ಯಳಂದೂರು: ತಾಲೂಕು ಆಡಳಿತ ವತಿಯಿಂದ ಏ.30ರಂದು ಬಸವೇಶ್ವರ ಜಯಂತಿ ಹಾಗೂ ಮೇ 4ರಂದು ಮಹರ್ಷಿ ಭಗೀರಥ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಯಿತು.
ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ಸದಸ್ಯರು, ಮುಖಂಡರು, ಯಜಮಾನರು ಭಾಗವಹಿಸಿದ್ದು, ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಲು ಸಭೆ ತೀರ್ಮಾನಿಸಿತು.
ಮೇ 4ರಂದು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಭಗೀರಥ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಯಿತು. ಅಂದು ಬೆಳ್ಳಿ ರಥದಲ್ಲಿ ಭಗೀರಥರ ಭಾವಚಿತ್ರವನ್ನು ವಿವಿಧ ಕಲಾ ತಂಡಗಳೊಂದಿಗೆ ಪಟ್ಟಣದಲ್ಲಿ ಮೆರವಣಿಗೆ ಮಾಡಬೇಕು. 3 ಸಾವಿರ ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು, ಊಟದ ವ್ಯವಸ್ಥೆ ಆಗಬೇಕು. ಈ ಸಂಬಂಧ ಅಧಿಕಾರಿಗಳು, ಶಾಸಕರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ವಹಿಸಬೇಕು. ಎಲ್ಲೂ ಲೋಪವಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಜೆ.ಯೋಗೇಶ್ ಸಭೆಗೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಗ್ರೇಡ್ 2 ತಹಸೀಲ್ದಾರ್ ಶಿವರಾಜು, ಏ.24 ರಂದು ಮಲೆಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು, ಎಲ್ಲ ಅಧಿಕಾರಿಗಳು ಅಲ್ಲಿ ಕಾರ್ಯನಿರತರಾಗಿದ್ದಾರೆ. ಇದಾದ ಬಳಿಕ ಮುಖಂಡರು ಹಾಗೂ ಅಧಿಕಾರಿಗಳ ಸಭೆ ನಡೆಸಿ ಎಲ್ಲ ಸಿದ್ಧೆತಗಳನ್ನು ಮಾಡಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಪಪಂ ಸದಸ್ಯರಾದ ಮಹೇಶ್, ವೈ.ಜಿ.ರಂಗನಾಥ, ಗ್ಯಾರಂಟಿಯೋಜನೆಯ ತಾಲೂಕು ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್, ಜಿಪಂ ಉಪಾಧ್ಯಕ್ಷ ಸಿದ್ದರಾಜು, ತಾಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ವೈ.ಕೆ.ಮೋಳೆ ನಾಗರಾಜು, ಉಪ್ಪಾರ ಸೇನಾ ಸಮಿತಿ ಅಧ್ಯಕ್ಷ ನಾಗೇಶ್, ಪ್ರದೀಪ್, ಸರ್ವೇ ಇಲಾಖೆಯ ಉಮೇಶ್, ರಾಜಸ್ವ ನಿರೀಕ್ಷಕ ಯದುಗಿರಿ, ತೋಟಗಾರಿಕಾ ಇಲಾಖೆಯ ರಾಜು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಲಿಂಗಾಯತ, ಉಪ್ಪಾರ ಸಮಾಜದ ಮುಖಂಡರು, ಯಜಮಾನರು ಭಾಗವಹಿಸಿದ್ದರು.