ದೊಡ್ಡತುಮಕೂರಿನಲ್ಲಿ ಅರ್ಕಾವತಿ ನದಿ ಪಾತ್ರದ ಕೆರೆ ಸಂರಕ್ಷಣಾ ಸಮಿತಿ ಜತೆಗೆ ತಹಸೀಲ್ದಾರ್​ ವಿಭಾವಿದ್ಯಾರಾಠೋಡ್​, ಇನ್​ಸ್ಪೆಕ್ಟರ್​ ಸಾದಿಕ್​ ಪಾಷಾ ಮಾತುಕತೆ ನಡೆಸಿದರು. ಮುಖಂಡರಾದ ವಸಂತ್​, ವಿಜಯ್​ ಕುಮಾರ್​, ಸತೀಶ್​, ರಾಮಕೃಷ್ಣಪ್ಪ, ಮಂಜುನಾಥ್​ ಹಾಗೂ ದೊಡ್ಡತುಮಕೂರು ಮತ್ತು ಮಜರಾಹೊಸಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರಿದ್ದರು. 
ಜಿಲ್ಲೆ

ನಾಳೆ ಕಪ್ಪುಬಾವುಟ ಹಾರಿಸಲು ತೀರ್ಮಾನ

ದೊಡ್ಡಬಳ್ಳಾಪುರ : ಕೈಗಾರಿಕೆಗಳ ತ್ಯಾಜ್ಯ ಹರಿದು ಕೆರೆಗಳು ಕಲುಷಿತವಾಗಿದೆ, ಅಂತರ್ಜಲ ವಿಷವಾಗಿದೆ, ಹಾಲಿ ಶುದ್ಧೀಕರಣ ಟಕದ ನೀರು ಬಳಕೆಗೆ ಯೋಗ್ಯವಲ್ಲ ಎಂಬ ವರದಿ ಬಂದಿದೆ. ಶುದ್ಧ ನೀರಿಗಾಗಿ ಆಗ್ರಹಿಸಿ ಹೋರಾಟ ಮಾಡುತ್ತಿರುವ ಅರ್ಕಾವತಿ ನದಿ ಹೋರಾಟ ಸಮಿತಿಯ ಕಾರ್ಯಕರ್ತರು ಸ್ವಾತಂತ್ಯ ದಿನದಂದು ಕಪ್ಪು ಬಾವುಟ ಹಾರಿಸಲು ತೀರ್ಮಾನ ಮಾಡಿದ್ದಾರೆ.

ಮಜರಾಹೊಸಹಳ್ಳಿ ಮತ್ತು ದೊಡ್ಡತುಮಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 17 ಗ್ರಾಮಗಳ ಗ್ರಾಮಸ್ಥರೊಂದಿಗೆ ಸಭೆ ನಡೆಸಲು ತಹಸೀಲ್ದಾರ್​ ವಿಭಾ ವಿದ್ಯಾ ರಾಥೋಡ್​, ಗ್ರಾಮಾಂತರ ಪೊಲೀಸ್​ ಇನ್​ಸ್ಪೆಕ್ಟರ್​ ಸಾದಿಕ್​ ಪಾಷ, ದೊಡ್ಡತುಮಕೂರು ಗ್ರಾಮಕ್ಕೆ ಭೇಟಿ ನೀಡಿ ಹೋರಾಟ ನಿರತ ರೈತರ ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ ಒಪ್ಪದ ಹೋರಾಟಗಾರರು, ಗ್ರಾಮಸ್ಥರು, ನಾವು ಎರಡು ಬಾರಿ ಚುನಾವಣೆ ಬಹಿಷ್ಕಾರ ಮಾಡಿದ್ದೆವು, ಅಧಿಕಾರಿಗಳ ಆಶ್ವಾಸನೆ ಮಾತು ನಂಬಿ ಹೋರಾಟದಿಂದ ಹಿಂದೆ ಸರಿದಿದ್ದೆವು. ಆದರೆ, ಬೇಡಿಕೆ ಈಡೇರಿಲ್ಲ. ನಾವು ಸಾವು ಬದುಕಿನ ನಡುವೆ ಬದುಕುವಂತಾಗಿದೆ, ನಮಗೆ ಶುದ್ಧ ಪರಿಸರ ಮತ್ತು ನೀರು ಕೊಡದ ಹೊರತು ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದರು. ಕಪ್ಪು ಬಾವುಟ ಹಾರಿಸೋದು ಬೇಡವೆಂದಾದರೆ, ನಮ್ಮಿಂದ ದಯಾಮರಣ ಅರ್ಜಿ ಸ್ವೀಕರಿಸಿ ಎಂದರು.

ಅರ್ಜಿ ಸ್ವೀಕರಿಸಲು ಅಧಿಕಾರಿಗಳು ನಿರಾಕರಿಸಿದರು. ಹೋರಾಟ ಸಮಿತಿಯ ಗೌರವಾಧ್ಯಕ್ಷ ಡಾ.ಟಿ.ಎಚ್​.ಆಂಜಿನಪ್ಪ ಸೇರಿ ಹೋರಾಟಗಾರರು ಅಧಿಕಾರಿಗಳ ಮುಂದೆ ಬೇಡಿಕೆಯನ್ನಿಟ್ಟು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಲಿಖಿತ ಭರವಸೆ ನೀಡಬೇಕು. ಇಲ್ಲವೆಂದರೆ ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ, ಕಪ್ಪು ಬಾವುಟ ಹಾರಿಸೋದು ಖಚಿತ ಎಂದರು. ಅಧಿಕಾರಿಗಳು ಬರಿಗೈಲಿ ವಾಪಸ್​ ತೆರಳಿದರು.