ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನ ಬಳಿಯಿರುವ ಉಪ್ಪಾರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.  
ಜಿಲ್ಲೆ

ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿ ಭಾಗಿಯಾಗದಿರಲು ನಿರ್ಧಾರ

ಅಭಿನಯ್ ಎಚ್.ಎಂ

ನಂಜನಗೂಡು: ರಾಜಕೀಯವಾಗಿ ಸ್ಥಾನಮಾನ ನೀಡದೆ ಪಕ್ಷದ ಕಚೇರಿಯಲ್ಲಿ ಜಯಂತಿಯನ್ನೂ ಆಚರಿಸದೆ ಉಪ್ಪಾರ ಸಮುದಾಯವನ್ನು ಕಡೆಗಣಿಸಿರುವುದರಿಂದ ಕಾಂಗ್ರೆಸ್‌ನ ಯಾವ ಕಾರ್ಯಕ್ರಮದಲ್ಲೂ ಸಮುದಾಯದ ಮುಖಂಡರು ಭಾಗಿಯಾಗಬಾರದೆಂದು ನಿರ್ಣಯ ಕೈಗೊಳ್ಳಲಾಗಿದೆ ಎಂದು ಉಪ್ಪಾರ ಸಮುದಾಯದ ತಾಲೂಕು ಘಟಕದ ಮಾಜಿ ಅಧ್ಯಕ್ಷ ಎಚ್.ಎಸ್.ಮೂಗಶೆಟ್ಟಿ ಹೇಳಿದರು.

ಕಾಂಗ್ರೆನೊಂದಿಗೆ ಗುರುತಿಸಿಕೊಂಡಿರುವ ಸಮುದಾಯದ ಮುಖಂಡರು ಮತ್ತು ಜನಪ್ರತಿನಿಧಿಗಳೊಂದಿಗೆ ನಗರದ ಉಪ್ಪಾರ ಸಮುದಾಯ ಭವನದಲ್ಲಿ ಮಂಗಳವಾರ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಮೈಸೂರು, ಚಾಮರಾಜನಗರ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉಪ್ಪಾರ ಸಮುದಾಯದವರಿದ್ದಾರೆ. ಅಲ್ಲದೆ ನಂಜನಗೂಡು ಕ್ಷೇತ್ರದಲ್ಲಿ 35,000 ಕ್ಕಿಂತಲೂ ಹೆಚ್ಚು ಜನಸಂಖ್ಯೆ ಇದ್ದು ಕ್ಷೇತ್ರದಲ್ಲಿ ಮೂರನೇ ಸ್ಥಾನದಲ್ಲಿದ್ದೇವೆ. ಆದರೂ ಕಾಂಗ್ರೆಸ್ ವರಿಷ್ಠರು ಮತ್ತು ಶಾಸಕರು ನಮ್ಮ ಸಮುದಾಯದವರಿಗೆ ಯಾವುದೇ ರಾಜಕೀಯ ಸ್ಥಾನಮಾನ ನೀಡದೆ ಮತ ಬ್ಯಾಂಕ್‌ಗಳಾಗಿ ಉಪಯೋಗಿಸಿಕೊಂಡು ಅನ್ಯಾಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಕಚೇರಿಯಲ್ಲಿ ಹಲವಾರು ವರ್ಷಗಳಿಂದ ಎಲ್ಲ ಮಹನೀಯರ ಜಯಂತಿ ಆಚರಿಸಲಾಗುತ್ತಿದೆ. ಈ ಬಾರಿ ಶಾಸಕ ದರ್ಶನ್‌ಧ್ರುವನಾರಾಯಣ ಅವರು ಬೇರೊಂದು ದಿನ ಅದ್ದೂರಿಯಾಗಿ ಮಹರ್ಷಿ ಭಗೀರಥ ಜಯಂತಿ ಆಚರಣೆ ಮಾಡಲು ತೀರ್ಮಾನಿಸಿದರಾದರೂ ಪಕ್ಷದ ಕಚೇರಿಯಲ್ಲಿ ಅವರ ಭಾವಚಿತ್ರಕ್ಕೆ ಪೂಜೆಸಲ್ಲಿಸುವ ಕೆಲಸ ಮಾಡಿಲ್ಲ. ಹಾಗಾಗಿ ನಮ್ಮ ಸಮುದಾಯದ ಮುಖಂಡರೇ ಜಯಂತಿಯನ್ನು ಅದ್ದೂರಿಯಾಗಿ ಆಚರರಿಸಲಿದ್ದಾರೆ. ಜತೆಗೆ ಸಮುದಾಯದ ಮುಖಂಡರಿಗೆ ರಾಜಕೀಯ ಸ್ಥಾನಮಾನ ಸಿಗುವವರೆಗೂ ಕಾಂಗ್ರೆಸ್‌ನ ಯಾವ ಕಾರ್ಯಕ್ರಮಗಳಲ್ಲೂ ಭಾಗಿಯಾಗುವುದಿಲ್ಲ ಎಂದು ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದರು.

ಮುಖಂಡರಾದ ಕನಕನಗರ ಮಹದೇವು ಮಾತನಾಡಿ, ಕಾಂಗ್ರೆಸ್ ಕಚೇರಿಯಲ್ಲಿ ಭಗೀರಥ ಜಯಂತಿಯನ್ನು ಆಚರಿಸದಿರುವುದಕ್ಕೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೇ ಹೊಣೆ. ಶಾಸಕರು ಜಯಂತಿ ಆಚರಣೆಗೆ ಏರ್ಪಾಡು ಮಾಡುವುದು ಬೇಡ ಎಂದರು.

ಸಭೆಯಲ್ಲಿ ಜಿಪಂ ಮಾಜಿ ಸದಸ್ಯ ಕೆ.ಬಿ.ಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಮುದ್ದುಮಾದಶೆಟ್ಟಿ, ಸಮುದಾಯದ ಮುಖಂಡರಾದ ಕೂಡ್ಲಾಪುರ ರಾಜು, ರಮೇಶ್, ಕಲ್ಲಂಗಡಿ ಮಹದೇವಸ್ವಾಮಿ, ಗೋವಿಂದರಾಜು, ಶ್ರೀನಿವಾಸ್, ಬೆಳ್ಳಶೆಟ್ಟಿ, ಶಿರಮಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಮಹದೇವ ಶೆಟ್ಟಿ, ಗ್ರಾಪಂ ಸದಸ್ಯರಾದ ಮುದ್ದುಮಾದಶೆಟ್ಟಿ, ಜವರಾಜು, ಹರೀಶ್, ನಂಜಪ್ಪ, ರಾಘವೇಂದ್ರ, ಕಾಂಗ್ರೆಸ್ ತಾಲೂಕು ಅಧ್ಯಕ್ಷ ವಿಜಯಕುಮಾರ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.