ಅಳ್ನಾವರ: ತಾಲೂಕನ್ನು ಬರಪೀಡಿತವೆಂದು ಘೊಷಿಸಬೇಕು ಎಂದು ಒತ್ತಾಯಿಸಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಸೋಮವಾರ ರಾಜ್ಯ ಸರ್ಕಾರದ ವಿರುದ್ಧ ಘೊಷಣೆ ಕೂಗಿ ಕೆಲಕಾಲ ಪ್ರತಿಭಟನೆ ನಡೆಸಿದರು.
ರೈತ ಮುಖಂಡ ಶಿವಾಜಿ ಡೊಳ್ಳಿನ ಮಾತನಾಡಿ, ತಾಲೂಕಿನಲ್ಲಿ ಮಳೆಯಿಲ್ಲದೆ ಬೆಳೆಗಳು ಸಂಪೂರ್ಣ ಹಾಳಾಗಿವೆ. ಇತ್ತೀಚೆಗೆ ರಾಜ್ಯ ಸರ್ಕಾರ ಬಿಡುಗಡೆಗೊಳಿಸಿರುವ ಬರ ಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಅಕ್ಕಪಕ್ಕದ ತಾಲೂಕುಗಳ ಹೆಸರಿವೆ. ಆದರೆ, ಅಳ್ನಾವರ ತಾಲೂಕಿನ ಹೆಸರು ಇಲ್ಲದಿರುವುದು ಕಳವಳಕಾರಿ ಸಂಗತಿಯಾಗಿದೆ. ಒಂದು ವಾರದೊಳಗೆ ಬರ ಪೀಡಿತವೆಂದು ಘೊಷಣೆ ಮಾಡದಿದ್ದರೆ ಶಾಸಕರ ಮನೆ ಮುಂದೆ ಧರಣಿ ನಡೆಸಲಾಗುವುದು ಎಂದರು.
ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ ಮಾತನಾಡಿ, ಬರ ಪರಿಸ್ಥಿತಿ ಬಗ್ಗೆ ವಿನಾಕಾರಣ ಅಧಿಕಾರಿಗಳ ಮೇಲೆ ಗೂಬೆ ಕೂರಿಸುತ್ತಿರುವ ಕ್ಷೇತ್ರದ ಶಾಸಕ, ಸಚಿವರಾದವರು ರೈತರ ಬಗ್ಗೆ ಕಾಳಜಿ ತೋರದೆ ಮನೋರಂಜನೆ ಕಾರ್ಯಕ್ರಮ ಏರ್ಪಡಿಸುತ್ತ ಕಾಲಹರಣ ಮಾಡುತ್ತಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರ ರೈತರಿಗೆ ನೀಡುತ್ತಿದ್ದ 4 ಸಾವಿರ ರೂಪಾಯಿ ಸಹಾಯಧನ ಹಾಗೂ ರೈತ ಮಕ್ಕಳ ವಿದ್ಯಾನಿಧಿಯನ್ನು ಸ್ಥಗಿತಗೊಳಿಸಲಾಗಿದೆ. ಕಾಂಗ್ರೆಸ್ ಸರ್ಕಾರಕ್ಕೆ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ನಿಭಾಯಿಸಲು ಆಗದೆ ವಿಶ್ವದ ಪ್ರಭಾವಿ ವ್ಯಕ್ತಿ ಎನಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಸುಳ್ಳು ಆರೋಪ ಮಾಡುತ್ತಿದೆ. ರೈತ ಹಾಗೂ ಜನ ವಿರೋಧಿ ನೀತಿ ಅನುಸರಿಸುತ್ತಿರುವ ರಾಜ್ಯ ಸರ್ಕಾರ ಅವಲೋಕನ ಮಾಡಿಕೊಳ್ಳಬೇಕು ಎಂದರು.