ಧಾರವಾಡ: ದೆಹಲಿಯಲ್ಲಿ ಹೋರಾಟ ಕೈಗೊಂಡಿರುವ ರೈತ ನಾಯಕರು ಮಾ. 21ರಂದು ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಪೂರ್ವಭಾವಿ ಸಭೆ ಜರುಗಿತು.
ಕೇಂದ್ರ ಸರ್ಕಾರದ ಕೃಷಿ ನೀತಿ ವಿರೋಧಿಸಿ ರೈತ ಹಿತರಕ್ಷಣಾ ಪರಿವಾರ ಸಮಿತಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಂಡಿರುವ ನಿರಂತರ ಧರಣಿ ಸ್ಥಳದಲ್ಲಿ ಸಭೆ ಜರುಗಿಸಿ, ಅಂದಿನ ರೈತ ಮುಖಂಡರ ಭೇಟಿಯ ಸಭೆಯನ್ನು ಯಶಸ್ವಿಗೊಳಿಸಲು ತೀಮಾನಿಸಲಾಯಿತು.
21ರಂದು ಸಂಜೆ 5.30ಕ್ಕೆ ಕಲಘಟಗಿ ಟೋಲ್ ನಾಕಾ ಬಳಿ ಸಂಯುಕ್ತ ರೈತ ಮೋರ್ಚಾದ ರಾಕೇಶಸಿಂಗ್ ಟಿಕಾಯತ್, ದರ್ಶನ ಪೌಲ್, ಯದುವೀರಸಿಂಗ್ ಯಾದವ್ ಅವರನ್ನು ಸ್ವಾಗತಿಸುವುದು. ಅಲ್ಲಿಂದ ಸತ್ಯಾಗ್ರಹ ಸ್ಥಳಕ್ಕೆ ಕರೆತಂದು ಸಭೆ ಜರುಗಿಸಲು ತೀಮಾನಿಸಲಾಯಿತು.
ರೈತ ಹಿತರಕ್ಷಣಾ ಪರಿವಾರದ ಸಂಚಾಲಕ ಪಿ.ಎಚ್. ನೀರಲಕೇರಿ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನಾದ ಉತ್ತರ ಕರ್ನಾಟಕ ಗೌರವಾಧ್ಯಕ್ಷ ಶಶಿಕಾಂತ ಪಡಸಲಗಿ, ಕಾಂಗ್ರೆಸ್ ಮುಖಂಡ ಶಾಕೀರ ಸನದಿ, ಕರ್ನಾಟಕ ರೈತ ಸೇನಾ ಅಧ್ಯಕ್ಷ ಶಂಕರಪ್ಪ ಅಂಬಲಿ, ಜಿಲ್ಲಾ ಸಂಯುಕ್ತ ಜನತಾ ದಳ ಅಧ್ಯಕ್ಷ ಶ್ರೀಶೈಲಗೌಡ ಕಮತರ, ಭಾರತೀಯ ಕೃಷಿಕ ಸಮಾಜದ ಜಿಲ್ಲಾ ಅಧ್ಯಕ್ಷ ವಿನೋದಕುಮಾರ ಪಾಟೀಲ, ಸಿದ್ದಣ್ಣ ಕಂಬಾರ, ಪಿ.ಎಸ್. ಪತ್ರಾವಳಿ, ಡಾ. ವೆಂಕನಗೌಡ ಪಾಟೀಲ, ಸಲೀಂ ಸಂಗನಮಲ್ಲ, ಫಿರೋಜಖಾನ ಹವಾಲ್ದಾರ, ಬಸಪ್ಪ ಬೆಳ್ಳಿಗಟ್ಟಿ, ಇತರರಿದ್ದರು.