ಜಿಲ್ಲೆ

ಕನ್ನಡ ಧ್ವಜ ನಿರಂತರ ಹಾರಾಟಕ್ಕೆ ತೀರ್ಮಾನ


ಹುಬ್ಬಳ್ಳಿ : ರಾಜ್ಯೋತ್ಸವ ಹಿನ್ನೆಲೆಯಲ್ಲಿ ಎಲ್ಲ ವೃತ್ತಗಳನ್ನು ಸ್ವಚ್ಛಗೊಳಿಸಿ, ಅಲಂಕಾರಗೊಳಿಸಲು, ಅವಳಿ ನಗರದ ನಿಗದಿತ ಸ್ಥಳಗಳಲ್ಲಿ ಕಾಯಂ ಆಗಿ ಧ್ವಜ ಕಂಬ ನೆಟ್ಟು, ಕನ್ನಡಧ್ವಜವನ್ನು ನಿರಂತರವಾಗಿ ಹಾರಾಡುವಂತೆ ನೋಡಿಕೊಳ್ಳಲು ಇಲ್ಲಿನ ಪಾಲಿಕೆ ಕಚೇರಿಯಲ್ಲಿ ಮಹಾಪೌರ ರಾಮಪ್ಪ ಬಡಿಗೇರ ಅಧ್ಯಕ್ಷತೆಯಲ್ಲಿ ಶನಿವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿ ತೀರ್ವನಿಸಲಾಯಿತು.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ನ. 1ರಂದು ಕನ್ನಡ ಧ್ವಜಾರೋಹಣ ಹಾಗೂ ರಾಜ್ಯೋತ್ಸವದ ಮೆರವಣಿಗೆ ನಡೆಸಿ, ವೇದಿಕೆ ಕಾರ್ಯಕ್ರಮವನ್ನು ಮತ್ತೊಂದು ದಿನ ನಡೆಸುವ ಬಗ್ಗೆ ಬುಧವಾರದ ಸಭೆಯಲ್ಲಿ ತೀರ್ವನಿಸಲಾಗುವುದು ಎಂದು ಮಹಾಪೌರ ರಾಮಪ್ಪ ಬಡಿಗೇರ ಸಭೆಗೆ ತಿಳಿಸಿದರು.
ವಾಣಿಜ್ಯ ಮಳಿಗೆಗಳಲ್ಲಿನ ನಾಮಫಲಕಗಳಲ್ಲಿ ಶೇ. 60ರಷ್ಟು ಶಬ್ಧ ಕನ್ನಡ ಅಕ್ಷರಗಳಲ್ಲಿ ಇರಬೇಕೆಂಬ ಸರ್ಕಾರದ ನಿಯಮ ಇದೆ. ಈ ನಿಟ್ಟಿನಲ್ಲಿ ಪಾಲಿಕೆ ನಿಗಾವಹಿಸಬೇಕು ಎಂಬ ಸಲಹೆ ಸಭೆಯಲ್ಲಿ ಪಾಲ್ಗೊಂಡಿದ್ದ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳಿಂದ ಕೇಳಿಬಂದಿತು.
ರಾಜ್ಯೋತ್ಸವ ಆಚರಣೆಗಾಗಿ ರಚಿಸಿರುವ ಸಾಂಸ್ಕೃತಿಕ ಮತ್ತು ವೇದಿಕೆ ಸಮಿತಿ, ಉಪಹಾರ ಸಮಿತಿ, ಧೀಮಂತ ಪ್ರಶಸ್ತಿ ಮತ್ತು ಸನ್ಮಾನ ಸಮಿತಿ, ಮೆರವಣಿಗೆ ಸಮಿತಿ ಹಾಗೂ ಕೇಂದ್ರ ಸಮಿತಿಯಲ್ಲಿ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳಿಗೂ ಅವಕಾಶ ನೀಡಬೇಕು. ಧೀಮಂತ ಪ್ರಶಸ್ತಿಗೆ ಕನ್ನಡಪರ ಸಂಘಟನೆಗಳ ಹೋರಾಟಗಾರರನ್ನೂ ಪರಿಗಣಿಸಬೇಕು ಎಂದು ಸಂಘಟನೆಗಳ ಪದಾಧಿಕಾರಿಗಳು ಆಗ್ರಹಿಸಿದರು.
ರಾಜ್ಯೋತ್ಸವ ಮೆರವಣಿಗೆಯಲ್ಲಿ ಬುದ್ಧ, ಬಸವಣ್ಣ, ಡಾ. ಅಂಬೇಡ್ಕರ ಅವರ ಸ್ತಬ್ಧ ಚಿತ್ರಗಳಿಗೆ ಅವಕಾಶ ನೀಡಬೇಕು. ಕನ್ನಡಪರ ಧ್ವಜಗಳಿಗೆ ಕೊರತೆಯಾಗದಂತೆ ಎಚ್ಚರಿಕೆ ವಹಿಸಬೇಕು. ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಸಮರ್ಪಕ ನೀರು, ಹಣ್ಣು, ಉಪಹಾರದ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂಬ ಸಲಹೆ ಕೇಳಿಬಂದವು.
ಡಾ. ದ.ರಾ. ಬೇಂದ್ರೆ, ಡಾ. ಗಂಗೂಬಾಯಿ ಹಾನಗಲ್, ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅವರ ಹೆಸರುಗಳಲ್ಲಿಯೂ ಪ್ರಶಸ್ತಿ ವಿತರಿಸಬೇಕು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದವರು ಸಲಹೆ ನೀಡಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಪ್ರತಿ ವಲಯದಲ್ಲಿ ರಾಜ್ಯೋತ್ಸವ ಆಚರಣೆ ಮಾಡಲಾಗುತ್ತದೆ. ಅದೇ ರೀತಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರತಿ ವಾರ್ಡ್​ನಲ್ಲಿ ರಾಜ್ಯೋತ್ಸವ ಆಚರಣೆ ಮಾಡಬೇಕು. ಅವಳಿ ನಗರದ ವಿವಿಧೆಡೆಯಿಂದ ರಾಜ್ಯೋತ್ಸವ ಮೆರವಣಿಗೆ ಪ್ರಾರಂಭಿಸಬೇಕು ಎಂದು ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಹೇಳಿದರು.
ದಸರಾ ಅಂಗವಾಗಿ ಧಾರವಾಡದಲ್ಲಿ ಆಚರಿಸುವ ಜಂಬೂ ಸವಾರಿಯಲ್ಲಿ ಆನೆಗಳನ್ನು ಮೆರವಣಿಗೆ ಮಾಡಲಾಗುತ್ತದೆ. ಅದೇ ರೀತಿ ರಾಜ್ಯೋತ್ಸವ ಮೆರವಣಿಗೆಯಲ್ಲಿ ಆನೆ, ಕುದುರೆ, ಒಂಟೆಗಳ ಮೆರವಣಿಗೆ ನಡೆಸಬೇಕು ಎಂಬ ಸಲಹೆ ಕೇಳಿಬಂದವು.
ವಿವಿಧ ಕನ್ನಡಪರ ಸಂಘಟನೆಗಳ ಪ್ರಮುಖರಾದ ಶೇಖರಯ್ಯ ಮಠಪತಿ, ಸಂಜೀವ ದುಮ್ಮಕ್ಕನಾಳ, ಎಚ್.ವಿ. ಪಾಟೀಲ, ಸಂಜು ಬುಗಡಿ, ಚನ್ನಬಸಪ್ಪ ಧಾರವಾಡಶೆಟ್ರ, ಉಪ ಮಹಾಪೌರರಾದ ದುರ್ಗಮ್ಮ ಬಿಜವಾಡ, ಪಾಲಿಕೆ ಪ್ರತಿಪಕ್ಷ ನಾಯಕ ರಾಜಶೇಖರ ಕಮತಿ, ಸದಸ್ಯೆ ಸುವರ್ಣ ಕಲಕುಂಟಲ, ಅಧಿಕಾರಿಗಳಾದ ವಿಶ್ವನಾಥ, ಗಿರೀಶ ತಳವಾರ ಹಾಗೂ ಇತರರು ಹಾಜರಿದ್ದರು.