ಶಿಕಾರಿಪುರ: ಗ್ರಾಮ ಪಂಚಾಯಿತಿ ಎಂದರೆ ಅಕ್ಷರಶಃ ನಮ್ಮ ಸರ್ಕಾರ. ಅಧಿಕಾರ ವಿಕೇಂದ್ರೀಕರಣದಿಂದ ಪಂಚಾಯಿತಿಗಳಿಗೆ ಭೀಮಬಲ ಬಂದಿದೆ. ಸಾಕಷ್ಟು ಅನುದಾನವನ್ನು ಸರ್ಕಾರ ನೀಡುವುದರಿಂದ ಅಭಿವೃದ್ಧಿ ಕಾರ್ಯಗಳಾಗುತ್ತವೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.
ಶುಕ್ರವಾರ ಸಮೀಪದ ಗಾಮ ಗ್ರಾಮದ ಗ್ರಾಪಂ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರ ಗ್ರಾಪಂ ಸದಸ್ಯರು ಹಾಗೂ ಇತರರಿಗೆ ವೇತನ ಏರಿಸಲು ಸಾಕಷ್ಟು ಪರಿಶ್ರಮ ಹಾಕಿ ಸಫಲವಾಗಿದೆ. ಇಲ್ಲಿನ ಅಧ್ಯಕ್ಷರೇ ಈ ಗ್ರಾಮದ ಪ್ರಥಮ ಪ್ರಜೆ ಆಗಿರುವುದರಿಂದ ಸಕಾಲದಲ್ಲಿ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಅನುದಾನವನ್ನು ಬಳಸಿಕೊಂಡು ಗ್ರಾಮದ ರಸ್ತೆ , ನೈರ್ಮಲ್ಯೀಕರಣ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸುತ್ತಾರೆ. ನಮ್ಮ ಪಂಚಾಯಿತಿ ನಮ್ಮ ಹೆಮ್ಮೆ ಎಂದರು.
ಈಸೂರು, ಗಾಮದಂತಹ ಹಳ್ಳಿಗಳು ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಪ್ರಮುಖ ಪಾತ್ರ ವಹಿಸಿವೆ. ಸ್ವಾತಂತ್ರ್ಯ ಪ್ರೇಮವನ್ನು ಸೃಜಿಸುವ ಕಾರ್ಯವನ್ನು ಮಾಡಿವೆ. ಈ ಮಣ್ಣಿನಲ್ಲಿ ದೇಶಭಕ್ತಿಯ ಹರಿವಿದೆ. ಮಹಾತ್ಮ ಗಾಂಧಿ ಹೇಳುವಂತೆ ಗ್ರಾಮರಾಜ್ಯದಿಂದ ರಾಮರಾಜ್ಯ ಸಾಧ್ಯ. ಪ್ರತಿ ಹಳ್ಳಿಗಳು ಉದ್ಧಾರವಾದಾಗ ಮಾತ್ರ ದೇಶದ ಉದ್ಧಾರ ಸಾಧ್ಯ. ರೈತರ ಮೊಗದಲ್ಲಿ ಮಂದಹಾಸ ಮೂಡಿದರೆ ಈ ನಾಡು ಸಮೃದ್ಧಿ ಆಗುತ್ತದೆ. ಸಕಾಲದಲ್ಲಿ ಮಳೆಯಾಗದೆ ಇದ್ದುದರಿಂದ ಮೆಕ್ಕೆಜೋಳ ಜೌಗಾಗಿ ರೈತರಿಗೆ ನಷ್ಟವಾಗಿದೆ. ಇದಕ್ಕೆ ಪೂರಕವಾದ ಪರಿಹಾರವನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ಗ್ರಾಪಂ ಅಧ್ಯಕ್ಷ ಪ್ರತಾಪ್ ಮಾತನಾಡಿ, ಅಂದಾಜು 20 ಲಕ್ಷ ರೂ. ವೆಚ್ಚದಲ್ಲಿ ಸಭಾಭವನ ನಿರ್ಮಾಣ ಮಾಡಲಾಗಿದೆ. ಇದರಿಂದ ಪಂಚಾಯಿತಿಯ ವಿವಿಧ ಸಭೆ ಸಮಾರಂಭಗಳಿಗೆ ಅನುಕೂಲವಾಗಲಿದೆ. ಅಭಿವೃದ್ಧಿಯೇ ನಮ್ಮ ಮೊದಲ ಆದ್ಯತೆಯಾಗಿದೆ. ಅಭಿವೃದ್ಧಿಯ ಪಥದಲ್ಲಿ ಎಲ್ಲ ಸದಸ್ಯರ ಸಲಹೆ ಮಾರ್ಗದರ್ಶನ ಪಡೆದು ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಸ್ವಚ್ಛ ಸುಂದರ ಗಾಮ ನಿರ್ಮಾಣವೇ ನಮ್ಮೆಲ್ಲರ ಗುರಿ ಎಂದು ಹೇಳಿದರು.
ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಗ್ರಾಪಂ ಉಪಾಧ್ಯಕ್ಷೆ ರೇಣುಕಮ್ಮ, ಚನ್ನವೀರಪ್ಪ, ಶಿವಮೂರ್ತಿ, ರಾಜೇಶ್ವರಿ ಆರಾಧ್ಯ, ದಿಲ್ಶೇದ್ ಬಾನು, ಬಿ.ಎಂ.ದಯಾನಂದ್, ಗೋಪಿ, ಬಿದರಳ್ಳಿ ಈರೇಶ್, ನಾಗರಾಜ್ ಎಂ.ಕೋಮಲಾ ಇತರರಿದ್ದರು.