ಕೊಳ್ಳೇಗಾಲ: ಕೊಳ್ಳೇಗಾಲದಲ್ಲಿ ಏ.14 ರಂದು ಡಾ.ಬಿ. ಆರ್.ಅಂಬೇಡ್ಕರ್ ಜಯಂತಿಯನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುವುದು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಶುಕ್ರವಾರ ತಾಲೂಕು ಆಡಳಿತ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಅಂಬೇಡ್ಕರ್ ಅವರು ಒಂದು ಸಮುದಾಯದ ಆಸ್ತಿಯಲ್ಲ. ಇಡೀ ದೇಶದ ಆಸ್ತಿ. ಕಾರ್ಯಕ್ರಮ ಅದ್ದೂರಿಯಾಗಿ ಮಾಡಲು ಎಲ್ಲರ ಸಹಕಾರ ಬೇಕು. ಮುಖಂಡರು ಸಲಹೆ ನೀಡಿದಂತೆ ಜಯಂತಿ ಆಚರಣೆಗೆ ಆನೆ ಕರೆತರುವ ವಿಚಾರದಲ್ಲಿ ಸಂಪೂರ್ಣವಾಗಿ ಶ್ರಮವಹಿಸುತ್ತೇನೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಮುಖಂಡ ಶೇಖರ್‌ಬುದ್ಧ ಮಾತನಾಡಿ, ಜಯಂತಿಯಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿ ಮೆರವಣಿಗೆ ಮಾಡಬೇಕು. ಪ್ರಮುಖ ರಸ್ತೆಗಳಿಗೆ ದೀಪಾಲಂಕಾರ, ಕಲಾ ತಂಡಗಳ ಮೆರವಣಿಗೆ, ಪ್ರತಿಭಾ ಪುರಸ್ಕಾರ, ಸ್ತಬ್ಧಚಿತ್ರಗಳ ಮೆರವಣಿಗೆ ನಡೆಸಬೇಕು ಎಂದು ಸಲಹೆ ನೀಡಿದರು.
ಮುಖಂಡ ದಿಲೀಪ್ ಸಿದ್ದಪ್ಪಾಜಿ ಮಾತನಾಡಿ, ಆನೆಯಲ್ಲಿ ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ ಮಾಡಬೇಕು. ಈ ಹಿಂದೆ ಭೀಮನಗರದಲ್ಲಿ ಇದೇ ರೀತಿ ಆಚರಣೆ ನಡೆದಿದೆ. ಜಿಲ್ಲೆಯ ಎಲ್ಲ ಕಲಾತಂಡಗಳು ಭಾಗಿಯಾಗಬೇಕು. ಪಟ್ಟಣದ ಪ್ರಮುಖ ರಸ್ತೆಗಳು ಸೇರಿದಂತೆ ಮುಡಿಗುಂಡದಿಂದ ಸಿದ್ದಯ್ಯಪುರವರೆವಿಗೂ ದೀಪಾಲಂಕಾರ ಮಾಡಬೇಕು. ಎಲ್‌ಇಡಿ ಮೂಲಕ ಸ್ತಬ್ಧಚಿತ್ರಗಳ ಪ್ರದರ್ಶನ ಆಗಬೇಕು. ಪಟ್ಟಣ ಪೂರ್ತಿ ನೀಲಿಮಯ ಆಗಬೇಕೆಂದು ಒತ್ತಾಯಿಸಿದರು.
ಸಿದ್ದಾರ್ಥ್ ಮಾತನಾಡಿ, ಅಂಬೇಡ್ಕರ್ ಜಯಂತಿ ಅದ್ದೂರಿಯಾಗಿ ನಡೆಯಬೇಕು ಎಂದರು. ಕಾರ್ಯಕ್ರಮಕ್ಕೆ ಆನೆಯನ್ನು ಕರೆಸುವ ನಿಟ್ಟಿನಲ್ಲಿ ತಾಲೂಕು ಆಡಳಿತ ಹಾಗೂ ಶಾಸಕರು ಕ್ರಮ ವಹಿಸಬೇಕೆಂದು ಮುಖಂಡರಾದ ನಟರಾಜ್, ಕಿರಣ್ ಹೇಳಿದರು. ಚೇತನ್ ದೊರೈರಾಜ್ ಮಾತನಾಡಿ ಜಯಂತಿ ಅಂಗವಾಗಿ ಮ್ಯಾರಥಾನ್ ಆಯೋಜನೆ ಮಾಡಬೇಕೆಂದರು. ಬಸ್ತೀಪುರ ಪ್ರಕಾಶ್ ಮಾತನಾಡಿ, ಜಯಂತಿ ದಿನದಂದು ಮದ್ಯದಂಗಡಿಗಳು ಬಂದ್ ಆಗಬೇಕೆಂದು ಸಲಹೆ ನೀಡಿದರು. ಶಂಕರ್ ಚೇತನ್ ಮಾತನಾಡಿ, ಮಹನೀಯರ ಜಯಂತಿ ಪೂರ್ವಭಾವಿ ಸಭೆಯನ್ನು ತಡ ಮಾಡದೆ ಸಕಾಲಕ್ಕೆ ಮಾಡಬೇಕೆಂದು ಆಗ್ರಹಿಸಿದರು.
ಅಂಬೇಡ್ಕರ್ ಜಯಂತಿ ಪೂರ್ವಭಾವಿ ಸಭೆ ಮುಂದೂಡಿಕೆ ವಿಚಾರವಾಗಿ ಟೀಕೆಗಳನ್ನು ನನ್ನ ಮೇಲೆ ಮಾಡಲಾಗಿದೆ. ಕಣ್ಣಿನ ಸಮಸ್ಯೆಯಿಂದ ಸಭೆಗೆ ಬರಲು ಸಾಧ್ಯವಾಗಲಿಲ್ಲ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ಕಡಿಮೆ ಸಮಯವಿದ್ದ ಕಾರಣ ತಹಸೀಲ್ದಾರ್‌ಗೆ ಬಾಬು ಜಗಜೀವನ್‌ರಾಮ್ ಜಯಂತಿ ಪೂರ್ವಸಭೆ ಮಾಡಿ ಎಂದು ಹೇಳಿದ್ದೆ. ಏ.14 ರಂದು ಇರುವ ಅಂಬೇಡ್ಕರ್ ಜಯಂತಿ ಪೂರ್ವಭಾವಿ ಸಭೆಗೆ ನಾನು ಇರಬೇಕೆಂದುಕೊಂಡಿದ್ದೆ. ಒಂದು ವೇಳೆ ಸಭೆ ಮಾಡಿದ್ದರೂ ಸಭೆ ತೀರ್ಮಾನಕ್ಕೆ ಬದ್ಧನಾಗುತ್ತಿದೆ. ಸಭೆ ವಿಚಾರದಲ್ಲಿ ಗೊಂದಲವಿಲ್ಲ. ನಾನು ಅಂಬೇಡ್ಕರ್ ರಕ್ತ, ಅಂಬೇಡ್ಕರ್ ವಾದಿ ಎಂದರು.
ಮಧ್ಯಪ್ರವೇಶಿಸಿ ಮಾತನಾಡಲು ಮುಂದಾದ ಶೇಖರ್ ಬುದ್ಧ ಅವರಿಗೆ ನೋ ಕಾಮೆಂಟ್ಸ್ ಎಂದರು. ಮಂಟೇಸ್ವಾಮಿ ಒಕ್ಕಲಿನವರು. ಆದ್ದರಿಂದ ಪತ್ನಿಯೊಂದಿಗೆ ದೇವಸ್ಥಾನಕ್ಕೆ ತೆರಳಿದ್ದೆ ಎಂದರು.
ಭೀಮನಗರದ ಯಜಮಾನ ಚಿಕ್ಕಮಾಳಿಗೆ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಭೀಮ ನಗರದಲ್ಲಿ ಏ.11 ರಿಂದ 14ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜಯಂತಿಯನ್ನು ಎಲ್ಲ ಖಾಸಗಿ ಶಾಲಾ-ಕಾಲೇಜುಗಳಲ್ಲಿ ನಡೆಸಬೇಕೆಂದು ತಾಲೂಕು ಆಡಳಿತ ಸೂಚನೆ ನೀಡಬೇಕು. ಏ.14 ರಂದು ತಾಲೂಕು ಆಡಳಿತ ನಡೆಸುವ ಮೆರವಣಿಗೆ ಕಾರ್ಯಕ್ರಮ ಭೀಮನಗರ ಬಸವನಗುಡಿ ಬೀದಿಯಿಂದ ಆರಂಭ ಮಾಡಬೇಕೆಂದರು.
ಅಲ್ಲದೆ, ಈಗಾಗಲೇ ಅಂಬೇಡ್ಕರ್ ಜಯಂತಿ ಪೂರ್ವಭಾವಿ ಸಭೆಯನ್ನು ತಡವಾಗಿ ಕರೆದಿರುವುದು ಚರ್ಚೆಗೀಡಾಗಿದೆ. ದಲಿತ ಮುಖಂಡರು, ಅಂಬೇಡ್ಕರ್ ಅಭಿಮಾನಿಗಳು, ಅನುಯಾಯಿಗಳು ತಾಲೂಕು ಆಡಳಿತ ಕಾರ್ಯವೈಖರಿ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಗಾಗಿ ತಹಸೀಲ್ದಾರ್ ಬಸವರಾಜು ಅವರು ಸಭೆಯಲ್ಲಿ ಕ್ಷಮೆಯಾಚಿಸ ಬೇಕೆಂದು ಒತ್ತಾಯಿಸಿದರು.
ನಗರಸಭೆ ಅಧ್ಯಕ್ಷೆ ರೇಖಾ, ಉಪಾಧ್ಯಕ್ಷ ಎ.ಪಿ.ಶಂಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಡಿವೈಎಸ್ಪಿ ಎಂ.ಧರ್ಮೇಂದ್ರ, ಬಿಇಒ ಮಂಜುಳಾ, ಇಒ ಗುರುಶಾಂತಪ್ಪ ಬೆಳ್ಳುಂಗಡಿ, ನಗರಸಭೆ ಪ್ರಭಾರ ಆಯುಕ್ತ ಪರಶಿವ ಇತರರು ಇದ್ದರು.
ತಹಸೀಲ್ದಾರ್ ವಿರುದ್ಧ ಪ್ರತಿಭಟನೆ
ಅಂಬೇಡ್ಕರ್ ಜಯಂತಿ ಪೂರ್ವಭಾವಿಸಭೆಯನ್ನು ತಡವಾಗಿ ಆಯೋಜಿಸಿರುವುದಕ್ಕೆ ತಹಸೀಲ್ದಾರ್ ಬಸವರಾಜು ಕ್ಷಮೆ ಕೇಳಬೇಕೆಂದು ದಲಿತ ಮುಖಂಡರು ಒತ್ತಾಯಿಸಿದರು. ಕ್ಷಮೆ ಕೇಳದೆ ಸಭೆಯಿಂದ ಹೊರ ನಡೆದ ತಹಸೀಲ್ದಾರ್ ವಿರುದ್ಧ ದಲಿತ ಮುಖಂಡರು ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.
ಭೀಮನಗರ ಯಜಮಾನ ಚಿಕ್ಕಮಾಳಿಗೆ, ವರದರಾಜು, ಸನತ್ ಕುಮಾರ್, ದಲಿತ ಮುಖಂಡರಾದ ದಿಲೀಪ್, ಎಸ್.ಸಿದ್ದಪ್ಪಾಜಿ, ತೇಜು, ಶಂಕರ್ ಚೇತನ್, ವಕೀಲ ಬಸವರಾಜು, ಹರೀಶ್, ಮಣಿ, ಶೇಖರ್ ಬುದ್ಧ, ಮುರಳೀಧರ್, ಬೆಂಜಮಿನ್, ರಂಜನ್, ಶಿವಶಂಕರ್ ಧನಗೆರೆ ಇತರರು ಇದ್ದರು. ತಹಸೀಲ್ದಾರ್ ಕ್ಷಮೆ ಕೇಳದಿದ್ದರೆ ಜಯಂತಿ ದಿನದಂದು ಅಂಬೇಡ್ಕರ್ ಅವರಿಗೆ ಮಾಲಾರ್ಪಣೆ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.