ಜಿಲ್ಲೆ

ಸಮಗ್ರ ನೀರಾವರಿ ಪ್ರಸ್ತಾವನೆ ಸಲ್ಲಿಸಲು ನಿರ್ಧಾರ : ಸಂಸದ ಜಿ.ಎಸ್.ಬಸವರಾಜು

ತುಮಕೂರು: ಹೇಮಾವತಿ ನದಿ ನೀರನ್ನು ಇಸ್ರೇಲ್ ಮಾದರಿ ಮೈಕ್ರೋ ಇರಿಗೇಷನ್ ಮೂಲಕ ಮತ್ತು ಕೆರೆಗಳಿಗೆ ನದಿ ನೀರು ತರುವ ಯೋಜನೆಯ ಪ್ರಸ್ತಾವನೆ ತಯಾರಿಸಲು ಕಾವೇರಿ ನೀರಾವರಿ ನಿಗಮ ಮುಂದಾಗಿದೆ ಎಂದು ಸಂಸದ ಜಿ.ಎಸ್.ಬಸವರಾಜು ಹೇಳಿದರು.

ಬೆಂಗಳೂರಿ ನ ಎತ್ತಿನಹೊಳೆ ಮುಖ್ಯ ಇಂಜಿನಿಯರ್ ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ತುಮಕೂರು ವಿವಿ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠದ ತಾಂತ್ರಿಕ ಸಮಿತಿ ಸಭೆಯಲ್ಲಿ ಮಾತನಾಡಿದರು.

ಕೇಂದ್ರ ಸರ್ಕಾರಕ್ಕೆ ಜಿಲ್ಲೆಯ ಸಮಗ್ರ ನೀರಾವರಿ ಪ್ರಸ್ತಾವನೆ ಸಲ್ಲಿಸಲು ಉದ್ದೇಶವಿದ್ದು, ತುಮಕೂರು ವಿವಿ ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ ಇದಕ್ಕೆ ಸಂಬಂಧಿಸಿದ ವರದಿ ಸಿದ್ಧಪಡಿಸಬೇಕು ಎಂದು ಮನವಿ ಮಾಡಿದರು.

ಕೇಂದ್ರ ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ನೀರು ಸರಬರಾಜು ಮಾಡುವ ಯೋಜನೆಯ ಪ್ರಸ್ತಾವನೆಯನ್ನು ಗ್ರಾಮೀಣ ಕುಡಿಯುವ ನೀರಿನ ಇಲಾಖೆ ತಯಾರಿಸಲು ಮುಂದಾಗಿದೆ ಎಂದರು.

ತುಮಕೂರು ಜಿಲ್ಲೆಯ ವಾಟರ್ ಬಜೆಟ್, ವಾಟರ್ ಆಡಿಟ್ ಮತ್ತು ವಾಟರ್ ಸ್ಟ್ರಾಟಜಿಯನ್ನು ಜಲಗ್ರಾಮ ಕ್ಯಾಲೆಂಡರ್ ಮೂಲಕ ಅಟಲ್‌ಭೂಜಲ್ ಯೋಜನೆ ಮತ್ತು ಜಲಾಮೃತ, ಅಂತರ್ಜಲ ಚೇತನ ಯೋಜನೆಗಳು ಸೇರಿ ಕನ್ವರ್ಜೆನ್ಸ್ ಯೋಜನೆಯ ಪ್ರಸ್ತಾವನೆಯನ್ನು ಸಣ್ಣ ನೀರಾವರಿ ಇಲಾಖೆ ತಯಾರಿಸಲಿದೆ ಎಂದರು. ಕೆಐಡಿಬಿ, ಜಿಲ್ಲಾಪಂಚಾಯಿತಿ, ಜಿಲ್ಲಾ ನಗರಾಭಿವೃದ್ಧಿ ಕೋಶ ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠ ಪರೀಶಿಲಿಸಿ ವರದಿ ನೀಡಲಿ ಎಂದು ಸಲಹೆ ನೀಡಿದರು.

ಜಿ.ಎಸ್.ಪರಮಶಿವಯ್ಯ ಅಧ್ಯಯನ ಪೀಠದ ತಾಂತ್ರಿಕ ಸಮಿತಿ ನಿರ್ದೇಶಕ ಕೆ.ಜೈಪ್ರಕಾಶ್ ಮಾತನಾಡಿ, ದೇಶದಲ್ಲಿಯೇ ವಿನೂತನವಾದ ಸಮಗ್ರ ನೀರಾವರಿ ಯೋಜನೆಯ ಪ್ರಸ್ತಾವನೆಯನ್ನು ತುಮಕೂರು ಜಿಲ್ಲೆಯಲ್ಲಿ ತಯಾರಿಸಲಾಗುತ್ತಿದೆ ಎಂದರು.

ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಅಧ್ಯಕ್ಷ ಕುಂದರನಹಳ್ಳಿ ರಮೇಶ್, ನಿವೃತ್ತ ಮುಖ್ಯ ಇಂಜಿನಿಯರ್ ಹರೀಶ್ ಸೇರಿ ವಿವಿಧ ಇಲಾಖೆ ಅಧಿಕಾರಿಗಳು, ತಜ್ಞರು ಭಾಗವಹಿಸಿದ್ದರು.