ಜಿಲ್ಲೆ

ಅದ್ದೂರಿ ಸ್ವಾತಂತ್ರ್ಯ ದಿನಾಚರಣೆಗೆ ನಿರ್ಧಾರ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಆಗಷ್ಟ್ 15 ರಂದು ಬೆಳಗ್ಗೆ 7.30ಕ್ಕೆ ಇಲ್ಲಿನ ತಾಲೂಕು ಆಡಳಿತ ಸೌಧದಲ್ಲಿ ಹಾಗೂ 9 ಗಂಟೆಗೆ ನೆಹರು ಮೈದಾನದಲ್ಲಿ ತಾಲೂಕು ಆಡಳಿತದಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲು ಹುಬ್ಬಳ್ಳಿ ಶಹರ ತಹಶೀಲ್ದಾರ ಕಲಗೌಡ ಪಾಟೀಲ ಹೇಳಿದರು.

ತಾಲೂಕು ಆಡಳಿತ ಸೌಧದ ತಹಶೀಲ್ದಾರ ಕಾರ್ಯುಲಯದ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಪೊಲೀಸ್, ಗೃಹ ರಕ್ಷಕ, ಎನ್​ಸಿಸಿ, ಎನ್​ಎಸ್​ಎಸ್ ದಳಗಳು ಪಥ ಸಂಚಲನದಲ್ಲಿ ಭಾಗವಹಿಸಲಿವೆ. 20ಕ್ಕೂ ಅಧಿಕ ಶಾಲೆಗಳ ತಂಡಗಳು ಸಹ ಪಥ ಸಂಚಲನದಲ್ಲಿ ಪಾಲ್ಗೊಳ್ಳಬೇಕು. ಜನಪದ ಮತ್ತು ಹಳ್ಳಿ ಸೊಗಡಿನ ಸಾಂಸ್ಕೃತಿಕ ಕಾರ್ಯಕ್ರಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದರು.

ದೇಶಭಕ್ತಿ ಸಾರುವ ಗೀಗೀ ಪದ, ಲಾವಣಿ ಪದ, ಕಿರು ನಾಟಕ, ನೃತ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದು. ಪಥ ಸಂಚಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ತಂಡಗಳಿಗೆ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು. ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಗುತ್ತದೆ ಎಂದು ತಿಳಿಸಿದರು.

ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ ಪ್ರಕಾಶ ನಾಶಿ ಮಾತನಾಡಿ, ಪಥ ಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳನ್ನು ಬಸ್ ಮೂಲಕ ನೆಹರು ಮೈದಾನಕ್ಕೆ ಕರೆ ತರುವ ವ್ಯವಸ್ಥೆ ಮಾಡಬೇಕು. ದೇಶಭಕ್ತಿಯ ಕನ್ನಡ ಗೀತೆಗಳನ್ನು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬಳಸಬೇಕು. ಕುಡಿಯುವ ನೀರು, ಉಪಹಾರ, ಸಾರಿಗೆ ವ್ಯವಸ್ಥೆ, ಅಗ್ನಿಶಾಮಕ, ಆರೋಗ್ಯ ಸಿಬ್ಬಂದಿ, ಆಂಬ್ಯುಲೆನ್ಸ್ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಆಯಾ ಇಲಾಖೆಗಳಿಗೆ ವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಎಲ್ಲ ಸರ್ಕಾರಿ ಕಚೇರಿ, ಗ್ರಾಮ ಪಂಚಾಯಿತಿಗಳಲ್ಲಿ ಮಹಾತ್ಮಾ ಗಾಂಧೀಜಿ, ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರಗಳಿಗೆ ಪೂಜೆ ಸಲ್ಲಿಸುವಂತೆ ತಿಳಿಸಿದರು.

ಹಿಂದುಳಿದ ವರ್ಗಗಳ ತಾಲೂಕು ಕಲ್ಯಾಣಾಧಿಕಾರಿ ಸಿ.ವಿ.ಕರವೀರಮಠ, ಗೃಹ ರಕ್ಷಕ ದಳದ ಕೃಷ್ಣಾ ಬ್ಯಾಡಗಿ, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಪ್ರಭುಲಿಂಗ ಗಡ್ಡದ ಹಾಗೂ ವಿವಿಧ ಇಲಾಖೆಗಳು ಅಧಿಕಾರಿಗಳು ಸಭೆಯಲ್ಲಿ ಅಧಿಕಾರಿಗಳು ಭಾಗವಹಿಸಿದ್ದರು.