧರ್ ಮಾತನಾಡಿ, ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಸತ್ಯ, ನಿಷ್ಠೆ, ಸಮಾನತೆ ಸಿದ್ಧಾಂತಗಳ ಮೇಲೆ ಕಾಂಗ್ರೆಸ್ ನಂಬಿಕೆ ಇರಿಸಿದೆ. ಆ ಹಾದಿಯಲ್ಲಿ ಸಾಗಿ ದೇಶವನ್ನು ಒಗ್ಗೂಡಿಸುವ ಎಲ್ಲ ಸಮುದಾಯಗಳನ್ನು ಒಟ್ಟಿಗೆ ಕರೆದೊಯ್ಯುವ ಕೆಲಸ ಮಾಡುತ್ತದೆ. ಆದರೆ, ಕೋಮುವಾದಿಂದ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಪಕ್ಷಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದರು.
ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಮರಳೂರು ಹನುಮಂತರೆಡ್ಡಿ ಮಾತನಾಡಿದರು.
ಬೈಕ್ ರ‌್ಯಾಲಿ, ಕಾಲ್ನಡಿಗೆ ಜಾಥಾ
ಪಕ್ಷದ ಕಾರ್ಯಕರ್ತರು ನಗರದಿಂದ ವಿದುರಾಶ್ವತ್ಥ ಕ್ರಾಸ್‌ವರೆಗೆ ಬೈಕ್ ರ‌್ಯಾಲಿ ನಡೆಸಿ ಅಲ್ಲಿಂದ ಅಲ್ಲಿಂದ ವೀರಸೌಧದವರೆಗೆ ಕಾಲ್ನಡಿಗೆ ಜಾಥಾ ನಡೆಸಿದರು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ವಿದುರಾಶ್ವತ್ಥದ ಹತ್ಯಾಕಾಂಡದಲ್ಲಿ ಮೃತಪಟ್ಟವರ ಸ್ಮಾರಕಕ್ಕೆ ನಮನ ಸಲ್ಲಿಸಿದರು.
ತಾಲೂಕು ಹಿಂದುಳಿದ ವರ್ಗಗಳ ಘಟಕಗಳ ಅಧ್ಯಕ್ಷ ಜೀಲಾಕುಂಟೆ ಗಂಗಾಧರ್, ತಾರಾನಾಥ್, ಸೋಮಯ್ಯ, ಇತರೆ ಮುಖಂಡರು, ಕಾರ್ಯಕರ್ತರು ಇದ್ದರು.