ಮಂಡ್ಯದಲ್ಲಿ ಕುಮಾರಣ್ಣನಿಗೆ ಭರ್ಜರಿ ಮತವಂತೆ ಸಂಸತ್ತಿಗೆ ಹೋಗೊದು ಡಾಕ್ಟ್ರಾ, ಡಿಕೆಸುನಾ?
ಗಂಗಾಧರ್ ಬೈರಾಪಟ್ಟಣ ರಾಮನಗರ
ರಾಜ್ಯದಲ್ಲಿ ಲೋಕಸಮರದ ಮೊದಲ ಹಂತದ ಮತದಾನ ಶುಕ್ರವಾರ ಮುಗಿದಿದ್ದು, ಫಲಿತಾಂಶಕ್ಕೆ ಇನ್ನೂ 37 ದಿನಗಳು ಬಾಕಿ ಇದೆ. ಆದರೆ, ಫಲಿತಾಂಶದ ಲೆಕ್ಕಾಚಾರ ಆರಂಭಗೊಂಡಿದ್ದು, ರಾಮನಗರ ಜಿಲ್ಲೆಯ ಜತೆಜತೆಗೆ ಪಕ್ಕದ ಮಂಡ್ಯ ಜಿಲ್ಲೆಯ ರಾಜಕಾರಣವೇ ಸದ್ದು ಮಾಡುತ್ತಿದೆ.
ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರ ಕುಣಿಗಲ್, ಚನ್ನಪಟ್ಟಣ, ಕನಕಪುರ ತಾಲೂಕಿನ ಗಡಿಯನ್ನು ಹಂಚಿಕೊಂಡಿವೆ. ಹಿಂದೆ ಸಾಕಷ್ಟು ಚುನಾವಣೆಗಳು ಮಂಡ್ಯದಲ್ಲಿ ನಡೆದಿದ್ದರೂ, ಕಳೆದ ಬಾರಿ ನಿಖಿಲ್ ಕುಮಾರಸ್ವಾಮಿ ಅವರ ಸ್ಪರ್ಧೆಯಿಂದ ಚರ್ಚೆಗೆ ಗ್ರಾಸವಾಗಿದ್ದ ಮಂಡ್ಯ ಕ್ಷೇತ್ರ ಈ ಬಾರಿ ಕುಮಾರಸ್ವಾಮಿ ಅವರ ಸ್ಪರ್ಧೆಯಿಂದಾಗಿ ಕುತೂಹಲಕ್ಕೆ ಕಾರಣವಾಗಿದೆ. ಇನ್ನು ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರ ಡಾ.ಸಿ.ಎನ್.ಮಂಜುನಾಥ್ ಮತ್ತು ಡಿ.ಕೆ.ಸುರೇಶ್ ಅವರ ಸ್ಪರ್ಧೆಯಿಂದ ಪ್ರತಿಷ್ಠಿತ ಕ್ಷೇತ್ರವಾಗಿದ್ದು, ಆಗಿರುವ ಮತದಾನದ ಪ್ರಮಾಣವನ್ನು ತಾಳೆ ಮಾಡುತ್ತಾ ಸೋಲು-ಗೆಲುವಿನ ಲೆಕ್ಕಾಚಾರ ಆರಂಭಗೊಂಡಿದೆ.
ಮಂಡ್ಯದಂತೆಯೇ ರಾಮನಗರವೂ ಜೆಡಿಎಸ್‌ನ ಭದ್ರಕೋಟೆ. ಎಚ್.ಡಿ.ಕುಮಾರಸ್ವಾಮಿ ಅವರು ಪ್ರತಿನಿಧಿಸುತ್ತಿರುವ ಜಿಲ್ಲೆ ರಾಮನಗರ ಆಗಿರುವುದರಿಂದ ಮಂಡ್ಯದ ರಾಜಕೀಯ ವಿದ್ಯಮಾನಗಳು ಜಿಲ್ಲೆಯ ಜನತೆಗೆ ಬೇಕಿದೆ. ಮಂಡ್ಯದಲ್ಲಿ ನಡೆದಿರುವ ದಾಖಲೆ ಪ್ರಮಾಣದ ಮತದಾನ ಮುಂದಿಟ್ಟುಕೊಂಡು, ಕುಮಾರಸ್ವಾಮಿ ಅವರಿಗೆ ಇಷ್ಟು, ಸ್ಟಾರ್ ಚಂದ್ರು ಅವರಿಗೆ ಅಷ್ಟು ಮತಗಳು ಸಂದಾಯವಾಗಿವೆ.
ಮಂಡ್ಯದ ಎಲ್ಲ ಕ್ಷೇತ್ರಗಳಲ್ಲಿ ಕುಮಾರಣ್ಣನಿಗೆ ಭರ್ಜರಿಯಾಗಿ ಮತ ಸಂದಾಯವಾಗಿವೆ. ಸ್ಟಾರ್ ಚಂದ್ರುಗೆ ಹಿನ್ನಡೆಯಂತೆ ಎಂದು ಒಂದು ವರ್ಗ ಚರ್ಚಿಸುತ್ತಿದ್ದರೆ ಅತ್ತ ಮಂಡ್ಯದಲ್ಲಿ ಕಾಂಗ್ರೆಸ್ ಪ್ರಾಬಲ್ಯವಿದೆ, ಕುಮಾರಣ್ಣನಿಗೆ ಸೋಲು ಗ್ಯಾರಂಟಿ. ಚಲುವಣ್ಣ ಸುಮ್ನೆನಾ ಎನ್ನುವ ಮಾತುಗಳೂ ಕೇಳಿ ಬರುತ್ತಿವೆ. ಇತ್ತ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಗ್ಗೆಯೂ ಚರ್ಚೆಗಳು ವ್ಯಾಪಕವಾಗಿದ್ದು, 1972ರ ನಂತರ ಇದೇ ಮೊದಲ ಬಾರಿಗೆ ಹೆಚ್ಚಿನ ಪ್ರಮಾಣದ ಮತದಾನವಾಗಿದ್ದು, ಇದರ ಲಾಭ ಯಾರಿಗೆ ಎನ್ನುವ ಚರ್ಚೆಗಳು ಹುಟ್ಟಿಕೊಂಡಿವೆ.
ಕುಣಿಗಲ್‌ನಲ್ಲಿ ಜಾಸ್ತಿ ಆಗಿದೆ, ಬೆಂಗಳೂರು ದಕ್ಷಿಣದಲ್ಲಿ 4 ಲಕ್ಷ ವೋಟ್ ಆಗಿದೆಯಂತೆ. ಇದರಿಂದ ಡಾಕ್ಟ್ರು ಗೆಲ್ತಾರಾ? ಇಲ್ಲಾ ಸುರೇಶ್‌ಗೆ ಲಾಭಾನಾ ಎನ್ನುವ ಚರ್ಚೆಗಳು ಶುರುವಾಗಿವೆ. ಉಳಿದಂತೆ ಹಾಸವ ಬೇರೇಯದ್ದೇ ದೃಷ್ಟಿಯಿಂದ ಚರ್ಚೆಯಲ್ಲಿರುವುದು ಬಿಟ್ಟರೆ ಬೇರೆ ಕ್ಷೇತ್ರಗಳ ಬಗ್ಗೆ ಅಷ್ಟೊಂದು ವಿಶ್ಲೇಷಣೆ ಆರಂಭಗೊಂಡಿಲ್ಲ.
ಜಿಲ್ಲೆಯಲ್ಲಿ ಫಲಿತಾಂಶದ ಮೇಲೆ ನಡೆಯುವ ಜೂಜು ಇನ್ನು ತೀವ್ರ ಸ್ಪರೂಪ ಪಡೆದುಕೊಂಡಿಲ್ಲ. ಫಲಿತಾಂಶ ಜೂ.4ರಂದು ಪ್ರಕಟಗೊಳ್ಳುವ ಹಿನ್ನೆಲೆಯಲ್ಲಿ ಈಗ ಚರ್ಚೆಗಳಿಗಷ್ಟೇ ಸೀಮಿತವಾಗುತ್ತಿದ್ದು, ಅಲ್ಲಲ್ಲಿ ಸಣ್ಣ ಪುಟ್ಟ ಪ್ರಮಾಣದಲ್ಲಿ ಬಾಜಿ ಕಟ್ಟುವವರನ್ನು ಬಿಟ್ಟರೆ ದೊಡ್ಡ ಪ್ರಮಾಣದ ಅಖಾಡ ಇನ್ನೂ ಸಿದ್ಧಗೊಂಡಿಲ್ಲ.
ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಒಟ್ಟು 2,829 ಮತಗಟ್ಟೆಗಳಲ್ಲಿ ಒಂದೇಒಂದು ಮತಗಟ್ಟೆಯಲ್ಲಿಯೂ ಶೇ.100 ಮತದಾನ ಸಾಧಿಸಿಲ್ಲ.
ತಿಂಗಳಿನಿಂದಲೂ ಹೆಚ್ಚು ಕಾಲದಿಂದ ಚುನಾವಣಾ ಕಣದಲ್ಲಿ ಸಾಕಷ್ಟು ಹೋರಾಟ ಮಾಡಿದ್ದ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಸದ್ಯ ರಿಲ್ಯಾಕ್ಸ್ ಮೂಡ್‌ನಲ್ಲಿ ಇದ್ದಂತೆ ಕಂಡು ಬಂದರೂ, ಮತದಾರರು ಹಾಗೂ ಪ್ರಮುಖ ಮುಖಂಡರೊಂದಿಗಿನ ಸಂಪರ್ಕ ಕಳೆದುಕೊಳ್ಳುವ ಕೆಲಸಕ್ಕೆ ಕೈ ಹಾಕಲಿಲ್ಲ. ಬಿಜೆಪಿ-ಜೆಡಿಎಸ್ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಅವರು ಹುಲಿಯೂರು ದುರ್ಗದ ಕಿಚ್ಚವಾಡಿ ಗ್ರಾಮಕ್ಕೆ ತೆರಳಿ, ಅನುಮಾನಾಸ್ಪದವಾಗಿ ಮೃತಪಟ್ಟ ವಾಟರ್ ಮನ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ನಂತರ ಮಾಗಡಿಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಚರ್ಚೆ ನಡೆಸಿ ಬೆಂಗಳೂರಿಗೆ ತೆರಳಿದರು. ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಸಹ ರಿಲ್ಯಾಕ್ಸ್ ಮೂಡ್‌ನಲ್ಲಿ ಇದ್ದಂತೆ ಕಂಡು ಬಂದಿದ್ದು, ಕೆಲ ಮುಖಂಡರೊಂದಿಗೆ ಬೆಂಗಳೂರಿನಲ್ಲಿ ಚರ್ಚೆ ನಡೆಸಿ, ಉಳಿದಂತೆ ಬೆಂಗಳೂರಿನಲ್ಲಿಯೇ ಇದ್ದರು ಎಂದು ತಿಳಿದು ಬಂದಿದೆ.