ಜಿಲ್ಲೆ

ಪಾಲಿಕೆ ವಿರುದ್ಧ ಪಿಐಎಲ್​ಗೆ ನಿರ್ಧಾರ

Dharwada - Santosh Vaidya

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಅವಳಿ ನಗರದ ನಾಗರಿಕನ್ನೊಳಗೊಂಡ ವಾರ್ಡ್ ಸಮಿತಿ ರಚನೆಗೆ ಸಾಕಷ್ಟು ವಿಳಂಬ ಆಗಿರುವುದರಿಂದ ರಾಜ್ಯ ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ (ಪಿಐಎಲ್) ಹೂಡಲು ಹುಬ್ಬಳ್ಳಿ-ಧಾರವಾಡ ವಾರ್ಡ್ ಸಮಿತಿ ಬಳಗ ಟ್ರಸ್ಟ್ ಮುಂದಾಗಿದೆ.

ನಾಲ್ಕೈದು ವರ್ಷಗಳಾದರೂ ವಾರ್ಡ್ ಸಮಿತಿ ರಚಿಸುವಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ನಿರ್ಲಕ್ಷ್ಯ ವಹಿಸಿದೆ. ಅವಳಿ ನಗರದ ಜನಪ್ರತಿನಿಧಿಗಳೂ (ಪಾಲಿಕೆ ಸದಸ್ಯರು ಸೇರಿದಂತೆ) ಆಸಕ್ತಿ ತೋರಿಲ್ಲ. ಇದರಿಂದ ಬೇಸತ್ತು ಟ್ರಸ್ಟ್ ಕಾನೂನು ಹೋರಾಟಕ್ಕೆ ಸಜ್ಜಾಗಿದೆ.

ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಹೈ ಕೋರ್ಟ್ ವಕೀಲರನ್ನು ಭೇಟಿ ಮಾಡಿ, ಅವರ ಸಲಹೆಯಂತೆ ಅಂತಿಮ ಮನವಿ ಹಾಗೂ ಪಿಐಎಲ್ ದಾವೆ ಹೂಡುವ ಕುರಿತು ಮುನ್ಸೂಚನೆ ನೀಡುವ ಮನವಿಯನ್ನು ಸೆ. 3ರಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಿಗೆ, ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಹಾಗೂ ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ನಗರಾಭಿವೃದ್ಧಿ ಇಲಾಖೆ) ಸಲ್ಲಿಸಿತ್ತು. ಇದಕ್ಕೆ 15 ದಿನಗಳ ಗಡುವನ್ನು ನೀಡಿ, ಸ್ವೀಕೃತಿ ಪ್ರತಿಯನ್ನು ಪಡೆಯಲಾಗಿತ್ತು. ಆದರೆ, ಈವರೆಗೆ ಯಾರೊಬ್ಬರು ಪ್ರತಿಕ್ರಿಯೆ ನೀಡಿಲ್ಲ. ಹಾಗಾಗಿ ಪಿಐಎಲ್ ಹೂಡುವುದು ಅನಿವಾರ್ಯವಾಗಿದೆ.

ಈ ಸಂಬಂಧ ಹುಬ್ಬಳ್ಳಿಯ ಹೊಸೂರಿನಲ್ಲಿರುವ ಟ್ರಸ್ಟ್​ನ ಕಚೇರಿಯಲ್ಲಿ ಭಾನುವಾರ ಸಾರ್ವಜನಿಕ ಸಭೆ ಕರೆಯಲಾಗಿತ್ತು. ಕ್ರೌಡ್ ಫಂಡಿಂಗ್ (ಸಾರ್ವಜನಿಕರಿಂದ ದೇಣಿಗೆ ಸಂಗ್ರಹ) ಮೂಲಕ ಹಣವನ್ನು ಕೂಡಿಸಿ ಕಾನೂನು ಹೋರಾಟದ ವೆಚ್ಚವನ್ನು ನಿಭಾಯಿಸಲು ನಿರ್ಧರಿಸಲಾಯಿತು. ವಾರ್ಡ್ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಲು ಪಾಲಿಕೆ 3 ಬಾರಿ ಅರ್ಜಿ ಆಹ್ವಾನಿಸಿತ್ತು. ಸಾವಿರಕ್ಕೂ ಅಧಿಕ ಜನರು ಅರ್ಜಿ ಸಲ್ಲಿಸಿದ್ದರು. ಆದರೆ, ಸಮಿತಿ ರಚನೆ ಮಾಡಲಿಲ್ಲ. ಸದ್ಯದಲ್ಲಿಯೇ ಅರ್ಜಿದಾರರ ಸಮಾವೇಶ ನಡೆಯಲಿದೆ ಸಭೆಯಲ್ಲಿ ತೀರ್ವನಿಸಲಾಯಿತು.