ಹುನಗುಂದ: ಪಟ್ಟಣದಲ್ಲಿ ಏ.14ರಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ತಹಸೀಲ್ದಾರ್ ನಿಂಗಪ್ಪ ಬಿರಾದಾರ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಯಂತಿಯನ್ನು ತಾಲೂಕಿನ ಎಲ್ಲ ಸರ್ಕಾರಿ ಇಲಾಖೆ ಕಚೇರಿಗಳಲ್ಲಿ ಬೆಳಗ್ಗೆ 10.30ರ ಒಳಗೆ ಕಡ್ಡಾಯವಾಗಿ ಆಚರಿಸಬೇಕು. ಆಚರಿಸದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಪೂರ್ವಭಾವಿ ಸಭೆಗೆ ಗೈರಾಗಿದ್ದ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಸಾಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎಂ.ಎಚ್. ಕಟ್ಟಿಮನಿ ಅವರಿಗೆ ಸೂಚಿಸಿದರು.
ಸಮುದಾಯದ ಸಮಸ್ಯೆಗಳ ಆಲಿಸುವ ಕುಂದು ಕೊರತೆಗಳ ಸಭೆ ನಡೆಸಬೇಕೆಂದು ಮುಖಂಡರಾದ ರಾಜು ಈಟಿ, ತಿಮ್ಮಣ್ಣ ಬಾದಾಮಿ, ಶಾಂತ ಕುಮಾರ ಮೂಕಿ, ರಾಘು ಬಿಸನಾಳ ಒತ್ತಾಯಿಸಿದರು.
ಪುರಸಭೆ ಅಧ್ಯಕ್ಷೆ ಭಾಗ್ಯಶ್ರೀ ರೇವಡಿ, ಸದಸ್ಯ ಚಂದ್ರು ತಳವಾರ, ಪಿಎಸ್‌ಐ ಪ್ರಕಾಶ ಡಿ., ಮುಖಂಡರಾದ ನರಸಪ್ಪ ಹಿರೇಮನಿ, ಬಸವರಾಜ ಪೋಚಾಪೂರ, ಸಾಂತಪ್ಪ ಮಸ್ಕಿ, ರಾಮಣ್ಣ ಬಜಂತ್ರಿ, ಸಮಾಜ ಕಲ್ಯಾಣ ಇಲಾಖೆ ಗ್ರೇಡ್ 2 ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಕಟ್ಟಿಮನಿ, ಪುರಸಭೆ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ, ಹಿಂದುಳಿದ ಇಲಾಖೆ ಅಧಿಕಾರಿ ಉಮೇಶ ಮಾಂಟೂರ, ತೋಟಗಾರಿಕೆ ಇಲಾಖೆ ಅಧಿಕಾರಿ ಸುಭಾಷ ಪುಲ್ಪಿ, ಎಪಿಎಂಸಿ ಕಾರ್ಯದರ್ಶಿ ಆರ್.ಎಂ. ದಂಡಿನ, ಸಿಡಿಪಿಒ ವಿ.ಎ. ಗಿರಿತಿಮ್ಮಣ್ಣನವರ ಮತ್ತಿತರರಿದ್ದರು.