ಶಿವಮೊಗ್ಗ: ಮುಂಗಾರು ಅವಧಿ ಅರ್ಧ ಪೂರ್ಣಗೊಂಡರೂ ಸುಧಾರಿಸದ ಜಲಾಶಯದ ನೀರಿನ ಸಂಗ್ರಹದಿಂದ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ತಳಮಳ ಉಂಟಾಗಿದೆ. ಈಗಾಗಲೇ ನಾಲೆಗಳಲ್ಲಿ ನೀರು ಹರಿಸುತ್ತಿದ್ದರೂ ಭರ್ತಿ 100 ದಿನ ನೀರು ಹರಿಯುವುದೇ ಎಂಬ ಆತಂಕ ಶುರುವಾಗಿದೆ.
10 ವರ್ಷದ ಹಿಂದೆ ಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದ್ದ ಅವಧಿಯಲ್ಲಿ ನೀರಾವರಿ ಸಲಹಾ ಸಮಿತಿ ಸಭೆಗಳಲ್ಲಿ ಕೋಲಾಹಲ ಉಂಟಾಗುತ್ತಿತ್ತು. ಅಚ್ಚುಕಟ್ಟು ಭಾಗದ ರೈತರು ನೀರಿಗಾಗಿ ಭದ್ರಾ ಕಾಡಾ ಕಚೇರಿ ಎದುರು ರಸ್ತೆಗಿಳಿದು ಪ್ರತಿಭಟಿಸುತ್ತಿದ್ದರು. ಈಗ ಅಂತಹದ್ದೇ ಸ್ಥಿತಿ ನಿರ್ಮಾಣವಾಗುತ್ತಿದೆ.
ಈಗ ನೀರು ಹರಿಸುತ್ತಿರುವುದನ್ನು ಪರಿಶೀಲಿಸಲು ಸಭೆ ಕರೆಯಬೇಕು. ಮುಂಗಾರು ಹಂಗಾಮಿಗೆ ಭತ್ತಕ್ಕೆ ನೀರು ಹರಿಸುವ ಬದಲು ಬೇಸಿಗೆಯಲ್ಲಿ ತೋಟಗಾರಿಕೆ ಬೆಳೆ ಉಳಿಸಿಕೊಳ್ಳಲು ಮುಂದಾಗಬೇಕೆಂಬ ರೈತ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಹೇಳಿಕೆ ಈಗ ಅಚ್ಚುಕಟ್ಟು ಪ್ರದೇಶದಲ್ಲಿ ಕಿಚ್ಚು ಹತ್ತಿಸಿದೆ.
ಅಲ್ಲಿನ ರೈತರು ಮುಂಗಾರು ಹಂಗಾಮಿಗೆ ಭರ್ತಿ 100 ದಿನ ನೀರು ಹರಿಸಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಮುಂದಿನ ದಿನಗಳಲ್ಲಿ ಮಳೆಯಾಗಿ ಜಲಾಶಯ ಭರ್ತಿಯಾಗಲಿದೆ ಎಂಬ ನಿರೀಕ್ಷೆ ಅಲ್ಲಿನ ರೈತರದ್ದು. ಒಂದು ವೇಳೆ ಮಳೆ ಕೈ ಕೊಟ್ಟು ಮುಂಗಾರು ಹಂಗಾಮಿಗೆ ಭದ್ರಾ ನಾಲೆ ನೀರು ಸ್ಥಗಿತಗೊಂಡರೆ ಬೇಸಿಗೆಯಲ್ಲಿ ತೋಟಗಳ ನಿರ್ವಹಣೆ ಹೇಗೆ? ಎಂಬ ಚಿಂತೆ ಅಡಕೆ ಬೆಳೆಗಾರರದ್ದು. ಭದ್ರಾ ಜಲಾಶಯದಿಂದ ಈಗ ಬಲದಂಡೆ ನಾಲೆಯಲ್ಲಿ 2,650 ಕ್ಯೂಸೆಕ್ ಹಾಗೂ ಎಡದಂಡೆಯಲ್ಲಿ 380 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಇದರಿಂದ 100 ದಿನಗಳು ಮಾತ್ರ ನೀರು ಹರಿಸಬಹುದು. ಇಷ್ಟು ಪ್ರಮಾಣದ ನೀರು ನಾಲೆಯ ಕೊನೆಯ ಭಾಗದ ಕೃಷಿ ಭೂಮಿಯನ್ನೂ ತಲುಪುವುದಿಲ್ಲ ಎಂಬುದು ಹಲವರ ಅಭಿಪ್ರಾಯ.
ಈ ಹಿಂದಿನ ವರ್ಷಗಳಲ್ಲಿ ಜಲಾಶಯ ತುಂಬಿದಾಗ ಬಲದಂಡೆಯಲ್ಲಿ 3,200 ಹಾಗೂ ಎಡದಂಡೆಯಲ್ಲಿ 480 ಕ್ಯೂಸೆಕ್ ನೀರು ಹರಿಸಲಾಗುತ್ತಿತ್ತು. ಇದು ನಾಲೆಯ ಕೊನೆಯ ಭಾಗ ತಲುಪುತ್ತಿತ್ತು. ಆದರೆ ಈ ಪ್ರಮಾಣದಲ್ಲಿ ನೀರು ಹರಿಸಿದರೆ 80 ದಿನ ಮಾತ್ರ ನೀರು ರೈತರ ಹೊಲ ತಲುಪಲಿದೆ. ಅಲ್ಲಿಗೆ ಭತ್ತದ ಬೆಳೆಗೂ ಸಂಪೂರ್ಣ ನೀರು ಸಾಲುವುದಿಲ್ಲ.
ಒಂದು ವೇಳೆ ಮುಂಗಾರು ಹಂಗಾಮಿನಲ್ಲಿ ಭತ್ತದ ಬೆಳೆಗೆ ಸಂಪೂರ್ಣ 100 ದಿನ ಅವಶ್ಯಕತೆಗೆ ತಕ್ಕಂತೆ ನೀರು ಹರಿಸದೇ ಹೋದರೆ ರೈತರು ಮಾಡಿದ ಖರ್ಚು ವೆಚ್ಚ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ. ಹೀಗಾಗಿ ಸರಿಯಾದ ನಿರ್ಣಯ ಕೈಗೊಳ್ಳಲು ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ. ಇನ್ನೊಂದೆಡೆ ಜಲಾಶಯ ಭರ್ತಿಯಾಗುವ ನಿರೀಕ್ಷೆಯಲ್ಲಿ ಭತ್ತ ಬೆಳೆಗಾರರು ಸಸಿಮಡಿ ಸಿದ್ದಮಾಡಿಕೊಂಡು ನಾಟಿಗೆ ಸಜ್ಜಾಗಿದ್ದಾರೆ. ಈ ಹಂತದಲ್ಲಿ ನೀರು ಹರಿಸದೇ ಹೋದರೆ ರೈತರ ಆಕ್ರೋಶ ಎದುರಿಸಬೇಕಾಗುತ್ತದೆ ಎಂಬ ವಾಸ್ತವ ಸಂಗತಿಯನ್ನೂ ಅಧಿಕಾರಿಗಳು ಒಪ್ಪಿಕೊಳ್ಳುತ್ತಾರೆ. ಈಗ 166 ಅಡಿ ನೀರು ಸಂಗ್ರಹವಾಗಿದೆ. ಇನ್ನೂ 20 ಅಡಿ ನೀರು ಹರಿದು ಬರುವುದೇ ಎಂಬ ಪ್ರಶ್ನೆ ಉಳಿದಿರುವುದರಿಂದ ಸದ್ಯದ ಸ್ಥಿತಿಯಲ್ಲಿ ಭದ್ರೆ ತಳಮಳ ಸೃಷ್ಟಿಸಿರುವುದಂತೂ ನಿಜ.