ಜಿಲ್ಲೆ

ವಾರದೊಳಗೆ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಶಿಸ್ತುಕ್ರಮದ ನಿರ್ಧಾರ

ಹುಬ್ಬಳ್ಳಿ : ಉಚ್ಛಾಟಿತ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪರ ಹೇಳಿಕೆ ನೀಡಿರುವ ಕೂಡಲಸಂಗಮದ ಪಂಚಮಸಾಲಿ ಗುರುಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಬಗ್ಗೆ ನಿರ್ಧರಿಸಲು ಒಂದು ವಾರದಲ್ಲಿ ಸಮಾಜದ ಪ್ರಮುಖರ ಹಾಗೂ ಟ್ರಸ್ಟ್ರಿಗಳ ಸಭೆ ಕರೆಯಲು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ರ ನಿರ್ಧರಿಸಿದೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಟ್ರಸ್ಟಿ ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ, ಹಲವಾರು ನಿಬಂಧನೆಗಳಿಗೆ ಒಳಪಟ್ಟು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಪಂಚಮಸಾಲಿ ಗುರುಪೀಠಕ್ಕೆ ನೇಮಿಸಲಾಗಿದೆ. ಆದರೆ, ಅವರು ಒಬ್ಬ ವ್ಯಕ್ತಿ ಹಾಗೂ ರಾಜಕೀಯ ಪಕ್ಷದ ಪರವಾಗಿ ಮಾತನಾಡುವ ಮೂಲಕ ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ ಎಂದು ದೂರಿದರು.

ಈ ಹಿಂದೆಯೂ ವ್ಯಕ್ತಿಪರ ಮಾತನಾಡಿದ್ದಕ್ಕಾಗಿ ಅವರಿಗೆ ತಮ್ಮ ನಡವಳಿಕೆ ಸುಧಾರಿಸಿಕೊಳ್ಳಲು ನೋಟಿಸ್​ ನೀಡಲಾಗಿತ್ತು. ಇದೀಗ ಮತ್ತೆ ಅದೇ ರೀತಿ ವರ್ತನೆಯನ್ನು ಪುನರಾವತಿರ್ಸಿದ್ದಾರೆ ಎಂದು ತಿಳಿಸಿದರು.

ಸ್ವಾಮೀಜಿಗಳಾದವರು ಸಮಾಜ ಸಂಟಿಸಬೇಕು. ಮಕ್ಕಳನ್ನು ಸುಶಿತರನ್ನಾಗಿಸಲು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಬೇಕು. ಪೀಠಾಧ್ಯಕ್ಷರನ್ನಾಗಿ ಮಾಡಿದ್ದು ಸಮಾಜ. ಸ್ವಾಮೀಜಿಗಳು ಸಮಾಜದ ಹಿತಾಸಕ್ತಿ ಕಾಯಬೇಕು. ಅದನ್ನು ಬಿಟ್ಟು ರಾಜಕೀಯ ಮಾಡುವುದು ಸರಿಯಲ್ಲ. ಆದರೆ, ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರು ಬಸನಗೌಡ ಪಾಟೀಲ ಯತ್ನಾಳ ಜತೆಗೂಡಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪಧಿರ್ಸಲು ತಯಾರಿ ನಡೆಸುತ್ತಿದ್ದಾರೆ ಎಂದು ಹೇಳಿದರು.

ಸಮಾಜಕ್ಕೆ 2ಎ ಮೀಸಲಾತಿ ಹೋರಾಟದ ನೇತೃತ್ವ ವಹಿಸಿದ್ದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ, 2ಸಿ, 2 ಡಿ ಮೀಸಲಾತಿಗಾಗಿ ಸರ್ಕಾರದೊಂದಿಗೆ ದೊಡ್ಡ ಮೊತ್ತದ ಡೀಲ್​ ಮಾಡಿಕೊಂಡಿದ್ದಾರೆ. ಅದೇ ಹಣದಿಂದ ವೈಯಕ್ತಿಕವಾಗಿ ಹಲವಾರು ಟ್ರಸ್ಟ್​, ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದ್ದಾರೆ ಎಂದು ಆರೋಪಿಸಿದರು.

ಸ್ವಾಮೀಜಿಗಳು ವೈಯಕ್ತಿಕವಾಗಿ ಆಸ್ತಿಗಳನ್ನು ಮಾಡಿಕೊಳ್ಳಬಾರದೆಂಬ ನಿಯಮ ಟ್ರಸ್ಟ್​ನ ಬೈಲಾದಲ್ಲಿದೆ. ಆದರೆ, ಈ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ದಾವಣಗೆರೆಯಲ್ಲಿ ವೈಯಕ್ತಿಕ ಶಿಕ್ಷಣ ಸಂಸ್ಥೆ ನಿಮಿರ್ಸಿಕೊಂಡಿದ್ದಾರೆ. ಕೋಟ್ಯಂತರ ರೂಪಾಯಿ ಆಸ್ತಿ ಮಾಡಿದ್ದಾರೆ. ಕೂಡಲಸಂಗಮದಲ್ಲಿ ಪ್ರತ್ಯೇಕ ಸಂಸ್ಥೆ ನಡೆಸುತ್ತಿದ್ದಾರೆ ಎಂದು ದೂರಿದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ನಮ್ಮ ಟ್ರಸ್ಟ್​ನ ಅಧ್ಯಕ್ಷ ಪ್ರಬಣ್ಣ ಹುಣಸಿಕಟ್ಟಿ ಅವರ ಬಗ್ಗೆ, ಟ್ರಸ್ಟ್​ನ ಪದಾಧಿಕಾರಿಗಳ ಬಗ್ಗೆ ಅವಾಚ್ಯವಾಗಿ ಮಾತನಾಡಿದ್ದಾರೆ. ನಾಯಿ, ನರಿ ಎಂಬಂತಹ ಶಬ್ಧಗಳನ್ನು ಬಳಸಿದ್ದಾರೆ. ಯತ್ನಾಳ ಅವರ ಮಾತುಗಳು ಅವರ ಸಂಸತಿಯನ್ನು ಬಿಂಬಿಸುತ್ತದೆ ಎಂದು ಟೀಕಿಸಿದರು.

ಸ್ವಯಂ ಘೋಷಿತ ನಾಯಕನಂತೆ ವತಿರ್ಸುತ್ತಿರುವ ಬಸನಗೌಡ ಪಾಟೀಲ ಯತ್ನಾಳ, ತಾವೇ ಮುಂದಿನ ಮುಖ್ಯಮಂತ್ರಿ ಎಂಬಂತೆ ಮಾತನಾಡುತ್ತಿದ್ದಾರೆ. ಬೇರೆಯವರ ತಾಕತ್ತು ಪ್ರಶ್ನಿಸುವ ಯತ್ನಾಳಗೆ ದಮ್ಮು, ತಾಕತ್ತು ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಚುನಾವಣೆ ಎದುರಿಸಲಿ. ಆಗ ನೋಡೋಣ ಮಾಜಿಯಾಗಿ ಮನೆಯಲ್ಲಿ ಕೂಡುತ್ತಾರೋ ಅಥವಾ ವಿಧಾನಸೌಧ ಪ್ರವೇಶಿಸುತ್ತಾರೋ ಎಂದು ಸವಾಲು ಹಾಕಿದರು.

ಟ್ರಸ್ಟ್ರಿ ಹಾಗೂ ವಿಧಾನ ಪರಿಷತ್​ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಮಾತನಾಡಿ, ಬಸನಗೌಡ ಪಾಟೀಲ ಯತ್ನಾಳ ಅವರು ನಮ್ಮ ಟ್ರಸ್ಟ್​ ಅಧ್ಯಕ್ಷರು ಸೇರಿದಂತೆ ಟ್ರಸ್ಟ್​ನ ಇತರ ಪದಾಧಿಕಾರಿಗಳು, ಸದಸ್ಯರ ಬಗ್ಗೆ ಅವಾಚ್ಯವಾಗಿ ಮಾತನಾಡಿದ್ದಾರೆ. ಅವರು ಬಹಿರಂಗವಾಗಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮೀಸಲಾತಿಗಾಗಿ ನಡೆಸುತ್ತಿದ್ದ ಪಾದಯಾತ್ರೆ ನಿಲ್ಲಿಸಲು ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪ 10 ಕೋಟಿ ರೂ. ಆಮೀಷವನ್ನು ನನ್ನ ಮೂಲಕ ಮಾಡಿಸಿದ್ದಾರೆಂದು ಯತ್ನಾಳ ಆರೋಪಿಸಿದ್ದರು. ಆ ಆರೋಪವನ್ನು ಸಾಬೀತು ಪಡಿಸಿದರೆ ಸಾರ್ವಜನಿಕ ಜೀವನದಿಂದ ನಿವೃತ್ತಿ ಪಡೆಯುತ್ತೇನೆ ಎಂದರು.

ಟ್ರಸ್ಟ್​ ಅಧ್ಯಕ್ಷ ಪ್ರಭಣ್ಣ ಹುಣಸಿಕಟ್ಟಿ, ಪದಾಧಿಕಾರಿಗಳಾದ ಮಾಜಿ ಸಚಿವ ಮುರುಗೇಶ ನಿರಾಣಿ, ಮಾಜಿ ಶಾಸಕರಾದ ಎಂ.ಎಸ್​. ಅಕ್ಕಿ, ಎಸ್​.ಐ. ಚಿಕ್ಕನಗೌಡ್ರ, ಪ್ರಮುಖರಾದ ರಮೇಶ ಪಾಟೀಲ, ದೊಡ್ಡೇಶಪ್ಪ ನಲವಡಿ, ನೀಲಕಂಠ ಅಸೂಟಿ, ಎಲ್​.ಎಂ. ಪಾಟೀಲ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.