ಶಿಕಾರಿಪುರದಲ್ಲಿ ಬಿಜೆಪಿ ರೈತ ಮೋರ್ಚಾ, ಮಂಡಲದ ಪದಾಧಿಕಾರಿಗಳು ಶಾಸಕ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ಕೆ.ಎಸ್.ಗುರುಮೂರ್ತಿ, ಗಾಯತ್ರಿದೇವಿ, ಪ್ರೇಮ್‌ಕುಮಾರ್ ಗೌಡ, ವೀರೇಂದ್ರ ಪಾಟೀಲ್, ಸಂಕ್ಲಾಪುರ ಹನುಮಂತಪ್ಪ ಇತರರಿದ್ದರು. 
ಜಿಲ್ಲೆ

ಶಿಕಾರಿಪುರ ತಾಲೂಕನ್ನು ಬರಪೀಡಿತ ಎಂದು ಘೋಷಿಸಿ; ಶಾಸಕ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಪ್ರತಿಭಟನೆ

ಶಿಕಾರಿಪುರ: ಬರದಿಂದ ತತ್ತರಿಸಿ ಹೋಗಿರುವ ಶಿಕಾರಿಪುರ ತಾಲೂಕನ್ನು ಬರಗಾಲ ಪೀಡಿತ ತಾಲೂಕು ಎಂದು ಘೋಷಿಸಬೇಕು. ಶಾಶ್ವತ ನೀರಾವರಿ ಯೋಜನೆ ಮೂಲಕ ಕೆರೆ ತುಂಬಿಸಲು ಮತ್ತು ರೈತರ ಐಪಿ ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಸಬೇಕು. ರೈತರಿಗೆ ಮಧ್ಯಂತರ ಬೆಳೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ರೈತ ಮೋರ್ಚಾ, ಮಂಡಲ ಪದಾಧಿಕಾರಿಗಳು ಶಾಸಕ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಬಿ.ವೈ.ವಿಜಯೇಂದ್ರ ಮಾತನಾಡಿ, ಒಂದು ಕಾಲದಲ್ಲಿ ಭತ್ತದ ಕಣಜವಾಗಿದ್ದ ಶಿಕಾರಿಪುರ ತಾಲೂಕು ಬರಗಾಲ ಮತ್ತು ಪ್ರಕೃತಿ ವ್ಯತ್ಯಯಗಳಿಂದ ಇಂದು ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಮೆಕ್ಕೆಜೋಳ ಬೆಳೆಯುವ ತಾಲೂಕು ಆಗಿದೆ. ಈಗ ಸಕಾಲದಲ್ಲಿ ಮಳೆ ಬಾರದೆ ಇರುವುದರಿಂದ 25,000 ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 15,000 ಹೆಕ್ಟೇರ್‌ನಷ್ಟು ಮೆಕ್ಕೆಜೋಳ ಹಾಳಾಗಿದೆ. ಇದೇ ರೀತಿ ಪರಿಸ್ಥಿತಿ ಮುಂದುವರಿದರೆ ಉಳಿದ ಬೆಳೆ ಹಾಳಾದರೂ ನಾವು ಆಶ್ಚರ್ಯ ಪಡಬೇಕಾಗಿಲ್ಲ. ತಕ್ಷಣ ಹಾಳಾದ ಬೆಳೆಗೆ ಸರ್ಕಾರ ಮಧ್ಯಂತರ ಬೆಳೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ತಾಲೂಕಿನ ಅಂಜನಾಪುರ ಜಲಾಶಯ ಮತ್ತು ಅಂಬ್ಲಿಗೊಳ ಜಲಾಶಯದ ಅಚ್ಚುಕಟ್ಟು ಪ್ರದೇಶಗಳಲ್ಲಿ ಈ ಸಮಯಕ್ಕೆ ಹೆಚ್ಚು ಕಡಿಮೆ 13,000ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬಿತ್ತನೆ, ನಾಟಿ ಕಾರ್ಯ ಮುಗಿಯುತ್ತಿತ್ತು. ಆದರೆ ಈ ಬಾರಿ ಶೇ.84 ಮಳೆಯ ಕೊರತೆಯ ಕಾರಣದಿಂದ ಕೇವಲ 7,000 ಹೆಕ್ಟೇರ್‌ನಷ್ಟು ಬಿತ್ತನೆ, ನಾಟಿ ಆಗಿದೆ. ಇದರಿಂದ ಸಹಜವಾಗಿ ರೈತರಲ್ಲಿ ಆತಂಕವುಂಟಾಗಿದೆ ಎಂದರು.
ಮಳೆಗಾಲದ ಕೊರತೆಯಿಂದ ರೈತರ ಐಪಿ ಸೆಟ್‌ಗಳಿಗೆ ಸಮರ್ಪಕವಾದ ವಿದ್ಯುತ್ ಸಬರಾಜು ಆಗದೇ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ರೈತರ ಐಪಿ ಸೆಟ್‌ಗಳಿಗೆ ನಿರಂತರ 8 ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡಬೇಕು ಎಂದು ಆಗ್ರಹಿಸಿದರು.
ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ರೈತ ಮೋರ್ಚಾ ಅಧ್ಯಕ್ಷ ಪ್ರೇಮ್‌ಕುಮಾರ್ ಗೌಡ, ತಾಲೂಕು ಅಧ್ಯಕ್ಷ ವೀರೇಂದ್ರ ಪಾಟೀಲ್, ಕಾರ್ಯದರ್ಶಿ ಸಂಕ್ಲಾಪುರ ಹನುಮಂತಪ್ಪ, ನಗರಾಧ್ಯಕ್ಷ ಟಿ.ಎಸ್.ಮೋಹನ್, ಪುರಸಭೆ ಸದಸ್ಯ ಪ್ರಶಾಂತ್ ಜೀನಳ್ಳಿ, ಬಿಜೆಪಿ ಯುವ ಘಟಕ ನಗರಾಧ್ಯಕ್ಷ ಪ್ರವೀಣ್, ಪ್ರಮುಖರಾದ ಸಿದ್ಲಿಂಗಪ್ಪ, ಕೆ.ಹಾಲಪ್ಪ ಕೊಳಗಿ, ರೇವಣಪ್ಪ, ,ಅಗಡಿ ಅಶೋಕ್, ಎಚ್.ಟಿ.ಬಳಿಗಾರ್ ಮಿಲಿಟರಿ ಬಸವರಾಜ್, ಬೆಣ್ಣೆ ವೀರನಗೌಡ, ಧಾರವಾಡ ಗಿರೀಶ್, ಗಾಯತ್ರಿದೇವಿ ಮಲ್ಲಪ್ಪ, ನಿವೇದಿತಾ ರಾಜು ಇತರರಿದ್ದರು.

ಕೆರೆ ತುಂಬಿಸಲು ಆಗುತ್ತಿಲ್ಲ
ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ರೈತರ ಅನುಕೂಲಕ್ಕಾಗಿ ಶಾಶ್ವತ ನೀರಾವರಿ ಯೋಜನೆಗೆ ಅನುದಾನ ನೀಡಿ ತಾಲೂಕಿನ ಕೆರೆಗಳನ್ನು ತುಂಬಿಸುವ ಯೋಜನೆಗೆ ಚಾಲನೆ ನೀಡಿದ್ದರು. ವಿದ್ಯುತ್ ಕೊರತೆಯಿಂದ ಸಕಾಲಕ್ಕೆ ಕೆರೆಗಳನ್ನು ತುಂಬಿಸಲು ಆಗುತ್ತಿಲ್ಲ. ಉಡುಗಣಿ, ತಾಳಗುಂದ, ಹೊಸೂರು ಹೋಬಳಿಗೆ ಏತ ನೀರಾವರಿ ಯೋಜನೆಯ ಮೂಲಕ ಕೆರೆಗಳನ್ನು ತುಂಬಿಸಲು ರಾಣೆಬೆನ್ನೂರು 220/11 ಸ್ಟೇಷನ್‌ನಿಂದ ಸಮರ್ಪಕ ವಿದ್ಯುತ್ ಪೂರೈಸಬೇಕು ಎಂದು ವಿಜಯೇಂದ್ರ ಆಗ್ರಹಿಸಿದರು. ಕಸಬಾ, ಕೊಪ್ಪದ ಕೆರೆ, ಸನ್ಯಾಸಿಕೊಪ್ಪ, ಗುಡ್ಡದ ತುಮ್ಮಿನಕಟ್ಟೆ ಏತ ನೀರಾವರಿ ಯೋಜನೆ ಮೂಲಕ ಕೆರೆ ತುಂಬಿಸಲು ಸಮರ್ಪಕ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಆದ್ದರಿಂದ ಕೆರೆಗಳನ್ನು ತುಂಬಿಸಲು ಆಗುತ್ತಿಲ್ಲ ಎಂದು ದೂರಿದರು.