ಹುಬ್ಬಳ್ಳಿ: ಅಂಗವಿಕಲರ ಬೇಡಿಕೆ ಹಾಗೂ ಹಕ್ಕೊತ್ತಾಯಕ್ಕಾಗಿ ಕರ್ನಾಟಕ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂದ ವತಿಯಿಂದ ಹಾವೇರಿ ನಗರದಲ್ಲಿ ಡಿ. 1ರಂದು ಬೆಳಗ್ಗೆ 10ಕ್ಕೆ ರಾಜ್ಯ ಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಂದ ಅಧ್ಯಕ್ಷ ಮಹದೇವ ಹಡಪದ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ಕಡೆಗಳಿಂದ ಸುಮಾರು 15 ಸಾವಿರ ಅಂಗವಿಕಲರು ಸಮಾವೇಶದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. 2016ರ ಅಂಗವಿಕಲರ ಕಾಯ್ದೆಯ ಪ್ರತಿಯನ್ನು ಪ್ರತಿಯೊಬ್ಬರಿಗೂ ಹಂಚುವ ಉದ್ದೇಶ ಹೊಂದಲಾಗಿದೆ. ಇದರಿಂದ ತಮ್ಮ ಹಕ್ಕುಗಳನ್ನು ತಿಳಿದುಕೊಳ್ಳಲು ನೆರವಾಗಲಿದೆ ಎಂದರು.
ಬೇರೆ ರಾಜ್ಯಗಳಿಗೆ ಹೋಲಿಸಿದರೆ ಅಂಗವಿಕಲರ ಮಾಸಾಶನ ಕಡಿಮೆಯಾಗಿದೆ, ಸರ್ಕಾರ ನೀಡಿದ ಅನುದಾನ ಸಮರ್ಪಕ ಬಳಕೆಯಾಗುತ್ತಿಲ್ಲ, ಪ್ರತ್ಯೇಕ ರೇಶನ್ ಕಾರ್ಡ್ ವಿತರಣೆ, ಖಾಸಗಿ ಕಂಪನಿಗಳಲ್ಲೂ ಉದ್ಯೋಗ ಮೀಸಲಾತಿ ನೀಡಬೇಕು. ಅಂಗವಿಕಲರಿಗಾಗಿ ಪ್ರತ್ಯೇಕ ಸಚಿವಾಲಯ ಪ್ರಾರಂಭಿಸಿ ಇಲ್ಲವೇ ನಿಗಮ ಸ್ಥಾಪನೆ ಮಾಡಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಗುವುದು.
ನಕಲಿ ಅಂಗವಿಕಲರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು, ಅಂಗವಿಕಲರ ಹೆಸರಿನಲ್ಲಿ ಎನ್ ಜಿಒ ಆರಂಭಿಸಿ ವಂಚಿಸುತ್ತಿರುವುದನ್ನು ತಡೆ ಹಿಡಿಯಬೇಕು. ಅಂಗವಿಕಲರಿಗೆ ನೇರವಾಗಿ ಸರ್ಕಾರದ ಸೌಲಭ್ಯಗಳು ದೊರೆಯುವಂತೆ ಮಾಡಬೇಕು ಎಂದು ಆಗ್ರಹಿಸಿದರು.
ಅಂಗವಿಕಲರಿಗೆ ಶಕ್ತಿ ತುಂಬುವ ಸಲುವಾಗಿ ರಾಜ್ಯಾದ್ಯಂತ ಸಂಚಾರ ಕೈಗೊಂಡು ಸಂಟನೆ ಗಟ್ಟಿಗೊಳಿಸಲಾಗುವುದು, ಮುಂದಿನ ದಿನಗಳಲ್ಲಿ ನಮ್ಮ ಹಕ್ಕುಗಳಿಗಾಗಿ ಹೋರಾಟ ತೀವ್ರಗೊಳಿಸಲಾಗುವುದು ಎಂದರು.
ಸಂಘದ ಪ್ರಭಾವತಿ ತಿಳವಳ್ಳಿ, ಧರ್ಮಪ್ಪ ರಾಮಾಪುರ, ಇತರರು ಗೋಷ್ಠಿಯಲ್ಲಿದ್ದರು.