ಸಿದ್ದಾಪುರ: ಬೆಳೆ ಸಾಲ ವಿತರಣೆಗೆ ಸಂಬಂಧಿಸಿ ಕೇಂದ್ರ ಸರ್ಕಾರದಿಂದ ಜಿಲ್ಲಾ ಸಹಕಾರ ಬ್ಯಾಂಕುಗಳಿಗೆ ಆರ್ಥಿಕ ನೆರವು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಇದರಿಂದ ಸಹಕಾರ ಸಂಘ ಸಂಸ್ಥೆಗಳಿಗೆ ತೊಂದರೆಯಾಗುತ್ತಿದೆ ಎಂದು ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ, ಶಾಸಕ ಶಿವರಾಮ ಹೆಬ್ಬಾರ ಆಕ್ಷೇಪ ವ್ಯಕ್ತಪಡಿಸಿದರು.
ತಾಲೂಕಿನ ಕಂಚಿಕೈ ಸೇವಾ ಸಹಕಾರಿ ಸಂಘದ ಮೊದಲನೇ ಮಹಡಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಿಯಮ ಪ್ರಕಾರ ಬೆಳೆ ಸಾಲದ ಶೇ.50ರಷ್ಟು ಮೊತ್ತವನ್ನು ಕೇಂದ್ರ ಸರ್ಕಾರ, ನಬಾರ್ಡ್ ಸಂಸ್ಥೆ ನೀಡಬೇಕಾಗಿದೆ. ಆದರೆ, ಈ ಪ್ರಮಾಣ ಕಡಿಮೆಯಾಗುತ್ತ ಬಂದಿದ್ದು ಶೇ. 20ಕ್ಕೆ ಕುಸಿದಂತಾಗಿದೆ ಎಂದರು.
ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಪ್ರಸಕ್ತ ಮಳೆಗಾಲದಲ್ಲಿ ಅಡಕೆ ಕೊಳೆ ರೋಗದಿಂದ ಅಪಾರ ಹಾನಿ ಅನುಭವಿಸಿದ ರೈತರಿಗೆ ಆರ್ಥಿಕ ನೆರವು ಮತ್ತು ಎಲೆ ಚುಕ್ಕೆ ರೋಗ ನಿಯಂತ್ರಣ ವಿಧಾನ ಸಂಶೋಧನೆಗೆ ಸರ್ಕಾರದ ಮಟ್ಟದಲ್ಲಿ ತೀವ್ರ ಪ್ರಯತ್ನ ನಡೆಸುತ್ತಿರುವುದಾಗಿ ತಿಳಿಸಿದರು.
ಟಿಎಂಎಸ್ ಅಧ್ಯಕ್ಷ ಆರ್. ಎಂ. ಹೆಗಡೆ, ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ರಾಘವೇಂದ್ರ ಶಾಸ್ತ್ರಿ ಮಾತನಾಡಿದರು.
ಗ್ರಾಪಂ ಅಧ್ಯಕ್ಷ ರಾಜಾರಾಮ ಹೆಗಡೆ, ರಾಘವೇಂದ್ರ ಹೆಗಡೆ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಅಜಿತ ಶಿರಹಟ್ಟಿ, ಕೆಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ ಭಟ್ಟ ಇತರರು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮೋಹನ ಮಡಿವಾಳ, ಮುಖ್ಯ ಕಾರ್ಯನಿರ್ವಾಹಕ ರಮೇಶ ಹೆಗಡೆ ಪಾಲ್ಗೊಂಡರು. ಗಣೇಶ ಭಟ್ಟ ವಂದಿಸಿದರು.