ಅರಸೀಕೆರೆ: ನಗರಸಭೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಫ್ಲೆಕ್ಸ್ ಅಳವಡಿಸದಂತೆ ನಗರಸಭೆ ಸಭಾಂಗಣದಲ್ಲಿ ಶನಿವಾರ ಎಂ.ಸಮೀವುಲ್ಲಾ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ತೆಗೆದುಕೊಳ್ಳಲಾಯಿತು.
ವಿಷಯ ಪ್ರಸ್ತಾಪವಾಗುತ್ತಿದ್ದಂತೆ ಗೃಹಮಂಡಳಿ ಅಧ್ಯಕ್ಷ, ಶಾಸಕ ಕೆ.ಎಂ.ಶಿವಲಿಂಗೇಗೌಡ, ನಗರದ ಪ್ರಮುಖ ವೃತ್ತ ಹಾಗೂ ರಸ್ತೆ ವಿಭಜಕಗಳ ನಡುವೆ ಪದೇ ಪದೆ ಫ್ಲೆಕ್ಸ್ ಅಳವಡಿಕೆ ಮಾಡುತ್ತಿರುವುದರಿಂದ ವಾಹನ ಸವಾರರಿಗೆ ತೊಂದರೆ ಎದುರಾಗುತ್ತಿದೆ. ಸತ್ತು ಹೋದವರ ಭಾವಚಿತ್ರಗಳೇ ಕಾಣಸಿಗುತ್ತಿದ್ದು ಇಂತಹ ಬೆಳವಣಿಗೆಗಳಿಗೆ ನಗರಸಭೆ ಅಡಳಿತ ಕಡಿವಾಣ ಹಾಕಬೇಕು. ನನ್ನನ್ನು ಒಳಗೊಂಡಂತೆ ಎಲ್ಲ ರಾಜಕೀಯ ಪಕ್ಷಗಳ ಮುಖಂಡರಿಗೆ ನಿಯಮ ಜಾರಿ ಮಾಡಬೇಕು. ಆಗ ಮಾತ್ರವೇ ನಗರ ಸೌಂದರ್ಯ ಕಾಪಾಡಿಕೊಳ್ಳಲು ಸಾಧ್ಯವಿದೆ. ನಗರಸಭೆ ನೀತಿ, ನಿಯಮಗಳನ್ನು ಉಲ್ಲಂಘಿಸಿದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಹೇಳಿದರು. ಅಧ್ಯಕ್ಷ ಎಂ.ಸಮೀವುಲ್ಲಾ ಉತ್ತರಿಸಿ ನಗರದ ಪ್ರಮುಖ ಮೂರು ಆಯಕಟ್ಟಿನ ಜಾಗಗಳಲ್ಲಿ ಎಲ್‌ಇಡಿ ಸ್ಕ್ರೀನ್ ಅಳವಡಿಸಲು ನಿರ್ಧರಿಸಲಾಗಿದೆ. ಆಸಕ್ತರು ಬಾಡಿಗೆ ರೂಪದಲ್ಲಿ ಜಾಹೀರಾತು ನೀಡಬಹುದಾಗಿದ್ದು, ಜಾತ್ರೆ, ಉತ್ಸವ, ಮಹನೀಯ ಜಯಂತಿಗಳಿಗೆ ವಿನಾಯಿತಿ ನೀಡೋಣ ಎಂದು ಸಭೆಯ ಗಮನಕ್ಕೆ ತಂದರು.
ರೈಲ್ವೆ ನಿಲ್ದಾಣ ಸಂಪರ್ಕಿಸುವ ರಸ್ತೆ ಬದಿ ಜಾಗ ಪಡೆದು ಬಸವೇಶ್ವರರ ಪುತ್ಥಳಿ ನಿರ್ಮಿಸಲಾಗುವುದು. ಬಸ್ ನಿಲ್ದಾಣಕ್ಕೂ ಜಗಜ್ಯೋತಿ ಬಸವೇಶ್ವರರ ಹೆಸರಿಡುವ ಉದ್ದೇಶವಿದೆ. ಸಿಎಂ ಸಿದ್ದರಾಮಯ್ಯ ಶೀಘ್ರವೇ ತಾಲೂಕಿಗೆ ಆಗಮಿಸಲಿದ್ದು, ಶಿಲಾನ್ಯಾಸ ನೆರವೇರಿಸುವರು. ರಾಜಕಾರಣದಲ್ಲಿರುವ ನಮ್ಮೆಲ್ಲರಿಗೂ ಬಸವಣ್ಣನವರೇ ಪ್ರೇರಣೆಯಾಗಿದ್ದಾರೆ. ಈ ವಿಷಯದಲ್ಲಿ ಯಾವುದೇ ಗೊಂದಲ ಮಾಡಿಕೊಳ್ಳಬೇಡಿ ಎಂದು ಕೆ.ಎಂ.ಶಿವಲಿಂಗೇಗೌಡ ಮನವರಿಕೆ ಮಾಡಿಕೊಟ್ಟು ಗಮನಸೆಳೆದರು.
ಹೊಯ್ಸಳ ನಗರ ಬಡಾವಣೆಯಲ್ಲಿ ನಿವೇಶನಗಳ ಹಂಚಿಕೆ ವಿಚಾರದಲ್ಲಿ ನಡೆದಿರುವ ಅವ್ಯವಹಾರವನ್ನು ಸಿಒಡಿ ತನಿಖೆಗೆ ಒಪ್ಪಿಸುವ ಕುರಿತು ಚರ್ಚೆ ನಡೆಯಿತು. ಹಕ್ಕು ಪತ್ರ ವಿತರಣೆಯಲ್ಲಿ ಅಧಿಕಾರಿಗಳ ಸಹಿ ನಕಲು ಮಾಡಿರುವುದು ಬೆಳಕಿಗೆ ಬಂದಿದೆ. ಯಾರೇ ತಪ್ಪು ಮಾಡಿದ್ದರೂ ಶಿಕ್ಷೆ ಆಗಬೇಕು ಎಂದು ಆಡಳಿತ ಪಕ್ಷದ ಅನ್ನಪೂರ್ಣ ಹಾಗೂ ಪ್ರತಿಪಕ್ಷದ ಸದಸ್ಯ ಸಿ.ಗಿರೀಶ್ ಸಲಹೆ ನೀಡಿದರು. ಗೃಹಮಂತ್ರಿ ಜಿ.ಪರಮೇಶ್ವರ್ ಅವರಿಗೆ ಪತ್ರ ಬರೆದು ಪ್ರಕ್ರಿಯೆ ಮುಂದುವರಿಸಲು ತೀರ್ಮಾನಿಸಲಾಯಿತು.
ಸುಕ್ಷೇತ್ರ ಯಾದಾಪುರ ಶ್ರೀಜೇನುಕಲ್ ಸಿದ್ದೇಶ್ವರ ಸ್ವಾಮಿ ಕ್ಷೇತ್ರಕ್ಕೆ ನಗರಸಭೆ ವ್ಯಾಪ್ತಿಯಿಂದ ಕುಡಿಯುವ ನೀರು ಕೊಡಲು ಸಾಧ್ಯವಿದೆಯೇ ಎಂದು ಪೌರಾಯಕ್ತರೇ ಹೇಳಬೇಕು. ಸಖಾಸುಮ್ಮನೆ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ ಎಂದು ಕೆಎಂಶಿ ಅಸಮಾಧಾನ ವ್ಯಕ್ತಪಡಿಸಿದರು.
ಪೌರಾಯುಕ್ತ ಎಚ್.ಟಿ.ಕೃಷ್ಣಮೂರ್ತಿ ಮಾತನಾಡಿ, ಕುಡಿಯುವ ನೀರು ಕೊಡುವಂತೆ ಕೆಲವರು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ. ಕಾನೂನಿನಲ್ಲಿ ಅವಕಾಶವಿದ್ದರೆ ಕೊಡಿ ಎಂದು ಪತ್ರ ಬಂದಿದೆ. ಆದರೆ ನಗರವ್ಯಾಪ್ತಿಯಿಂದ ಹಳ್ಳಿಗೆ ನೀರು ಕೊಡಲು ಅವಕಾಶವಿಲ್ಲ ಎಂದು ಹೇಳಿದರು. ಎಂ.ಆರ್. ವೆಂಕಟಮುನಿ, ಸುಜಾತಾ ರಮೇಶ್, ಮಧುರಾ ಹರೀಶ್, ಸುಜಾತಾ ರಮೇಶ್, ಮೇಲುಗಿರಿಗೌಡ, ಶ್ವೇತಾ ರಮೇಶ್, ರೇವಣ್ಣ, ಅವಿನಾಶ್ ಹಾಗೂ ಇನ್ನಿತರೆ ಸದಸ್ಯರು ವಾರ್ಡ್ ವ್ಯಾಪ್ತಿಯಲ್ಲಿನ ಕುಂದು ಕೊರತೆಗಳ ಬಗ್ಗೆ ಸಭೆಯ ಗಮನಸೆಳೆದರು. ಉಪಾಧ್ಯಕ್ಷ ಮನೋಹರ್ ಇದ್ದರು.
ನಗರಸಭೆ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಸದಸ್ಯರನ್ನು ಸಭೆಗೂ ಮುನ್ನ ಸನ್ಮಾನಿಸಲಾಯಿತು.