_upscale 
ಜಿಲ್ಲೆ

ವಿದ್ಯಾರ್ಥಿಗಳ ಸಾಧನೆಗೆ ಧ್ಯಾನ ಸಹಕಾರಿ

ಎ. ಆರ್. ರಘುರಾಮ

ತಾಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಚರ್ಚಾ ಸ್ಪರ್ಧೆ

ಪಿರಿಯಾಪಟ್ಟಣ : ವಿದ್ಯಾರ್ಥಿಗಳ ಸಾಧನೆಗೆ ಧ್ಯಾನ ಸಹಕಾರಿಯಾಗಲಿದೆ ಎಂದು ರಾವಂದೂರಿನ ಮುರುಘಾಮಠ ಬಸವ ಕೇಂದ್ರದ ಶ್ರೀ ಮೋಕ್ಷಪತಿ ಸ್ವಾಮೀಜಿ ಹೇಳಿದರು. ತಾಲೂಕಿನ ರಾವಂದೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘ ಶುಕ್ರವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಚರ್ಚಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಧ್ಯಾನದಿಂದ ಅನೇಕ ಉಪಯೋಗಗಳಿವೆ. ದೈನಂದಿನ ಒತ್ತಡದ ಚಟುವಟಿಕೆಗಳ ನಡುವೆ ಪ್ರತಿನಿತ್ಯ ಕನಿಷ್ಠ 10 ನಿಮಿಷಗಳ ಕಾಲ ಧ್ಯಾನದಲ್ಲಿ ತೊಡಗಿದರೆ ಇಡೀ ದಿನ ಮನಸ್ಸನ್ನು ಶಾಂತಿಯುತವಾಗಿ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಹಿರಿಯರಿಗೂ ಈ ಸೂತ್ರ ಫಲಕಾರಿ ಎಂದರು. ಮನಸ್ಸು ಉಲ್ಲಸಿತವಾಗಿದ್ದಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗೆ ಅನುಕೂಲಕರವಾಗಲಿದೆ. ಪಾಠ, ಪ್ರವಚನಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಲು ಪ್ರೇರಕವಾಗುತ್ತದೆ ಎಂದು ಶ್ರೀ ಮೋಕ್ಷಪತಿ ಸ್ವಾಮೀಜಿ ನುಡಿದರು.

ವಿದ್ಯಾವಂತರಾಗಿದ್ದೇವೆ: ಶಿಕ್ಷಣ ತಜ್ಞ ಹಾಗೂ ಶಾಲೆಯ ಹಿರಿಯ ವಿದ್ಯಾರ್ಥಿ ಆರ್. ಡಿ. ಸತೀಶ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಶಾಲೆಗಳು ಇಲ್ಲದ ಸಂದರ್ಭದಲ್ಲೇ ಗ್ರಾಮದ ಹಿರಿಯರ ಪರಿಶ್ರಮದಿಂದ ರಾವಂದೂರಿನಲ್ಲಿ ಶಾಲೆ ತೆರೆಯಲಾಗಿದೆ. ಇಲ್ಲಿ ಶಿಕ್ಷಕರ ಕೃಪೆಯಿಂದ ವಿದ್ಯೆ ಕಲಿತ ನಾವು ವಿದ್ಯಾವಂತರಾಗಿದ್ದೇವೆ ಎಂದರು.

ನಮ್ಮ ವ್ಯಾಸಂಗ ಕಾಲದಲ್ಲಿ ಇದೇ ಶಾಲೆಯಲ್ಲಿ ನಡೆಯುತ್ತಿದ್ದ ಚರ್ಚಾ ಸ್ಪರ್ಧೆಗಳಿಗೆ ಜಿಲ್ಲಾ ಮಟ್ಟ ದಿಂದಲೂ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದರು. ಒಬ್ಬರಿಗಿಂತ ಒಬ್ಬರು ಉತ್ತಮವಾಗಿ ಮಾತನಾಡಿ ಬಹುಮಾನ ಪಡೆದುಕೊಳ್ಳುತ್ತಿದ್ದರು. ಇಂಥ ಸ್ಪರ್ಧೆಗಳಿಂದ ವಿದ್ಯಾರ್ಥಿಗಳ ಜ್ಞಾನ ಶಕ್ತಿ, ವಿಷಯ ಸಂಗ್ರಹ ಸಾಮರ್ಥ್ಯ ಹೆಚ್ಚಾಗುತ್ತದೆ ಎಂದವರು ಹೇಳಿದರು. ಹಿರಿಯ ವಿದ್ಯಾರ್ಥಿಗಳ ಸಂಘದಿಂದ ಮತ್ತೆ ಚರ್ಚಾಸ್ಪರ್ಧೆ ಆರಂಭಿಸಿರುವುದು ಶ್ಲಾಘನೀಯ ಎಂದರು.

ತರಬೇತಿ ಮುಖ್ಯ: ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರೊಫೆಸರ್ ಹಾಗೂ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಆರ್.ಎಸ್. ದೊಡ್ಡಣ್ಣ ಮಾತನಾಡಿ, ಪ್ರಜಾಪ್ರಭುತ್ವ ಬಲಗೊಳ್ಳಬೇಕು ಎಂದರೆ ಉತ್ತಮ ನಾಯಕರನು ಇಂದಿನಿಂದಲೇ ತಯಾರಿ ಮಾಡಬೇಕು. ವಿದ್ಯಾರ್ಥಿ ದಿಸೆಯಲ್ಲಿಯೇ ಈ ತರಬೇತಿ ದೊರಕಬೇಕು. ಅದಕ್ಕಾಗಿ ಚರ್ಚಾ ಸ್ಪರ್ಧೆ ಪೂರಕವಾಗಲಿದೆ ಎಂದರು. ತಾಲೂಕಿನ ಹಾರನಹಳ್ಳಿ ಮತ್ತು ರಾವಂದೂರು ಗ್ರಾಮಗಳಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ಗಳು ಇವೆ. ಶಾಲೆಗೆ ಉತ್ತಮ ಸಭಾಂಗಣ ಮತ್ತು ಗ್ರಂಥಾಲಯದ ಅಗತ್ಯವಿದೆ. ದಾನಿಗಳು ಸಹಕರಿಸಬೇಕು ಎಂದರು. ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದ ಗೌರವಾಧ್ಯಕ್ಷರೂ ಆಗಿರುವ ಸಚಿವ ಕೆ.ವೆಂಕಟೇಶ್ ಅವರೊಂದಿಗೆ ಚರ್ಚಿಸಿ, ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಪೂರೈಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗೋಣ ಎಂದರು. ಪಿಎಂ ಪೋಷಣ ಶಕ್ತಿ ನಿರ್ಮಾಣ ಯೋಜನೆಯ ತಾಲೂಕು ಸಹಾಯಕ ನಿರ್ದೇಶಕ ಎಂ.ಸಿ.ಪ್ರಶಾಂತ್, ಶಾಲೆಯ ಪ್ರಾಂಶುಪಾಲ ಲಕ್ಷ್ಮಿಕಾಂತ, ಉಪ ಪ್ರಾಂಶುಪಾಲ ಆರ್. ಸುರೇಶ, ಬೆಟ್ಟದಪುರ ಅನಿಕೇತನ ಪದವಿ ಪೂರ್ವ ಕಾಲೇಜಿನ ಕಾರ್ಯದರ್ಶಿ ಡಾ.ಜೆ.ಸೋಮಣ್ಣ ಇದ್ದರು.

ಬಹುಮಾನ ವಿಜೇತರು: ಮೊಬೈಲ್ ಫೋನ್ ಬಳಕೆ ವಿದ್ಯಾರ್ಥಿಗಳಿಗೆ ಪೂರಕ- ಮಾರಕ ಎಂಬ ವಿಷಯದ ಬಗ್ಗೆ ನಡೆದ ಚರ್ಚಾ ಸ್ಪರ್ಧೆಯಲ್ಲಿ ತಾಲೂಕಿನ 29 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಬೆಟ್ಟದಪುರ ಸಂಯುಕ್ತ ಪ.ಪೂ. ಕಾಲೇಜಿನ ಪ್ರೌಢಶಾಲೆಯ ಪ್ರೀತಿ ಪ್ರಥಮ, ಹುಣಸವಾಡಿ ಸರ್ಕಾರಿ ಪ್ರೌಢಶಾಲೆಯ ಮಾನಸಾ ದ್ವಿತೀಯ, ಪಿರಿಯಾಪಟ್ಟಣ ಬಾಲಕರ ಸರ್ಕಾರಿ ಪ.ಪೂ. ಕಾಲೇಜು ಪ್ರೌಢಶಾಲಾ ವಿದ್ಯಾರ್ಥಿ ಸಂಕೀರ್ತತಾ ತೃತೀಯ, ಅತ್ತಿಗೋಡು ಸರ್ಕಾರಿ ಪ್ರೌಢಶಾಲೆಯ ಶ್ರಾವ್ಯಾ ಹಾಗೂ ರಾವಂದೂರು ಪಬ್ಲಿಕ್ ಸ್ಕೂಲ್ನ ಪುಷ್ಪಲತಾ ಸಮಾಧಾನಕರ ಬಹುಮಾನ ಗಳಿಸಿದರು. ಗ್ರಾಪಂ ಅಧ್ಯಕ್ಷೆ ಸುಜಾತಾ, ಮಾನಸ ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ಚಿಕ್ಕವೀರಪ್ಪ, ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಲಿಲ್ಲಿ ಮೇರಿ, ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಎಚ್. ಆರ್. ಕುಮಾರ್, ಮಹೇಶ್, ಸುರೇಶ, ಶಿವಕುಮಾರಿ ಹಾಜರಿದ್ದರು.