ಜಿಲ್ಲೆ

ದುರ್ಗಕ್ಕೆ ಸಿಂಹ, ಜಿರಾಫೆ ಕರೆತರಲು ನಿರ್ಧಾರ

ಚಿತ್ರದುರ್ಗ: ಚಿತ್ರದುರ್ಗದ ಆಡು ಮಲ್ಲೇಶ್ವರ ಕಿರು ಮೃಗಾಲಯಕ್ಕೆ ಸಿಂಹ ಹಾಗೂ ಜಿರಾಫೆ ಕರೆತರಲು ನಿರ್ಧರಿಸಲಾಗಿದ್ದು ಇದಕ್ಕೆ ಪೂರಕವಾಗಿ ಅವುಗಳಿಗೆ ಮನೆಗಳನ್ನು ನಿರ್ಮಿಸಲು ಅನುದಾನ ನೀಡಲಾಗುವುದು ಎಂದು ಕೇಂದ್ರ ಸಚಿವ ನಾರಾಯಣ ಸ್ವಾಮಿ ತಿಳಿಸಿದರು.

ಮೃಗಾಲಯದಲ್ಲಿ ಹುಲಿ ಆವರಣ, ಪಕ್ಷಿಗಳ ಮನೆಯನ್ನು ಭಾನುವಾರ ಉದ್ಘಾಟಿಸಿ ಮಾತನಾಡಿ, ಡಿಎಂಎಫ್‌ನಿಂದ ಮಂಜೂರಾದ 5 ಕೋಟಿ ರೂ.ಗಳಲ್ಲಿ 1.5 ಕೋಟಿ ರೂ. ಅನುದಾನವನ್ನು ಟೈಗರ್ ಎನ್‌ಕ್ಲೋಸರ್, ಪಕ್ಷಿ ಮನೆಗಳ ನಿರ್ಮಾಣಕ್ಕೆ ಬಳಸಲಾಗಿದೆ ಎಂದು ಮಾಹಿತಿ ನೀಡಿದರು.

ಮೃಗಾಲಯವನ್ನು 30 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಗುರಿ ಹೊಂದಿದ್ದು ವಿಧಾನಸಭಾ ಚುನಾವಣೆ ಬಳಿಕ ಈ ಪ್ರಕ್ರಿಯೆ ಚುರುಕು ಪಡೆಯಲಿದೆ ಎಂದು ತಿಳಿಸಿದರು.

ವಿಶೇಷವಾಗಿ ಮೈಸೂರು ಮತ್ತು ಬನ್ನೇರುಘಟ್ಟ ಮೃಗಾಲಯ ಪ್ರಾಧಿಕಾರದಿಂದ ಇಲ್ಲಿ ಪ್ರವಾಸಿಗರಿಗೆ ಮೂಲ ಸೌಕರ್ಯ, ಪ್ರಾಣಿ-ಪಕ್ಷಿಗಳ ಮನೆ ನಿರ್ಮಿಸಲು 3.5 ಕೋಟಿ ರೂ. ಅನುದಾನ ದೊರೆತಿದೆ ಎಂದರು.

ಅಭಿವೃದ್ಧಿಗೆ ಇನ್ನೂ 7 ಕೋಟಿ ರೂ. ಮೀಸಲಿದ್ದು, ಭವಿಷ್ಯದಲ್ಲಿ ಸುಂದರ ಮೃಗಾಲಯ ಮಾಡುವ ಆಶಯವಿದೆ. ಕೇಂದ್ರ ಸರ್ಕಾರ, ಕೆಇಎಂಆರ್‌ಸಿ ಯೋಜನೆ ಅಡಿ 26 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಈಗಾಗಲೇ ಕ್ರಿಯಾಯೋಜನೆ ಕೂಡ ಸಿದ್ಧಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಹುಲಿಗಳ ವೀಕ್ಷಣೆಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್, ನಿರ್ದೇಶಕಿ ಜ್ಯೋತಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಟಿ.ರಾಜಣ್ಣ, ದಾವಣಗೆರೆ ವಿಭಾಗದ ಜಗನ್ನಾಥ್, ಶಿವಮೊಗ್ಗ ವಿಭಾಗದ ಮುಕುಂದ್, ವಲಯ ಅರಣ್ಯಾಧಿಕಾರಿಗಳಾದ ವಾಸುದೇವ್, ವಸಂತ್‌ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಇತರರಿದ್ದರು.

ವಿಜಯ ಹೆಸರು ನಾಮಕರಣ 

ಹೆಣ್ಣು ಹುಲಿಗೆ ಈಗಾಗಲೇ ನಿಶಾ ಎಂದು ಹೆಸರಿಡಲಾಗಿದ್ದು, ಗಂಡು ಹುಲಿಗೆ ವಿಜಯ್ ಹೆಸರು ನಾಮಕರಣ ಮಾಡುವಂತೆ ಕೇಂದ್ರ ಸಚಿವರು ಸೂಚಿಸಿದರು. ಈ ಪ್ರದೇಶದ ಜನರು, ಹುಲಿಗಳನ್ನು ನೋಡಲು ಈ ಹಿಂದೆ ಮೈಸೂರಿಗೆ ಬರಬೇಕಿತ್ತು. ಆದರೆ, ಚಿತ್ರದುರ್ಗದಲ್ಲೇ ನೋಡುವ ಅವಕಾಶ ಕಲ್ಪಿಸಲಾಗಿದೆ ಎಂದು ಎಂದು ಮೈಸೂರಿನ ಕರ್ನಾಟಕ ಮೃಗಾಲಯ ಪ್ರಾಧಿಕಾರ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಪಿ.ರವಿ ಹೇಳಿದರು. ಸಿಂಹಗಳನ್ನು ಇಲ್ಲಿಗೆ ಕರೆತರಲು ಕೇಂದ್ರ ಮೃಗಾಲಯ ಪ್ರಾಧಿಕಾರದ ಅನುಮತಿ ಪಡೆಯಬೇಕಿದೆ. 30 ಕೋಟಿ ರೂ. ಅನುದಾನ ದೊರೆತರೆ ಮೈಸೂರಿನ ಚಾಮರಾಜೇಂದ್ರ ಮೃಗಾಲಯ ಮಾದರಿಯಲ್ಲೇ ಇಲ್ಲಿನ ಆಡುಮಲ್ಲೇಶ್ವರ ಕಿರು ಮೃಗಾಲಯ ಭಿವೃದ್ಧಿ ಪಡಿಸಲಾಗುವುದು ತಿಳಿಸಿದರು.