ಜಿಲ್ಲೆ

ರಾಜ್ಯದ ಆರ್ಥಿಕ ವ್ಯವಸ್ಥೆ ವ್ಹೀಲ್​ ಚೇರ್​ ಮೇಲಿರುವುದು 'ಗ್ಯಾರಂಟಿ'

ಜಗನ್ನಾಥ್ ಕಾಳೇನಹಳ್ಳಿ

ತುಮಕೂರು: ಈ ರಾಜ್ಯದ ಆರ್ಥಿಕ ವ್ಯವಸ್ಥೆ ಗಾಲಿ ಕುರ್ಚಿ ಮೇಲೆಯೇ ಇರಬೇಕಾಗುತ್ತದೆ. ಇದನ್ನು ಯಾರಾದರೂ ತಳ್ಳಿಕೊಂಡು ಹೋಗಬೇಕಾದ ಪರಿಸ್ಥಿತಿ ಎದುರಾಗಲಿದೆ ಎಂದು ಗ್ರಾಮಾಂತರ ಶಾಸಕ ಬಿ.ಸುರೇಶಗೌಡ ಲೇವಡಿ ಮಾಡಿದರು.

ವಿಧಾನಸಭೆಯಲ್ಲಿ ಸೋಮಾರ ರಾತ್ರಿ ಬಜೆಟ್​ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಂಚ ಗ್ಯಾರಂಟಿ ಯೋಜನೆಗಳು ಮತ್ತು ಅವುಗಳ ಜಾರಿಯಿಂದ ಉಂಟಾದ ಆರ್ಥಿಕ ಅಶಿಸ್ತಿನಿಂದಾಗಿ ಸಿಎಂ ಸಿದ್ದರಾಮಯ್ಯ ಪ್ರಗತಿಪರ ರಾಜ್ಯದ ಆರ್ಥಿಕತೆಯನ್ನು ಗಾಲಿ ಕುರ್ಚಿ ಮೇಲೆ ಬಿಟ್ಟು ಹೋಗುತ್ತಿದ್ದಾರೆ ಎಂದು ಟೀಕಿಸಿದರು.

ಸಿದ್ದರಾಮ್ಯನವರು ಈಗ ಕಾಲಿನ ನೋವಿನಿಂದ ವ್ಹೀಲ್​ ಚೇರ್​ ಮೇಲೆ ಅಡ್ಡಾಡುತ್ತಿದ್ದಾರೆ. ಅವರು ಬೇಗ ಚೇತರಿಸಿಕೊಂಡು ಎಂದಿನಂತೆ ನಡೆಯುವಂತೆ ಆಗಲಿ. ರಾಜ್ಯದ ಬಜೆಟ್​ ಗಾತ್ರ 4.8 ಲಕ್ಷ ಕೋಟಿ ಇದ್ದರೆ ಸಾಲದ ಹೊರೆ 7.64 ಲಕ್ಷಕೋಟಿ ಆಗಿದೆ. ರಾಜ್ಯದ ಪ್ರತಿಯೊಬ್ಬ ಪ್ರಜೆ ತಲೆ ಮೇಲೂ 1 ಲಕ್ಷ ಸಾಲ ಹೊರೆ ಬಿದ್ದಿದೆ. ಇದಕ್ಕೆ ಪಂಚ ಗ್ಯಾರಂಟಿ ಯೋಜನೆಗಳು ಕಾರಣ. ಈ ಯೋಜನೆಗಳನ್ನು ಅರ್ಹರಿಗೆ ಮಾತ್ರ ಕೊಟ್ಟು ಉಳಿದ ಹಣವನ್ನು ರಾಜ್ಯದ ಭೌತಿಕ ಅಭಿವೃದ್ಧಿಗೆ ಬಳಸಬೇಕು.

ಈ ಸರ್ಕಾರದ ಮೊದಲ ಆದ್ಯತೆಯೇ ಸಾಲ ಮರುಪಾವತಿಯಾಗಿದೆ. ಒಂದು ರೂಪಾಯಿಯಲ್ಲಿ 18 ಪೃಸೆ ಸಾಲ ಮರುಪಾವತಿಗೇ ಹೋಗುತ್ತದೆ. ಉಳಿದ ಅಭಿವೃದ್ಧಿ ಯೋಜನೆಗಳು ನಂತರದ ಸ್ಥಾನದಲ್ಲಿ ಇವೆ. ಹೀಗಿರುವಾಗ ಬಡತನ ನಿವಾರಣೆ ಆಗುವುದು ಹೇಗೆ ಸಾಧ್ಯ? ಕಳೆದ ಬಜೆಟ್​ನಲ್ಲಿ ನೀರಾವರಿಗೆ 16 ಸಾವಿರ ಕೋಟಿ ಮೀಸಲಿಡಲಾಗಿತ್ತು. ಈ ಬಾರಿ 22ಸಾವಿರ ಕೋಟಿ ರೂ., ಅನುದಾನ ನೀಡಲಾಗಿದೆ. ಇದರಲ್ಲಿ ಎತ್ತಿನಹೊಳೆ ಯೋಜನೆಯನ್ನು ಪೂರ್ಣಗೊಳಿಸುತ್ತೇವೆ ಅನ್ನುತ್ತಾರೆ. ಆಲಮಟ್ಟಿ 3ನೇ ಹಂತದ ಯೋಜನೆಯನ್ನು ಪೂರ್ಣ ಮಾಡುತ್ತೇವೆ ಎನ್ನುತ್ತಾರೆ. ಇದು ಸಾಧ್ಯವೇ? ಇದೊಂದು ಜನವಿರೋಧಿ ಬಜೆಟ್​. ಇದನ್ನು ತಾವು ವಿರೋಧಿಸುವುದಾಗಿ ಹೇಳಿದರು.