ಚನ್ನರಾಯಪಟ್ಟಣ ತಾಲೂಕು ಕಚೇರಿಯಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿದರು. 
ಜಿಲ್ಲೆ

ಕೆಂಪೇಗೌಡ ಜಯಂತಿ ಅದ್ದೂರಿ ಆಚರಣೆಗೆ ನಿರ್ಧಾರ

ಚನ್ನರಾಯಪಟ್ಟಣ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲೂಕು ಒಕ್ಕಲಿಗರ ಸಂಘದ ಸಹಯೋಗದೊಂದಿಗೆ ಜೂ.27ರಂದು ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಯಿತು.

ತಾಲೂಕು ಕಚೇರಿಯಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ತಾಲೂಕಿನ ಸಂಘ ಸಂಸ್ಥೆಗಳು, ಎಲ್ಲ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಜಯಂತಿ ಸಂಬಂಧ ಆಗಬೇಕಾಗಿರುವ ಕೆಲಸಗಳು, ಸಮಿತಿಗಳು, ಕಲಾತಂಡಗಳ ಆಯ್ಕೆ, ಮೆರವಣಿಗೆ, ಸನ್ಮಾನಿತರ ಕುರಿತು ಚರ್ಚಿಸಲಾಯಿತು.

ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ತಾಲೂಕು ಕೇಂದ್ರಗಳಲ್ಲಿ ಆಚರಿಸುವ ಕೆಂಪೇಗೌಡ ಜಯಂತಿಗೆ ರಾಜ್ಯ ಒಕ್ಕಲಿಗರ ಸಂಘದಿಂದ 25 ಸಾವಿರ ರೂ. ಹಣವನ್ನು ಪ್ರತಿ ವರ್ಷ ನೀಡಲಾಗುತ್ತಿದ್ದು, ರಾಜ್ಯ ಒಕ್ಕಲಿಗರ ಸಂಘಕ್ಕೆ ಮನವಿ ಸಲ್ಲಿಸುವಂತೆ ತಿಳಿಸಿದರು. ಇದರೊಂದಿಗೆ ಮಂಡ್ಯದಿಂದ ಆಗಮಿಸುವ ವಿಶೇಷ ಕಲಾತಂಡದ ಪ್ರಾಯೋಜಕತ್ವವನ್ನು ನಾನು ವಹಿಸಿಕೊಳ್ಳುತ್ತೇನೆ. ಇನ್ನುಳಿದಂತೆ ಪಟ್ಟಣದ ಎಪಿಎಂಸಿ ಆವರಣದಿಂದ ಕಲಾತಂಡ, ಸ್ತಬ್ಧಚಿತ್ರಗಳ ಮೆರವಣಿಗೆ ತಾಲೂಕು ಕಚೇರಿ ಆವರಣದವರೆಗೆ ಸಾಗಲಿದೆ. ಬೆಳಗ್ಗೆ ತಿಂಡಿ ವ್ಯವಸ್ಥೆ, ಸಿಹಿ ಹಂಚಿಕೆ ಮಾಡಲಾಗುವುದು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 10 ಜನರನ್ನು ಸನ್ಮಾನಿಸಲಾಗುವುದು ಎಂದರು.

ತಾಲೂಕು ಆಡಳಿತದಿಂದ ಆಚರಿಸುವ ಜಯಂತಿಗಳಿಗೆ ತಾಲೂಕು ಮಟ್ಟದ ಅಧಿಕಾರಿಗಳು ಗೈರಾಗುತ್ತಿರುವ ಬಗ್ಗೆ ಸಂಘ, ಸಂಸ್ಥೆಗಳು ಆರೋಪಿಸುತ್ತಿವೆ. ಪ್ರತಿ ಇಲಾಖೆ ಅಧಿಕಾರಿಗಳು ಕೆಂಪೇಗೌಡ ಜಯಂತಿ ಆಚರಣೆಯಲ್ಲಿ ಹಾಜರಿರಬೇಕು. ಎಲ್ಲ ಇಲಾಖೆ ಕಟ್ಟಡಗಳಿಗೆ ವಿದ್ಯುತ್ ದೀಪಲಂಕಾರ ಮಾಡಬೇಕು ಎಂದರು.

ಸಭೆಯಲ್ಲಿ ತಹಸೀಲ್ದಾರ್ ಸಂತೋಷ್ ಕುಮಾರ್, ಶಿರಸ್ತೇದಾರ್ ಅನಿಲ್, ಪುರಸಭೆ ಮುಕ್ಯಾಧಿಕಾರಿ ಆರ್.ಯತೀಶ್ ಕುಮಾರ್, ಉಪಾಧ್ಯಕ್ಷೆ ರಾಣಿ ಕೃಷ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಎ.ಗಣೇಶ್, ತಾಲೂಕು ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಶಿವೇಗೌಡ, ಅಧ್ಯಕ್ಷ ಜಯಪಾಲ್, ಕೆಂಪೇಗೌಡ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಆನಂದ್ ಕಾಳೇನಹಳ್ಳಿ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಹಡೇನಹಳ್ಳಿ ಲೋಕೇಶ್, ಕೆಡಿಪಿ ಸದಸ್ಯ ಮಹೇಶ್ ಕಬ್ಬಾಳು, ರೆಡ್ ಕ್ರಾಸ್ ಸಂಸ್ಥೆಯ ಮುಖ್ಯಸ್ಥ ಎಚ್.ಜಿ.ಭರತ್ ಕುಮಾರ್, ರೈತ ಮುಖಂಡ ರವಿಗೌಡ, ಗುಲಸಿಂದ ಮಹೇಶ್, ಪರಿಸರ ಪ್ರೇಮಿ ಚ.ನಾ.ಅಶೋಕ್, ತಾಲೂಕು ಶಿಕ್ಷಣ ಪರಿವೀಕ್ಷಕ ಕೆ.ಟಿ.ಆನಂದ್ ಹಾಜರಿದ್ದರು.