ಜಿಲ್ಲೆ

ರಾಷ್ಟ್ರ ವ್ಯಾಪಿ ಆಂದೋಲನ ನಡೆಸಲು ತೀರ್ಮಾನ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಉದ್ಯಮಿ ಗೌತಮ ಅದಾನಿ ಹಾಗೂ ಅವರ ಕಂಪನಿಗಳು ನಡೆಸಿರುವ ಭ್ರಷ್ಟಾಚಾರ, ಹಗರಣ ವಿಷಯದಲ್ಲಿ ಅಮೆರಿಕ ತೆಗೆದುಕೊಂಡ ನಿರ್ಧಾರ ಸ್ವಾಗತಾರ್ಹ. ಕೇಂದ್ರ ಸರ್ಕಾರ ಸಹ ಅವರ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು. ಈ ವಿಷಯವಾಗಿ ರಾಷ್ಟ್ರವ್ಯಾಪಿ ಆಂದೋಲನ ನಡೆಸಲಾಗುವುದು ಎಂದು ಸಿಟಿಜನ್ಸ್​ ಫಾರ್​ ಡೆಮೊಕ್ರಸಿ ಅಧ್ಯಕ್ಷ ಎಸ್​.ಆರ್​. ಹಿರೇಮಠ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲೆಕ್ಟ್ರೋಲ್​ ಬಾಂಡ್​ಗಳ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದಂತೆ ಈ ವಿಷಯದಲ್ಲೂ ಕ್ರಮಕೈಗೊಳ್ಳಬೇಕು. ಗೌತಮ ಅದಾನಿ ಭ್ರಷ್ಟಾಚಾರಗಳನ್ನು ನಿಯಂತ್ರಿಸಲು ಇಂತಹ ಕಠಿಣ ಕ್ರಮಗಳು ಅಗತ್ಯವಾಗಿವೆ ಎಂದರು.

ಗೌತಮ ಅದಾನಿ ಪ್ರಕರಣ ಕುರಿತು ಇನ್ನು ಕೆಲ ದಿನಗಳಲ್ಲೇ ದೆಹಲಿಯಲ್ಲಿ ರಾಷ್ಟ್ರ ಮಟ್ಟದ ಸಭೆ ನಡೆಸಲಾಗುವುದು. ಅಲ್ಲಿ ಸಮಗ್ರ ಚರ್ಚೆ ನಡೆಸಿ ಆಂದೋಲನದ ರೂಪು ರೇಷೆಗಳನ್ನು ಸಿದ್ಧಪಡಿಸಲಾಗುವುದು. ಈ ಹಗರಣವನ್ನು ತಾರ್ಕಿಕ ಅಂತ್ಯಕ್ಕೆ ತಲುಪಿಸುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದರು.

ಉತ್ತರ ಕರ್ನಾಟಕದ ಆಮ್ಲಜನಕದ ಭಂಡಾರವಾಗಿರುವ ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ನಡೆಸಲು ಸಲ್ಲಿಕೆಯಾಗಿರುವ 28 ಪ್ರಸ್ತಾವಗಳನ್ನು ಶಾಶ್ವತವಾಗಿ ರದ್ದುಪಡಿಸಬೇಕು. ಸರ್ಕಾರ ಕಪ್ಪತಗುಡ್ಡದಲ್ಲಿ ಗಣಿಕಾರಿಗೆ ನಡೆಸಲು ಅನುಮತಿ ನೀಡುವುದಿಲ್ಲ ಎಂದು ಹೇಳಿತ್ತು. ಆದರೆ ಸರ್ಕಾರಕ್ಕೆ ಸಲ್ಲಿಕೆಯಾದ ಪ್ರಸ್ತಾವಗಳಿಗೆ ಒಪ್ಪಿಗೆ ನೀಡುವ ಕಸರತ್ತು ನಡೆದಿದೆ. ಹೀಗಾಗಿ ಹೋರಾಟ ನಡಸಲಾಗುವುದು ಎಂದರು.

ಅರಣ್ಯ ಪ್ರದೇಶದಲ್ಲಿ ಹೊರತೆಗೆಯುವ ಕಬ್ಬಿಣ ಅದಿರನ್ನು ಅರಣ್ಯೇತರ ಉತ್ಪನ್ನ ಎಂದು ವರ್ಗೀಕರಿಸಬೇಕೆಂಬ ಕಾನೂನು ತಿದ್ದುಪಡಿ ಹಾಗೂ ಜೀವ ವೈವಿಧ್ಯತೆ ಮತ್ತು ವನ್ಯ ಜೀವಿಧಾಮ ಪ್ರದೇಶಗಳನ್ನು ಹೊರತುಪಡಿಸಿ ರಾಜ್ಯಾದ್ಯಂತ ಕಬ್ಬಿಣ ಮತ್ತು ಮ್ಯಾಂಗನೀಸ್​ ಅದಿರನ್ನು ಸಾಗಣೆ ಮಾಡಲು ದಿನದ 24 ಗಂಟೆಯೂ ಅನುಮತಿ ನೀಡುವ ವಿಷಯವಾಗಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ಸರ್ಕಾರಕ್ಕೆ ಟಿಪ್ಪಣಿ ಸಲ್ಲಿಸಿದ್ದಾರೆ. ಈ ಪ್ರಸ್ತಾವಗಳನ್ನು ಶಾಶ್ವತವಾಗಿ ತಿರಸ್ಕರಿಸಬೇಕು ಎಂದು ಆಗ್ರಹಿಸಿದರು.

ಲಕ್ಷ್ಮಣ ಬಕ್ಕಾಯಿ, ಶಮೀನ್​ ಮುಲ್ಲಾ, ಮಲ್ಲಿಕಾರ್ಜುನ ಹಾವೇರಿ, ಇತರರು ಇದ್ದರು.