ಹುಣಸೂರು: ರಾಜ್ಯದಲ್ಲಿರುವ ನೈಜ ದುರ್ಬಲ ಬುಡಕಟ್ಟುಗಳು ಮತ್ತು ಅರಣ್ಯ ಆಧಾರಿತ ಮೂಲನಿವಾಸಿಗಳನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಲೆಮಾರಿ ಪಟ್ಟಿಯಿಂದ ಕೈಬಿಟ್ಟು ಅವರನ್ನು ಆದಿವಾಸಿಗಳೆಂದು ಸರ್ಕಾರ ಘೋಷಿಸುವಂತೆ ಒತ್ತಾಯಿಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ಕಾನೂನು ಸೇವಾ ಸಮಿತಿಯ ಮಾಜಿ ಸದಸ್ಯ ಹಾಗೂ ಹಿರಿಯ ಆದಿವಾಸಿ ನೇತಾರ ವಿಠಲ್ ನಾಣಾಚ್ಚಿ ತಿಳಿಸಿದ್ದಾರೆ.
ಬೆಂಗಳೂರಿನ ನ್ಯಾಷನಲ್ ಲಾ ಕಾಲೇಜಿನಲ್ಲಿ ಇತ್ತೀಚೆಗೆ ಕರ್ನಾಟಕ ನೈಜ ದುರ್ಬಲ ಬುಡಕಟ್ಟು ಹಾಗೂ ಅರಣ್ಯ ಆಧಾರಿತ ಮೂಲ ಆದಿವಾಸಿ ಸಮುದಾಯಗಳ ಸಂಘಟನೆ ವತಿಯಿಂದ ಆಯೋಜಿಸಿದ್ದ ಒಂದು ದಿನದ ಚಿಂತನ-ಮಂಥನ ಸಭೆಯಲ್ಲಿ ಅರಣ್ಯವಾಸಿ ಬುಡಕಟ್ಟುಗಳ ರಾಜ್ಯ ಸಂಚಾಲಕ ಹನೂರು ಮುತ್ತಯ್ಯ ನೇತೃತ್ವದಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಮುಖ್ಯವಾಗಿ ರಾಜ್ಯದಲ್ಲಿರುವ ನೈಜ ದುರ್ಬಲ ಬುಡಕಟ್ಟುಗಳಾದ ಜೇನು ಕುರುಬ, ಕೊರಗ ಹಾಗೂ ಅರಣ್ಯ ಅಧಾರಿತ ಮೂಲ ಆದಿವಾಸಿ ಬುಡಕಟ್ಟುಗಳಾದ ಇರುಳಿಗ, ಸೋಲಿಗ, ಹಸಲರು, ಗೌಡಲು, ಸಿದ್ದಿ, ಬೆಟ್ಟಕುರುಬ ಮಲೆಕುಡಿಯ, ಕುಡಿಯ, ಯರವ ಮತ್ತು ಪಣಿಯನ್ ಆದಿವಾಸಿಗಳನ್ನು ತಕ್ಷಣವೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಲೆಮಾರಿ ಪಟ್ಟಿಯಿಂದ ಕೈಬಿಡಬೇಕು ಹಾಗೂ ಆದಿವಾಸಿ ಎಂದು ಸರ್ಕಾರ ಘೋಷಿಸುವಂತೆ ನಿರ್ಣಯಿಸಲಾಗಿದೆ. ಕರ್ನಾಟಕ ಆದಿವಾಸಿ ಅಭಿವೃದ್ಧಿ ಮಂಡಳಿ ಸ್ಥಾಪಿಸಿ ಸ್ವಾಯತ್ತ ಸಂಸ್ಥೆಯಾಗಿ ರೂಪಿಸಿ ಪ್ರತ್ಯೇಕ ಅನುದಾನ ನಿಗದಿ ಮಾಡಬೇಕು. ಸರ್ಕಾರಿ ಶಾಸನಬದ್ಧ ಸಂಸ್ಥೆಗಳಲ್ಲಿ ಈ ಎಲ್ಲ 12 ಆದಿವಾಸಿ ಸಮುದಾಯಗಳಿಗೆ ಪ್ರಾತಿನಿಧ್ಯ ಕಲ್ಪಿಸಿ ಆಡಳಿತ ಸಹಭಾಗಿತ್ವ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕದಲ್ಲಿರುವ ಆಶ್ರಮ ಶಾಲೆಗಳಲ್ಲಿ ಆದಿವಾಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಸಂರಕ್ಷಣೆ ಇಲ್ಲದೆ ನಿರಂತರವಾಗಿ ಹಲವಾರು ಸಾವು-ನೋವುಗಳು ಸಂಭವಿಸುತ್ತಿವೆ. ಈ ಬಗ್ಗೆ ಕೂಡಲೇ ಸರ್ಕಾರ ಗಂಭೀರವಾಗಿ ಪರಿಗಣಿಸಿ ಆದಿವಾಸಿ ಬುಡಕಟ್ಟು ಆಶ್ರಮ ಶಾಲೆಗಳ ಪರಿಣಾಮಕಾರಿ ಶಿಕ್ಷಣದ ಮಾದರಿ ಕುರಿತು ಅಧ್ಯಯನ ನಡೆಸಲು ಕ್ರಮ ಕೈಗೊಳ್ಳಬೇಕು. ತಕ್ಷಣ ಆಶ್ರಮ ಶಾಲೆಗಳ ಶಿಕ್ಷಣವನ್ನು ಪಿಯುಸಿಯವರೆಗೆ ಮೇಲ್ದರ್ಜೆಗೇರಿಸಬೇಕು. ಈ ಶಾಲೆಗಳಲ್ಲಿ ದಶಕಗಳಿಂದ ಖಾಲಿ ಉಳಿದಿರುವ ಎಲ್ಲ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ಹುದ್ದೆಗಳನ್ನು ವೃಂದ ಬಲ ನೇಮಕಾತಿ ಪ್ರಕಾರ ಭರ್ತಿ ಮಾಡಬೇಕು. ಸರ್ಕಾರದ ಪರಿಶಿಷ್ಟ ಜಾತಿ ಇಲಾಖೆಯ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಈ ಕುರಿತು ಗಮನಸೆಳೆಯಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಹುಣಸೂರು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕೊಳವಿಗೆ ಜಯಪ್ಪ, ಎಚ್.ಡಿ.ಕೋಟೆ ಗಣೇಶ್, ಚಿಕ್ಕಬೊಮ್ಮ, ಶೈಲೇಂದ್ರ ಸೇರಿದಂತೆ ರಾಜ್ಯ ಹಲವು ಭಾಗಗಳಿಂದ ಆದಿವಾಸಿ ಮುಖಂಡರು ಇದ್ದರು.