ಜಿಲ್ಲೆ

ಜೂ. 5ರಂದು ಧರಣಿ ನಡೆಸಲು ನಿರ್ಧಾರ

ವೀರೇಶ ಸೌದ್ರಿ

ಬ್ಯಾಡಗಿ: ಪಟ್ಟಣದ ಮುಖ್ಯರಸ್ತೆ ವಿಸ್ತರಣೆ ಕಾಮಗಾರಿ ವಿಳಂಬ ಖಂಡಿಸಿ ಜೂ. 5ರಂದು ಪಟ್ಟಣದ ಸುಭಾಸ್ ಸರ್ಕಲ್ ಹಾಗೂ ಹಳೇಪುರಸಭೆ ರಸ್ತೆಯಲ್ಲಿ ಗುಂಡಿ ತೆಗೆಯುವ ಮೂಲಕ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.

ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮುಖ್ಯರಸ್ತೆ ಅಗಲೀಕರಣ ಸಮಿತಿ ಆಶ್ರಯದಲ್ಲಿ ಭಾನುವಾರ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ವಿವಿಧ ಸಂಘ, ಸಂಸ್ಥೆಗಳು ಹಾಗೂ ಸಾರ್ವಜನಿಕರು ಹೋರಾಟಕ್ಕೆ ಸಹಕಾರ ನೀಡುವುದಾಗಿ ತಿಳಿಸಿದರು.

ಪುರಸಭೆ ಅಧ್ಯಕ್ಷ ಬಾಲಚಂದ್ರಗೌಡ ಪಾಟೀಲ ಮಾತನಾಡಿ, ಅಂತಾರಾಷ್ಟ್ರೀಯ ಮಾರುಕಟ್ಟೆ ಖ್ಯಾತಿಯ ಪಟ್ಟಣದಲ್ಲಿ ಸುಸಜ್ಜಿತ ರಸ್ತೆ ಇಲ್ಲದಿರುವುದು ಸಮಸ್ಯೆ ತಂದೊಡ್ಡಿದೆ. ಈ ಕುರಿತು ಹೋರಾಟಗಾರರು ಹಾಗೂ ಸಾರ್ವಜನಿಕರು ಹಲವು ವರ್ಷಗಳಿಂದ ರಸ್ತೆ ಕಾಮಗಾರಿಗೆ ಒತ್ತಾಯಿಸುತ್ತಲೇ ಬಂದಿದ್ದಾರೆ. ಆದರೆ, ಅಧಿಕಾರಿಗಳ ಎಡವಟ್ಟಿನಿಂದ ರಸ್ತೆ ಕಾಮಗಾರಿಗೆ ಚಾಲನೆ ಸಿಕ್ಕಿಲ್ಲ. ಸಾರ್ವಜನಿಕರ ಹಿತ ಕಾಯಲು ಪಟ್ಟಣದ ಎಲ್ಲ ಸಂಘ, ಸಂಸ್ಥೆಗಳು ಹಾಗೂ ಜನಪ್ರನಿಧಿಗಳು ಬದ್ಧರಾಗಿದ್ದಾರೆ. ಇದಕ್ಕೆ ಎಲ್ಲರ ಸಹಕಾರದ ಕೊರತೆಯಿಂದ ಕಾರ್ಯವಾಗುತ್ತಿಲ್ಲ. ಈ ಕುರಿತು ಸರ್ಕಾರಕ್ಕೆ ಒತ್ತಾಯಿಸಲು ಜೂ. 5 ರಂದು ತೀವ್ರ ಹೋರಾಟ ನಡೆಸಲು ನಿರ್ಧರಿಸಿದ್ದಾರೆ. ಪ್ರತಿಯೊಬ್ಬರೂ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಹಾವೇರಿ ಕೆಎಂಎಫ್ ನಿರ್ದೇಶಕ ಪ್ರಕಾಶ ಬನ್ನಿಹಟ್ಟಿ, ಪುರಸಭೆ ಉಪಾಧ್ಯಕ್ಷ ಸುಭಾಸ್ ಮಾಳಗಿ, ಸದಸ್ಯ ಬಸವರಾಜ ಛತ್ರದ, ಎಂ.ಎಸ್. ಪಾಟೀಲ, ನಿಂಗಪ್ಪ ಬಟ್ಟಲಕಟ್ಟಿ, ಬಸವರಾಜ ಸಂಕಣ್ಣನವರ, ಸುರೇಶ ಮೇಲಗಿರಿ ಅಭಿಪ್ರಾಯ ವ್ಯಕ್ತಪಡಿಸಿದರು.

ಬಿಜೆಪಿ ತಾಲೂಕಾಧ್ಯಕ್ಷ ಶಿವಯೋಗಿ ಶಿರೂರ, ವರ್ತಕರ ಸಂಘದ ಕಾರ್ಯದರ್ಶಿ ರಾಜು ಮೋರಗೇರಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ರಾಜು ಶಿಡೇನೂರ, ವಿಜಯ ಭರತ್ ಬಳ್ಳಾರಿ, ರಸ್ತೆ ಹೋರಾಟ ಸಮಿತಿ ಅಧ್ಯಕ್ಷ ಸುರೇಶ ಛಲವಾದಿ, ಬಸವರಾಜ ಸಂಕಣ್ಣನವರ, ಸಂಜೀವ ಮಡಿವಾಳರ, ಚಿಕ್ಕಪ್ಪ ಛತ್ರದ, ಈಶ್ವರ ಮಠದ, ಶಿವು ಕಲ್ಲಾಪುರ, ಜಗದೀಶ ಪಾಟೀಲ ಇದ್ದರು.