ಡಿ.ಎಲ್.ಅಶೋಕ್ ಕುಮಾರ್ 
ಜಿಲ್ಲೆ

ಮಲೆನಾಡು ಜಿಲ್ಲೆಗಳನ್ನು ಅತಿವೃಷ್ಟಿ ಪ್ರದೇಶವೆಂದು ಘೋಷಿಸಿ

ಮೂಡಿಗೆರೆ: ಕಾಡುಪ್ರಾಣಿ, ಕಾಡಾನೆಗಳ ಕಾಟ,ಅತಿವೃಷ್ಟಿ ಯಿಂದ ರೈತರು ಶೇ.60 ರಷ್ಟು ಬೆಳೆ ಕಳೆದುಕೊಂಡಿದ್ದಾರೆ. ಭೂ ಕುಸಿತದಿಂದ ಜಮೀನು ಕಳೆದುಕೊಂಡ ರೈತರು ಸಾಮೂಹಿಕವಾಗಿ ನಿರಾಶ್ರೀತರಾಗಿದ್ದು, ರಾಜ್ಯ ಸರ್ಕಾರ ಮಲೆನಾಡು ಭಾಗದ ಜಿಲ್ಲೆಗಳನ್ನು ಅತಿವೃಷ್ಟಿ ಪ್ರದೇಶ ಘೋಷಿಸಿ ಪರಿಹಾರ ನೀಡುವ ಜತೆಗೆ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು ಎಂದು ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಡಿ.ಎಲ್.ಅಶೋಕ್ ಕುಮಾರ್ ಒತ್ತಾಯಿಸಿದರು.
ಹವಾಮಾನ ಆಧಾರಿತ ತೋಟಗಾರಿಕಾ ಬೆಳೆಗಳಿಗೆ ಪಹಣಿಯಲ್ಲಿ ಬೆಳೆಕಾಲಂ ನಮೂದಿಸದೆ ಬೆಳೆ ವಿಮೆಯಿಂದ ರೈತರು ವಂಚಿತರಾಗಿದ್ದಾರೆ. ಬೆಳೆವಿಮೆ ಮಾಡಿಸಲು ಆ.16 ರವರೆಗೆ ಸರ್ಕಾರ ಅವಧಿ ವಿಸ್ತರಿಸಿದರೂ ಶೇ.40 ರಷ್ಟು ರೈತರ ಪಹಣಿಯಲ್ಲಿ ಬೆಳೆ ಕಾಲಂ ನಮೂದಾಗದ ಕಾರಣ ವಿಮೆ ಮಾಡಿಸಲು ಸಾಧ್ಯವಾಗುತ್ತಿಲ್ಲ. ರೈತರು ಮುಂದಿನ ವರ್ಷದ ಫಸಲಿಗಾಗಿ ಪ್ರತಿ ಎಕರೆಗೆ ಒಂದು ಲಕ್ಷಕ್ಕಿಂತ ಹೆಚ್ಚು ಹಣ ವ್ಯಯಿಸಿದ್ದಾರೆ. ಚಂಡಮಾರುತದಿಂದ ರೈತರ ಈ ವರ್ಷದ ಶ್ರಮ ವ್ಯರ್ಥವಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾಡಾನೆ ಸೇರಿದಂತೆ ಇತರೆ ಕಾಡು ಪ್ರಾಣಿಗಳು ಆಗಾಗ ಕಾಫಿ ತೋಟಕ್ಕೆ ಲಗ್ಗೆಯಿಟ್ಟು ಕಾಫಿ, ಅಡಕೆ, ಕಾಳುಮೆಣಸು ಹಾಗೂ ಭತ್ತದ ಬೆಳೆ ನಾಶ ಮಾಡುತ್ತಿದೆ. ಮಳೆ ಹೆಚ್ಚಾಗಿ ಜಮೀನಿನಲ್ಲಿ ಭೂ ಕುಸಿತ, ತೋಟದಲ್ಲಿ ಮರ ಬಿದ್ದು ಬೆಳೆ ಹಾನಿ ಮಾತ್ರವಲ್ಲದೆ ಕಾಫಿ, ಅಡಕೆ, ಕಾಳುಮೆಣಸಿನ ಶೇ.60ರಷ್ಟು ಬೆಳೆ ನೆಲಕಚ್ಚಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಜಮೀನು ಮತ್ತು ಬೆಳೆ ಹಾನಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಸರ್ಫೇಸಿ ಕಾಯ್ದೆಯಿಂದ ಕೃಷಿಯನ್ನು ಹೊರಗಿಡಬೇಕು ಆಗ್ರಹಿಸಿದರು. ಕೃಷಿಕ ಸಮಾಜದ ಸದಸ್ಯ ಎಚ್.ಬಿ.ಜಗನ್ನಾಥ ಗೌಡ ಇದ್ದರು.