ಜಿಲ್ಲೆ

ನೂತನ ಮಹಾರಾಣಿ ಹಾಸ್ಟೆಲ್ ನಿರ್ಮಾಣಕ್ಕೆ ತೀರ್ಮಾನ

ಮೈಸೂರು: ಮಹಾರಾಣಿ ಕಲಾ ಮತ್ತು ವಿಜ್ಞಾನ ಮಹಿಳಾ ಕಾಲೇಜು ಕಟ್ಟಡಗಳ ದುರಸ್ತಿ ಹಾಗೂ ಹಾಸ್ಟೆಲ್ ಕಟ್ಟಡಗಳನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ. ಈ ಕಾಮಗಾರಿಗಳಿಗೆ ಅಂದಾಜು 140 ಕೋಟಿ ರೂ. ವೆಚ್ಚವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.


ಮಹಾರಾಣಿ ಮಹಿಳಾ ಕಲಾ ಮತ್ತು ವಿಜ್ಞಾನ ಕಾಲೇಜು ಕಟ್ಟಡ, ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಎರಡೂ ಕಾಲೇಜುಗಳ ಕಟ್ಟಡಗಳ ದುರಸ್ತಿಗೆ 60 ಕೋಟಿ ರೂ., ಹಾಸ್ಟೆಲ್ ಕಟ್ಟಡಗಳ ನಿರ್ಮಾಣಕ್ಕೆ 80 ಕೋಟಿ ರೂ. ಸೇರಿದಂತೆ ಒಟ್ಟು 140 ಕೋಟಿ ರೂ. ಬೇಕಾಗಬಹುದು. ಜನವರಿ ಬಳಿಕ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.


ಎರಡು ಕಾಲೇಜಿನಲ್ಲಿ ಅಂದಾಜು 5 ಸಾವಿರ ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿ ಅನೇಕ ಕೊರತೆಗಳಿವೆ. ಮೂಲ ಸೌಕರ್ಯವನ್ನೂ ಕಲ್ಪಿಸಿಕೊಡಬೇಕಾಗಿದೆ. ಕಲಾ ಕಾಲೇಜಿನ ಹಾಸ್ಟೆಲ್‌ನಲ್ಲಿ 350, ವಿಜ್ಞಾನ ಕಾಲೇಜಿನ ಹಾಸ್ಟೆಲ್‌ನಲ್ಲಿ 450 ವಿದ್ಯಾರ್ಥಿನಿಯರು ಇದ್ದಾರೆ. ತಲಾ ಒಂದು ಸಾವಿರ ವಿದ್ಯಾರ್ಥಿನಿಯರ ಸ್ಥಳಾವಕಾಶದ ಬೇಡಿಕೆ ಇದೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಲಾಗುವುದು ಎಂದು ತಿಳಿಸಿದರು.


ಈಗಿರುವ ಹಾಸ್ಟೆಲ್‌ನ ಹಳೇ ಕಟ್ಟಡಗಳ ವಿಸ್ತರಣೆ, ಇವುಗಳ ಮೇಲೆ ಹೊಸ ಕಟ್ಟಡ ನಿರ್ಮಾಣಕ್ಕೆ ಅನುಕೂಲಕರವಾಗಿಲ್ಲ. ಆದ್ದರಿಂದ ಈ ಕಟ್ಟಡಗಳನ್ನು ಕೆಡವಿ 5 ಅಂತಸ್ತಿನ ಹೊಸ ಕಟ್ಟಡ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಇದರಿಂದ ನಗರದ ಹೊರ ಭಾಗದಲ್ಲಿ ಹಾಸ್ಟೆಲ್ ನಿರ್ಮಾಣ ತಪ್ಪಲಿದೆ ಎಂದರು.


ಕಲಾ ಮತ್ತು ವಿಜ್ಞಾನ ಕಾಲೇಜಿನ ಹಾಸ್ಟೆಲ್‌ಗಳ ಕಟ್ಟಡವನ್ನು ಎರಡು ಬ್ಲಾಕ್ ಮಾದರಿಯಲ್ಲಿ ನಿರ್ಮಿಸಲಾಗುವುದು. ಒಂದು ಹಾಸ್ಟೆಲ್‌ನಲ್ಲಿ ತಲಾ ಒಂದು ಸಾವಿರದಂತೆ 2 ಸಾವಿರ ವಿದ್ಯಾರ್ಥಿಗಳ ವಾಸ್ತವ್ಯಕ್ಕೆ ಅನುಕೂಲ ಕಲ್ಪಿಸಿಕೊಡಲಾಗುವುದು. ಅ.21ರಂದು ಉನ್ನತ ಶಿಕ್ಷಣ ಇಲಾಖೆ ಸಭೆ ನಡೆಯಲಿದ್ದು, ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ವಿಷಯವನ್ನು ತಂದು ಸಮಾಲೋಚನೆ ನಡೆಸಲಾಗುವುದು ಎಂದು ತಿಳಿಸಿದರು.

ವಿಜ್ಞಾನ ಕಾಲೇಜು ಐತಿಹಾಸಿಕ ಕಟ್ಟಡವಾಗಿದ್ದು ಸಾಕಷ್ಟು ಸಮಸ್ಯೆ ಇದೆ. ಹೀಗಾಗಿ ಜಿಲ್ಲಾಧಿಕಾರಿ ಹಾಗೂ ಪುರಾತತ್ವ ಇಲಾಖೆ ಜತೆ ಮಾತುಕತೆ ನಡೆಸಲಾಗಿದೆ. ಐದು ಅಂತಸ್ತಿನ ಮಹಡಿ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ. ಪಾರಂಪರಿಕ ಶೈಲಿಯಲ್ಲಿ ಕಟ್ಟಡ ಕಟ್ಟಲಾಗುವುದು ಎಂದರು. ಶಾಸಕ ಕೆ.ಹರೀಶಗೌಡ, ಎಂಎಲ್‌ಸಿಗಳಾದ ಮಧು ಜಿ.ಮಾದೇಗೌಡ, ಮರಿತಿಬ್ಬೇಗೌಡ ಇನ್ನಿತರರು ಇದ್ದರು.

ಸಚಿವರಿಗೆ ಸಮಸ್ಯೆಗಳ ದರ್ಶನ


ಸಚಿವರಿಗೆ ಉಭಯ ಕಾಲೇಜಿನ ಸಮಸ್ಯೆಗಳ ದರ್ಶನವಾಯಿತು. ಕಟ್ಟಡಗಳ ನಿರ್ವಹಣೆ ಕೊರತೆ, ಪೈಲ್‌ಲೈನ್‌ನಿಂದ ನೀರಿನ ಸೋರಿಕೆಯಿಂದ ಕಟ್ಟಡಗಳಿಗೆ ಆಗುತ್ತಿರುವ ಹಾನಿ, ಕಟ್ಟಡಗಳಲ್ಲಿ ಬೆಳೆದಿರುವ ಗಿಡಗಳನ್ನು ಗಮನಿಸಿದರು. ಇದರಿಂದ ಕಟ್ಟಡಕ್ಕೆ ಹಾನಿಯಾಗಲಿದೆ. ಇದರ ಪರಿಹಾರಕ್ಕೆ ಕ್ರಮ ವಹಿಸಬೇಕು ಎಂದು ಸಂಬಂಧಪಟ್ಟವರಿಗೆ ಸಚಿವರು ಸೂಚಿಸಿದರು.