ತಿ.ನರಸೀಪುರ: ನಾಡು, ನುಡಿ ಏಕೀರಣಗೊಂಡು ಐವತ್ತು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ತಾಲೂಕು ಕೇಂದ್ರವಾದ ಪಟ್ಟಣದಲ್ಲಿ ನ.1 ರಂದು ಸುವರ್ಣ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ನಿರ್ಧರಿಸಲಾಯಿತು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆಯ ಪೂರ್ವಭಾವಿಯಾಗಿ ಕರೆಯಲಾಗಿದ್ದ ಸಭೆಯಲ್ಲಿ ಸಾಂಪ್ರದಾಯಿಕವಾಗಿ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಿ ಮಾತೃಭಾಷೆ ಕನ್ನಡದಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿ ತೇರ್ಗಡೆಯಾಗಿರುವ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸುವುದು, ನಾಡಿಗಾಗಿ ದುಡಿದ ಸಾಧಕರನ್ನು ಸನ್ಮಾನಿಸುವುದು ಹಾಗೂ ವಿಶೇಷ ಕವಿಗೋಷ್ಠಿಯನ್ನು ಆಯೋಜಿಸಲು ತೀರ್ಮಾನಿಸಲಾಯಿತು.
ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್ ಮಾತನಾಡಿ, ವಿಜೃಂಭಣೆಯ ಕನ್ನಡ ರಾಜ್ಯೋತ್ಸವದ ಆಚರಣೆಗೆ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಿದೆ. ಸಭೆಯಲ್ಲಿ ಚರ್ಚೆ ನಡೆಸಿದಂತೆ ನಾಡಿನ ಹಿರಿಮೆಯ ಇತಿಹಾಸವನ್ನು ಪ್ರಸ್ತುತಪಡಿಸುವ ಭಾಷಣಕಾರರನ್ನು ಆಯ್ಕೆ ಮಾಡಿ, ಆಹ್ವಾನಿಸಲಾಗುವುದು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಿ, ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗುವುದು. ಶಿಕ್ಷಣ ಇಲಾಖೆಯ ಜತೆ ಸಮಾಲೋಚನೆ ನಡೆಸಿ ಶ್ರೀಭುವನೇಶ್ವರಿ ಮೆರವಣಿಗೆಯ ಬಗ್ಗೆ ತೀರ್ಮಾನಿಸಿ, ಸಮಾರಂಭಕ್ಕೆ ಮುಖ್ಯಮಂತ್ರಿಗಳು ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಎಲ್ಲ್ಲ ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕನ್ನಡ ಪುಟ್ಟಸ್ವಾಮಿ ಮಾತನಾಡಿ, ರಾಜ್ಯದಾದ್ಯಂತ ಸುವರ್ಣ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡುವಂತೆ ಸರ್ಕಾರವೇ ನಿರ್ಧರಿಸುವುದರಿಂದ ತಾಲೂಕಿನಲ್ಲಿಯೂ ಕನ್ನಡ ರಾಜ್ಯೋತ್ಸವ ಅದ್ದೂರಿಯಾಗಿ ಆಯೋಜನೆಯಾಗಬೇಕು. ಸಿಎಂ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಸದರನ್ನ ಕಾರ್ಯಕ್ರಮಕ್ಕೆ ತಾಲೂಕು ಆಡಳಿತದಿಂದಲೇ ಖುದ್ದಾಗಿ ಆಹ್ವಾನಿಸಬೇಕು. ಸಾಂಪ್ರದಾಯಿಕ ಆಚರಣೆಗೆ ಅಗತ್ಯ ಸಿದ್ಧತೆ ಮಾಡಿಕೊಡಬೇಕು ಎಂದು ತಿಳಿಸಿದರು.
ತಾ.ಪಂ. ಮಾಜಿ ಉಪಾಧ್ಯಕ್ಷ ಬಿ.ಮರಯ್ಯ ಮಾತನಾಡಿ, ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸುವ ಬಗ್ಗೆ ತಹಸೀಲ್ದಾರ್ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ನಾಡು ನುಡಿ ಮತ್ತು ಏಕೀಕರಣದ ಬಗ್ಗೆ ತಿಳಿದಿರುವಂತಹ ವ್ಯಕ್ತಿಗಳನ್ನೇ ಮುಖ್ಯ ಭಾಷಣಕಾರರನ್ನಾಗಿ ಆಹ್ವಾನಿಸಬೇಕು. ಸಾಧ್ಯವಾದರೆ ಗುಂಜ ನರಸಿಂಹಸ್ವಾಮಿ ದೇವಾಲಯದಿಂದ ತಾಲೂಕು ಕಚೇರಿವರೆಗೆ ರಾಜ್ಯೋತ್ಸವದ ಮೆರವಣಿಗೆ ಆಯೋಜಿಸಬೇಕು ಎಂದು ಸಲಹೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದ ಅಧ್ಯಕ್ಷ ಎಂ. ಸಿ.ಮಂಜುಳಾ, ಮುಖಂಡ ಎ ಶಿವಕುಮಾರ್, ಸಿ.ಪುಟ್ಟಮಲ್ಲಯ್ಯ, ತಾ.ಪಂ. ಇಒ ಪಿ.ಎಂ.ಅನಂತರಾಜು, ಪುರಸಭೆ ಮುಖ್ಯಾಧಿಕಾರಿಗಳಾದ ವಸಂತಕುಮಾರಿ, ಹೇಮಂತ್ ರಾಜು, ಎಇಇ ವೀರೇಶ್, ಸಹಾಯಕ ಕೃಷಿ ನಿರ್ದೇಶಕ ಸುಹಾಸಿನಿ, ಸಹಾಯಕ ತೋಟಗಾರಿಕೆ ನಿರ್ದೇಶಕಿ ಶಾಂತಾ, ಸಹಾಯಕ ಅರಣ್ಯಾಧಿಕಾರಿ, ಉಮೇಶ್, ಬಾಬೂಜಿ ಸಂಘದ ಅಧ್ಯಕ್ಷ ಸಿ.ಪುಟ್ಟಯ್ಯ, ಕೆಪಿಸಿಸಿ ಅಲ್ಪಸಂಖ್ಯಾತರ ಸಂಚಾಲಕ ಬಿ.ಮನ್ಸೂರ್ ಆಲಿ, ಕನ್ನಡ ಸಾಹಿತ್ಯ ಪರಿಷತ್ನ ಹೋಬಳಿ ಅಧ್ಯಕ್ಷ ಸಿದ್ದಪ್ಪ, ಯುವಕವಿ ನಂದೀಶ್, ಮುಖಂಡರಾದ ಕೃಷ್ಣಮೂರ್ತಿ, ಮೇಗಡಹಳ್ಳಿ ಪ್ರಭಾಕರ್, ಡಿ.ಮಾದೇಶ್, ಕರುಣೇಶ್, ವಾಟಾಳು ಸಾಗರ್, ಚಿನ್ನಸ್ವಾಮಿ, ಬೈಕ್ ಜಾಫರ್, ಯೋಗಾನಂದ ಹಾಗೂ ಇತರರು ಇದ್ದರು.