ಉಪ್ಪಿನಬೆಟಗೇರಿ: ಸಾಲ ಬಾಧೆಯಿಂದ ರೈತನೊಬ್ಬ ನುಶಿ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡ ತಾಲೂಕಿನ ಹನುಮನಾಳ ಗ್ರಾಮದಲ್ಲಿ ಬುಧವಾರ ಜರುಗಿದೆ.
ಮೆಳೆಪ್ಪ ಶಂಕ್ರೆಪ್ಪ ಗಬ್ಬೂರ (52) ಎಂಬ ರೈತನೆ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಹನುಮನಾಳ ಗ್ರಾಮದಲ್ಲಿ ತನ್ನ ತಾಯಿಯ ಹೆಸರಿನಲ್ಲಿದ್ದ 2 ಎಕರೆ 16 ಗುಂಠೆ ಜಮೀನಿನ ಮೇಲೆ ಉಪ್ಪಿನಬೆಟಗೇರಿ ಕೆವಿಜಿ ಬ್ಯಾಂಕ್ ನಲ್ಲಿ ಬೆಳೆಸಾಲ, ಧರ್ಮಸ್ಥಳ ಸಂಘ, ಧಾರವಾಡದ ಐ.ಡಿ.ಎಫ್ ಸಿ ಬ್ಯಾಂಕ್ ಸೇರಿದಂತೆ ಖಾಸಗಿ ವ್ಯಕ್ತಿಗಳ ಬಳಿ ಲಕ್ಷಾಂತರ ರೂ. ಸಾಲ ಮಾಡಿಕೊಂಡು ತುಂಬುತ್ತ ಬಂದಿದ್ದ. ಈ ಬಾರಿ ಹೊಲದಲ್ಲಿ ಬಿತ್ತನೆ ಮಾಡಿದ ಹೆಸರು ಬೆಳೆ ಉತ್ತಮವಾಗಿ ಫಸಲು ಬರುವ ನಿರೀಕ್ಷೆಯಲ್ಲಿದ್ದ. ಆದರೆ ವಿಪರೀತ ಮಳೆಯಿಂದ ಬಿತ್ತನೆ ಮಾಡಿದ್ದ ಹೆಸರು ಬೆಳೆ ಹಾಳಾಗಿದ್ದು, ಮಾಡಿದ ಸಾಲ ಹೇಗೆ ತೀರಿಸಬೇಕು ಎಂಬ ಚಿಂತೆಯಿಂದ ಮನನೊಂದು ಆ.12 ರಂದು ಗ್ರಾಮದ ಬಳಿ ಇರುವ ಖಾಸಗಿಯವರ ಜಮೀನಿನಲ್ಲಿ ನುಶಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದನು. ವಿಷಯ ತಿಳಿದ ಸ್ಥಳೀಯರು ಈತನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಆ.13 ರಂದು ಮೃತಪಟ್ಟಿದ್ದಾನೆ ಎಂದು ಮೃತನ ಪತ್ನಿ ಮಹಾದೇವಿ ಗಬ್ಬೂರ ಗರಗ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.