ಜಿಲ್ಲೆ

ಮಾನವೀಯ ಸಂಬಂಧ ಇಳಿಮುಖ

ಮರಿದೇವ ಹೂಗಾರ

ಹುಬ್ಬಳ್ಳಿ: ಮನುಷ್ಯನಿಗೆ ಸಂಬಂಧ ಮತ್ತು ಮಾನವೀಯತೆ ಮುಖ್ಯ. ಮಕ್ಕಳಿಗೆ ನೈತಿಕತೆ ಹಾಗೂ ಮಾನವೀಯ ಸಂಬಂಧ ಕಲಿಸಬೇಕು. ಈಗೀಗ ಹಣ ಗಳಿಸುವುದು, ಪ್ರತಿಷ್ಠೆ ಹೆಚ್ಚಾಗಿದೆ. ಮಾನವೀಯ ಸಂಬಂಧ ಮತ್ತು ಆತ್ಮಸಾಕ್ಷಿ ಕಡಿಮೆಯಾಗುತ್ತಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಪಿ.ಎಫ್. ದೊಡ್ಡಮನಿ ಕಳವಳ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಹಿರಿಯ ನಾಗರಿಕರು ಹಾಗೂ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಇಲ್ಲಿಯ ಸಿದ್ಧಾರೂಢ ಮಠ ಆವರಣದ ಹತ್ತಿಮತ್ತೂರ ಸಭಾ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನೀವು ಇರುವವರೆಗೂ ಆಸ್ತಿಯನ್ನು ಯಾರಿಗೂ ಕೊಡಬೇಡಿ. ವ್ಯಕ್ತಿ ಮೃತಪಟ್ಟ ಬಳಿಕ ಯಾವುದೇ ಆಸ್ತಿ ಇರಲಿ ಅದು ನಿಮ್ಮ ವಾರಾಸುದಾರರಿಗೆ ಹೋಗಲಿದೆ ಎಂಬುವುದನ್ನು ನೆನಪಿಟ್ಟುಕೊಳ್ಳಬೇಕು. ನಿಮ್ಮ ಆಸ್ತಿಗಾದರೂ ನಿಮ್ಮನ್ನು ನೋಡಿಕೊಳ್ಳುತ್ತಾರೆ. ಇಂದಿನ ಪ್ರಕರಣಗಳ ಆಧಾರದ ಮೇಲೆ ಈ ಮಾತನ್ನು ಹೇಳುತ್ತಿದ್ದೇನೆ. ಹಿರಿಯ ನಾಗರಿಕರು ತಮ್ಮ ಮಕ್ಕಳಿಂದ ಜೀವನಾಂಶ ಕೇಳಬಹುದು. ಹಿರಿಯ ನಾಗರಿಕರು ಮೃತಪಟ್ಟ ನಂತರ ಅವರ ಆಸ್ತಿ ಯಾರಿಗೆ ಹೋಗುತ್ತದೆಯೋ ಅವರಿಗೆ ನೊಟಿಸ್ ಜಾರಿ ಮಾಡಿ ಕರೆಯಿಸಲಾಗುತ್ತದೆ ಎಂದರು.

ಹಿರಿಯ ನಾಗರಿಕರ ಇಲಾಖೆ ಜಿಲ್ಲಾಧಿಕಾರಿ ಸವಿತಾ ಕಾಳೆ ಮಾತನಾಡಿ, ಇಲಾಖೆಯಿಂದ ಹತ್ತಾರು ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ. ಇತ್ತೀಚಿನ ವರ್ಷಗಳಲ್ಲಿ ಆಸ್ತಿಗಾಗಿ ತೊಂದರೆ ಕೊಡುವ ಕೆಲಸಗಳು ಆಗುತ್ತಿವೆ. ಸಹಾಯವಾಣಿಗೆ ಕರೆ ಮಾಡಿದರೆ ಕೂಡಲೇ ನಿಮ್ಮ ಸಂಕಷ್ಟಕ್ಕೆ ನೆರವಾಗುತ್ತೇವೆ. ಹಗಲು ಯೋಗಕ್ಷೇಮ ಸೇರಿದಂತೆ ಹಲವು ಯೋಜನೆಗಳಿವೆ. ಮಕ್ಕಳಿಗಾಗಿ ಆಸ್ತಿ ಮಾಡಬೇಡಿ. ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಬೇಕು ಎಂದರು.

ಸಂಘದ ಅಧ್ಯಕ್ಷ ಬಿ.ಎ. ಪಾಟೀಲ ಮಾತನಾಡಿ, ಸಂಘದಲ್ಲಿ ನಿವೃತ್ತ ಅಧಿಕಾರಿಗಳು, ಸಿಬ್ಬಂದಿ ಹಾಗೂ 60 ವರ್ಷ ದಾಟಿದ ಜನಪ್ರತಿನಿಧಿಗಳು ಹಾಗೂ ಸಾಮಾನ್ಯರು ಇದ್ದಾರೆ. ಹಿರಿಯ ನಾಗರಿಕರ ಕಾನೂನು ಬಂದು ಹಲವು ವರ್ಷಗಳಾಗಿವೆ. ಆದರೆ ಅದೆಷ್ಟೋ ಜನರಿಗೆ ಕಾನೂನಿನ ಅರಿವಿಲ್ಲ. ಈ ಕಾರ್ಯವನ್ನು ನಮ್ಮ ಸಂಘ ಮಾಡುತ್ತಿದೆ. ಅಗತ್ಯ ಕಾನೂನಿನ ಮಾಹಿತಿ ನೀಡಲು ಹಿರಿಯ ವಕೀಲರು, ಕಾನೂನು ಸೇವ ಪ್ರಾಧಿಕಾರವಿದೆ. 18 ವರ್ಷಗಳ ಹಿಂದೆ 165 ಸದಸ್ಯರಿಂದ ಆರಂಭವಾದ ಸಂಘವಿಂದು 1.20 ಲಕ್ಷ ಸದಸ್ಯರನ್ನು ಹೊಂದಿದೆ. ನಮ್ಮ ಸಂಘದ ಕಾರ್ಯಕ್ರಮಗಳನ್ನು ರಾಷ್ಟ್ರೀಯ ಸಂಘ ಅಳವಡಿಸಿಕೊಂಡಿದೆ. ಅಂತಾರಾಷ್ಟ್ರೀಯ ಸಂಘದ ಸದಸ್ಯತ್ವವನ್ನು ಹೊಂದಿದೆ. ನಮ್ಮ ಬೇಡಿಕೆ ಈಡೇರಿಕೆಗೆ ಈಗ ಹೋರಾಟವೊಂದೆ ನಮ್ಮ ಮುಂದಿದೆ ಎಂದರು.

ಮಹಾವೀರ ಲಿಂಬ್ ಸೆಂಟರ್ ಅಧ್ಯಕ್ಷ ಮಹೇಂದ್ರ ಸಿಂಘಿ, ಶ್ರೀ ಸಿದ್ಧಾರೂಢ ಟ್ರಸ್ಟ್ ಕಮಿಟಿ ಚೇರ್ಮನ್ ಚನ್ನವೀರ ಮುಂಗರವಾಡಿ, ಸಂಘದ ಪದಾಧಿಕಾರಿಗಳಾದ ಡಾ. ಸ್ವಾಮಿ ಕಮಲ ಮನೋಹರ, ಡಾ. ಲಿಂಗರಾಜ ಅಂಗಡಿ, ಧರಣೇಂದ್ರ ಜವಳಿ, ಡಾ. ಸುನಂದಾ ಬೆನ್ನೂರ, ಡಿ.ಟಿ. ಪಾಟೀಲ, ಎಂ.ಪಿ. ಕುಂಬಾರ, ಹೇಮಗಿರಿ ಪಟ್ಟಣಶೆಟ್ಟಿ, ಈರಣ್ಣ ಕಾಡಪ್ಪನವರ ಇತರರು ಇದ್ದರು.