ಹರೀಶ್ 
ಜಿಲ್ಲೆ

ತುರ್ತು ಕಾಮಗಾರಿ ಸ್ಥಗಿತಗೊಳಿಸಲು ನಿರ್ಧಾರ

ಜಿ.ಹೆಚ್. ಧನ್ಯಕುಮಾರ್

ಚಿಕ್ಕಮಗಳೂರು: ಮೆಸ್ಕಾಂ ನಿಂದ ತುರ್ತು ವಿದ್ಯುತ್ ಕಾಮಗಾರಿ ನಿರ್ವಹಿಸಲು ಶೇ. 45ರಷ್ಟು ನಿಗದಿಪಡಿಸಿದ್ದ ಎಸ್‌ಆರ್ ದರವನ್ನು ಶೇ.12 ಕ್ಕೆ ಇಳಿಸಿರುವ ಸರ್ಕಾರದ ನಿರ್ಧಾರ ವಿರೋಧಿಸಿ ತುರ್ತು ಕಾಮಗಾರಿಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಆರ್.ಹರೀಶ್ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಾದ್ಯಂತ ಗಾಳಿ-ಮಳೆ ಬರುವ ಸಂದರ್ಭದಲ್ಲಿ ವಿದ್ಯುತ್ ಕಂಬಗಳು ಹಾನಿಯಾಗಿ ಮುರಿದು ಬಿದ್ದಾಗ ಇದರ ದುರಸ್ತಿಗೆ ಎಸ್‌ಆರ್ ದರದಂತೆ ಪ್ರತಿ ಕಂಬಕ್ಕೆ 6 ಸಾವಿರ ರೂ.ಗಳನ್ನು ನೀಡುತ್ತಿದ್ದರು. ಈಗ ಅದನ್ನು ಮೂರು ಸಾವಿರ ರೂ.ಗೆ ಇಳಿಸಿರುವ ಸರ್ಕಾರದ ಕ್ರಮ ವಿರೋಧಿಸಿ ನಿನ್ನೆಯಿಂದ ಬ್ರೇಕ್‌ಡೌನ್ ಕಾಮಗಾರಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ ಎಂದರು.
ಹಿಂದೆ ಇದೇ ಕಾಮಗಾರಿಗೆ 6000 ಸಾವಿರ ರೂ.ಗಳನ್ನು ನೀಡುತ್ತಿದ್ದು, ಈಗ ವಿದ್ಯುತ್ ಕಂಬ ಮುರಿದುಬಿದ್ದ ತುರ್ತು ಕಾಮಗಾರಿ ಕೈಗೊಳ್ಳಲು ಸರ್ಕಾರ 3000 ರೂ. ನಿಗದಿಪಡಿಸಿದೆ. ಆದರೆ ಕಾರ್ಮಿಕರ ವೇತನವೂ ಹೆಚ್ಚಳವಾಗಿದ್ದು, ಗುತ್ತಿಗೆದಾರರು ನಷ್ಟ ಅನುಭವಿಸುವಂತಾಗಿದೆ. ಹೀಗಾಗಿ ಕೂಡಲೇ ಹಿಂದಿನ ಎಸ್‌ಆರ್ ದರಂದತೆ ಬಿಲ್ ಪಾವತಿಸಬೇಕು ಎಂದು ಒತ್ತಾಯಿಸಿದರು.
ಈ ಸಂಬಂಧ ಎಲ್ಲ ಗುತ್ತಿಗೆದಾರರಿಗೆ ಆಗುತ್ತಿರುವ ತೊಂದರೆ ನೀಗಿಸುವಂತೆ ಸಚಿವರಿಗೆ ಮನವಿ ನೀಡಿ 15 ದಿನಗಳ ಕಾಲಾವಕಾಶ ನೀಡಲಾಗಿತ್ತು. ಆದರೆ ಇದೂವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಬ್ರೇಕ್‌ಡೌನ್ ಕಾಮಗಾರಿಗಳನ್ನು ಸ್ಥಗಿತಗೊಳಿಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ಮಲೆನಾಡು ಭಾಗದಲ್ಲಿ ಮಳೆಗಾಲದ ಸಂದರ್ಭದಲ್ಲಿ ವಿದ್ಯುತ್ ಕಂಬಗಳು ಮುರಿದು ಬೀಳುತ್ತಿದ್ದು, ವಿದ್ಯುತ್ ಗುತ್ತಿಗೆದಾರರು ಕಾಮಗಾರಿ ನಿರ್ವಹಿಸಿ ಗ್ರಾಹಕರಿಗೆ ವಿದ್ಯುತ್ ಸಂಪರ್ಕ ನೀಡಲು ನೆರವಾಗುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಗುತ್ತಿಗೆದಾರರು ಸ್ವಂತ ನಿರ್ವಹಣೆಯಲ್ಲಿ ಐಪಿ ಸೆಟ್ ಕಾಮಗಾರಿಗಳಿಗೆ 4 ಸ್ಟಾರ್ ಪರಿವರ್ತಕಗಳನ್ನು ಅಳವಡಿಸಲು ನಿರ್ದೇಶನವಿದ್ದರೂ ಅಧಿಕಾರಿಗಳು 5 ಸ್ಟಾರ್ ಪರಿವರ್ತಕಗಳನ್ನು ಅಳವಡಿಸಬೇಕು ಎಂದು ಒತ್ತಾಯಿಸುತ್ತಾರೆ ಎಂದು ದೂರಿದರು.
ಹಿಂದಿನ ಎಸ್‌ಆರ್ ದರದಂತೆ ಪ್ರತಿ ಕಂಬ ದುರಸ್ತಿಗೆ 6000 ರೂಗಳನ್ನು ನೀಡುವುದಾಗಿ ಅದೇಶಿಸುವವರೆಗೆ ಬ್ರೇಕ್‌ಡೌನ್ ಕಾಮಗಾರಿಗಳನ್ನು ನಡೆಸುವುದಿಲ್ಲ ಎಂದು ಸಂಘ ತೀರ್ಮಾನಿಸಿರುವುದಾಗಿ ಹೇಳಿದರು.
ಕೇಂದ್ರ ಸಮಿತಿ ಕಾರ್ಯಕಾರಿ ಸಮಿತಿ ಸದಸ್ಯ ಎಂ.ರಮೇಶ್, ಜಿಲ್ಲಾ ಗೌರವ ಸಂಘಟನಾ ಕಾರ್ಯದರ್ಶಿ ಕೆ.ಎಸ್.ಕಾಂತಕುಮಾರ್, ಶಶಿ, ಕಾಂತರಾಜ್, ಸಮೀರ್ ಮತ್ತಿತರರಿದ್ದರು.