ಶಿರಸಿ: ಕೆಡಿಸಿಸಿ ಬ್ಯಾಂಕ್ ಪ್ರಗತಿಯಲ್ಲಿ ದಾಪುಗಾಲು ಇಡುತ್ತಿದೆ. ಸದಸ್ಯರಿಗೆ ನೀಡುವ ಡಿವಿಡೆಂಡ್ ಅನ್ನು ಈ ಬಾರಿ ಶೇ.8ಕ್ಕೇರಿಸಲು ನಿರ್ಧರಿಸಲಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ್ ಹೇಳಿದರು.
ಬ್ಯಾಂಕ್ನ ಸಭಾಂಗಣದಲ್ಲಿ ಶನಿವಾರ ನಡೆದ 104ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.
ಸದಸ್ಯರಾದ ಎನ್.ಬಿ. ಹೆಗಡೆ ಮತ್ತಿಹಳ್ಳಿ ಹಾಗೂ ಇತರರು ಸಭೆಯಲ್ಲಿ ಮಾತನಾಡಿ, ಕೆಡಿಸಿಸಿ ಬ್ಯಾಂಕ್ ಕೃಷಿಯೇತರ ಸಾಲ ನೀಡುವ ಸಲುವಾಗಿ ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳಿಗೆ ಶೇ. 12ರ ಬಡ್ಡಿದರದಲ್ಲಿ ಸಾಲ ಒದಗಿಸುತ್ತಿದೆ. ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳು ಈ ಹಣವನ್ನು ಶೇ. 14ರ ಬಡ್ಡಿದರದಲ್ಲಿ ಸಣ್ಣ ಉದ್ದಿಮೆದಾರರು, ಕೃಷಿಯೇತರ ಸಾಲ ಪಡೆಯುವವರಿಗೆ ನೀಡುತ್ತಿವೆ. ಆದರೆ, ಈ ಹಣ ಮರುಪಾವತಿ ಕಷ್ಟವಾಗುತ್ತಿರುವ ಸಲುವಾಗಿ ಕೆಡಿಸಿಸಿ ಬ್ಯಾಂಕ್ ನೀಡುವ ಈ ಸಾಲದ ಬಡ್ಡಿಯಲ್ಲಿ ಶೇ. 1ರಷ್ಟು ಇಳಿಕೆ ಮಾಡಬೇಕು ಎಂದು ಆಗ್ರಹಿಸಿದರು. ಈ ಕುರಿತು ಆಡಳಿತ ಮಂಡಳಿ ಸಭೆಯಲ್ಲಿ ರ್ಚಚಿಸಿ ನಿರ್ಧರಿಸಲಾಗುವುದು ಎಂದು ಹೆಬ್ಬಾರ ಉತ್ತರಿಸಿದರು.
ಕೆಡಿಸಿಸಿ ಬ್ಯಾಂಕ್ನ ಸಂಚಾರಿ ಎಟಿಎಂ ಗ್ರಾಮೀಣ ಪ್ರದೇಶದಲ್ಲಿ ಸೌಲಭ್ಯ ಒದಗಿಸುತ್ತಿಲ್ಲ ಎಂಬ ಕುರಿತು ಸಭೆಯಲ್ಲಿ ಪ್ರಸ್ತಾಪವಾದಾಗ ಉತ್ತರಿಸಿದ ವ್ಯವಸ್ಥಾಪಕ ಶ್ರೀಕಾಂತ ಭಟ್, ಗ್ರಾಮೀಣ ಪ್ರದೇಶದಲ್ಲಿ ನೆಟ್ವರ್ಕ್ ಸಮಸ್ಯೆಯಿಂದಾಗಿ ಈ ಸೌಲಭ್ಯ ಒದಗಿಸಲಾಗುತ್ತಿಲ್ಲ. ಕಳೆದ ವರ್ಷ ಮೊಬೈಲ್ ಎಟಿಎಂನಿಂದ 56 ಸಾವಿರ ರೂ. ಲಾಭವಾಗಿದೆ. ಆದರೆ, ನಿರ್ವಹಣೆಗೆ 76 ಸಾವಿರ ರೂ. ಖರ್ಚಾಗಿದೆ. ಆದಾಗ್ಯೂ, ಸೇವೆ ದೃಷ್ಟಿಯಿಂದ ಈ ಸೌಲಭ್ಯ ಮುಂದುವರಿಸುತ್ತಿದ್ದೇವೆ ಎಂದರು.
ಪ್ರಶ್ನೆಗೆ ಉತ್ತರಿಸಿದ ಶಿವರಾಮ ಹೆಬ್ಬಾರ, ಬ್ಯಾಂಕ್ನ 53 ಶಾಖೆಗಳ ಪೈಕಿ ಕೇವಲ 2 ಶಾಖೆಗಳು ಮಾತ್ರ ಹಾನಿ ಅನುಭವಿಸಿವೆ. ಶಿರಸಿಯ ಕೆಎಚ್ಬಿ ಕಾಲನಿ ಶಾಖೆ 8 ಲಕ್ಷ ರೂ., ಕ್ಯಾಸಲ್ರಾಕ್ ಶಾಖೆ 12 ಲಕ್ಷ ರೂ. ಹಾನಿ ಅನುಭವಿಸಿದೆ. ಹಾನಿಯ ಪ್ರಮಾಣ ಕಡಿಮೆ ಇರುವುದರಿಂದ ಮುಂದಿನ ದಿನಗಳಲ್ಲಿ ಲಾಭದೆಡೆ ಸಾಗಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ. ಒಂದೊಮ್ಮೆ ಮತ್ತೂ ಹಾನಿ ಮುಂದುವರಿದರೆ ಆರ್ಬಿಐ ಅನುಮತಿ ಪಡೆದು ಶಾಖೆಯನ್ನು ಅಗತ್ಯ ಇರುವೆಡೆ ಸ್ಥಳಾಂತರಿಸಲಾಗುವುದು ಎಂದರು.
ಕೃಷಿಯೇತರ ಸಾಲ ಜಾಸ್ತಿ ನೀಡುತ್ತಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಶಿವರಾಮ ಹೆಬ್ಬಾರ, ಶೂನ್ಯ ಬಡ್ಡಿದರದ ಸಾಲ ದೊರೆಯಬೇಕೆಂದರೆ ಸದಸ್ಯರು ಪ್ರಾಥಮಿಕ ಸಹಕಾರಿ ಸಂಘದ ಅಡಿಯಲ್ಲೇ ಸಾಲ ಪಡೆದುಕೊಳ್ಳಬೇಕಿರುವುದು ಕಡ್ಡಾಯ. ಇದರ ಹೊರತಾಗಿಯೂ ನೇರವಾಗಿ ಹೈನುಗಾರ ರೈತರಿಗೆ ಸಾಲ ನೀಡಿದ್ದೇವೆ ಎಂದರು.
ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ವೇಳೆ ರೈತರ ಒಂದು ಲಕ್ಷ ರೂ.ವರೆಗಿಗಿನ ಸಾಲ ಮನ್ನಾದ ಲಾಭ ಬಹುತೇಕರಿಗೆ ಸಿಕ್ಕಿದೆ. ಆದರೆ, ಇನ್ನೂ 1796 ರೈತರ ಸಾಲದ ಮೊತ್ತ 5.40 ಕೋಟಿ ರೂ. ಬರಬೇಕಿದೆ ಎಂದರು.
ಉಪಾಧ್ಯಕ್ಷ ಮೋಹನದಾಸ ನಾಯಕ, ಮಾಜಿ ಅಧ್ಯಕ್ಷ ಶ್ರೀಕಾಂತ ಘೊಟ್ನೇಕರ್, ಸುರೇಶ್ಚಂದ್ರ ಹೆಗಡೆ ಕೆಶಿನಮನೆ, ಜಿ.ಆರ್. ಹೆಗಡೆ ಸೋಂದಾ ಇತರರಿದ್ದರು.
ಅಪೆಕ್ಸ್ ಬ್ಯಾಂಕ್ ಬಹುಮಾನಕ್ಕೆ ಆಯ್ಕೆ
ಜಿಲ್ಲೆಯ ಅತ್ಯುತ್ತಮ ಸೇವೆ ಒದಗಿಸಿದ 11 ಪ್ರಾಥಮಿಕ ಪತ್ತಿನ ಸಹಕಾರಿ ಸಂಸ್ಥೆಗಳು ಅಪೆಕ್ಸ್ ಬ್ಯಾಂಕ್ ಬಹುಮಾನಕ್ಕೆ ಆಯ್ಕೆಯಾಗಿವೆ.
ಶಿರಸಿ ತಾಲೂಕಿನ ತೋಟಗಾರ್ಸ್ ರೂರಲ್ ಕೋ ಆಪ್ ಸೊಸೈಟಿ, ಸಿದ್ದಾಪುರ ತಾಲೂಕು ತ್ಯಾಗಲಿ ಸಂಘ, ಯಲ್ಲಾಪುರ ತಾಲೂಕು ಹಾಸಣಗಿ ಸಂಘ, ಜೊಯಿಡಾ ತಾಲೂಕು ಪ್ರಧಾನಿ ಸಂಘ, ಕಾರವಾರ ತಾಲೂಕು ಕಿನ್ನರ ಸಂಘ, ದಾಂಡೇಲಿಯ ದಾಂಡೇಲಪ್ಪ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಂಘ, ಭಟ್ಕಳ ತಾಲೂಕಿನ ಜಾಲಿ ಸಂಘ, ಮುಂಡಗೋಡ ತಾಲೂಕಿನ ಕಾತೂರ ಸಂಘ, ಅಂಕೋಲಾ ತಾಲೂಕು ಬೇಲೇಕೇರಿ ಸಂಘ ಹಾಗೂ ಹೊನ್ನಾವರ ತಾಲೂಕಿನ ಬಳಕೂರ ಸಂಘ ಈ ಬಹುಮಾನಕ್ಕೆ ಆಯ್ಕೆಯಾಗಿವೆ ಎಂದು ಸಭೆಯಲ್ಲಿ ಪ್ರಕಟಿಸಲಾಯಿತು.
ಶಿರಸಿ ತಾಲೂಕಿನ ಕೆಲ ಪ್ರಾಥಮಿಕ ಸಹಕಾರಿ ಸಂಘಗಳು ಹಾದಿತಪ್ಪಿ ಹಾನಿಯ ದಾರಿ ಹಿಡಿದಿವೆ. ಸಹಕಾರಿ ಸಂಘಗಳಲ್ಲಿ ಈ ರೀತಿ ಪ್ರಕರಣಗಳಾದರೆ ಕೆಡಿಸಿಸಿಗೂ ಧಕ್ಕೆ. ಜಿಲ್ಲೆ ಸಹಕಾರಿ ವ್ಯವಸ್ಥೆ ಪ್ರಬಲವಾಗಿದೆ. ಆದರೆ, ಗ್ರಾಮೀಣ ಸಂಘಗಳು ದುರ್ಬಲ ಆದರೆ ಕಷ್ಟ. | ಶಿವರಾಮ ಹೆಬ್ಬಾರ, ಅಧ್ಯಕ್ಷರು, ಕೆಡಿಸಿಸಿ ಬ್ಯಾಂಕ್