ವಿಜಯವಾಣಿ ಸುದ್ದಿಜಾಲ ಹೊಸೂರು
ಪೊಲೀಸರ ನಿರ್ಲಕ್ಷ್ಯದಿಂದ ನಾವಿಬ್ಬರು ಸಾವಿಗೆ ಶರಣಾಗುತ್ತಿದ್ದೇವೆ ಎಂದು ಡೆತ್‌ನೋಟ್ ಬರೆದಿಟ್ಟು ತಾಯಿ ಹಾಗೂ ಮಗಳು ಆತ್ಮಹತ್ಯೆಗೆ ಶರಣಾದ ಪ್ರಕರಣ ಗುರುವಾರ ಉಂಗಟ್ಟಿ ಗ್ರಾಮದಲ್ಲಿ ನಡೆದಿದೆ. ತಾಯಿ ಕಾಮಾಕ್ಷಿ (40) ಹಾಗೂ ಆಕೆ ಮಗಳು ಕಾವ್ಯಾ(19) ಮೃತ ದುರ್ದೈವಿಗಳು. ಸ್ಥಳಕ್ಕೆ ಭೇಟಿ ನೀಡಿದ ಬೇರಿಕೈ ಠಾಣೆ ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಏನಿದು ಪ್ರಕರಣ? ಹೊಸೂರು ಸಮೀಪದ ಉಂಗಟ್ಟಿ ಗ್ರಾಮದ ಗಿರಿ (21) ಎಂಬ ಯುವಕ ಕೆಲ ದಿನಗಳ ಹಿಂದೆ ಹೊಸೂರು ಕೃಷ್ಣಗಿರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಅಘಾತದಲ್ಲಿ ತೀವ್ರ ಗಾಯಗೊಂಡಿದ್ದ, ಸೇಲಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಕಾರಿಯಾಗದೆ ಮೃತಪಟ್ಟಿದ್ದ. ಪೊಲೀಸರು ರಸ್ತೆ ಅಪಘಾತದಲ್ಲಿ ಸಾವು ಎಂದು ಪ್ರಕರಣ ದಾಖಲಿಸಿದ್ದರು. ಆದರೆ ಈ ಬಗ್ಗೆ ಅನುಮಾನಗೊಂಡ ತಾಯಿ ಕಾಮಾಕ್ಷಿ ಹಾಗೂ ಮಗಳು ಗಿರಿಯನ್ನು ಕೊಲೆ ಮಾಡಿರುವ ಶಂಕೆ ಇದೆ. ಈ ಬಗ್ಗೆ ತನಿಖೆ ನಡೆಸಬೇಕು ಗಿರಿ ಸಾವಿಗೆ ನ್ಯಾಯ ಕೊಡಿಸಬೇಕು ಎಂದು ಪೊಲೀಸರಿಗೆ ದುಂಬಾಲು ಬಿದ್ದಿದ್ದರು. ಕೆಲವು ವ್ಯಕ್ತಿಗಳ ಮೇಲೆ ಅನುಮಾನವಿದೆ ಅವರನ್ನು ವಿಚಾರಣೆ ನಡೆಸಬೇಕು ಎಂದು ಒತ್ತಾಯಿಸಿದ್ದರು. ಆದರೆ ಈ ಬಗ್ಗೆ ಪೊಲೀಸರು ಯಾವುದೇ ಕ್ರಮಕ್ಕೆ ಮುಂದಾಗಿರಲಿಲ್ಲ ಎನ್ನಲಾಗಿದೆ.
ತಂಗಿಯಿಂದ ಡೆತ್‌ನೋಟ್: ಅಣ್ಣ ಗಿರಿ ಸಾವಿನ ಬಗ್ಗೆ ಸಂದೇಹವಿದೆ, ಈ ಬಗ್ಗೆ ತನಿಖೆ ನಡೆಸುವಂತೆ ಹಲವು ಬಾರಿ ಸೂಳಗಿರಿ ಠಾಣೆ ಪೊಲೀಸರಿಗೆ ಒತ್ತಾಯಿಸಿದರೂ ಯಾವುದೇ ಪ್ರಯೋಜವಾಗಲಿಲ್ಲ. ಸಾವಿನ ತನಿಖೆ ನಡೆಸುವಂತೆ ಎಷ್ಟು ಬೇಡಿಕೊಂಡರೂ ಪೊಲೀಸರು ಸ್ಪಂದಿಸಿಲ್ಲ ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಲಾಗಿದೆ. ಪ್ರೀತಿಯಿಂದ ಅಣ್ಣ ಉಡುಗೊರೆಯಾಗಿ ನೀಡಿದ ಬಂಗಾರದ ಸರವನ್ನು ಸತ್ತ ಮೇಲೆ ನನ್ನ ಕೊರಳದಿಂದ ತೆಗೆಯಬೇಡಿ ನಾನು ಮತ್ತು ಅಮ್ಮಾ ನನ್ನ ಅಣ್ಣ ಬಳಿ ಹೋಗುತ್ತಿದ್ದೇವೆ ಎಂದು ಕಾವ್ಯಾ ಡೆತ್‌ನೋಟ್ ಬರೆದಿದ್ದಾರೆ.
ಗ್ರಾಮಸ್ಥರಿಂದ ಪ್ರತಿಭಟನೆ:ಸ್ಥಳಕ್ಕೆ ದೌಡಾಯಿಸಿದ ಬೇರಿಕೈ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಶವಗಳನ್ನು ಸಾಗಿಸಲು ಮುಂದಾದ ವೇಳೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಠಾಣೆಯಲ್ಲಿ ತಾಯಿ ಹಾಗೂ ಮಗಳಿಗೆ ನ್ಯಾಯ ದೊರಕಿಸಿಕೊಡದ ಹಿನ್ನೆಲೆಯಲ್ಲಿ ಇಂಥ ಸಾವು ಸಂಭವಿಸಿದೆ, ಪೊಲೀಸರ ಕಾರಣದಿಂದ ಎರಡು ಜೀವಗಳು ಪ್ರಾಣಬಿಟ್ಟಿವೆ ಎಂದು ಗ್ರಾಮಸ್ಥರು ಕಿಡಿಕಾರಿ ರಸ್ತೆ ತಡೆ ನಡೆಸಿದರು.
ಎಸ್‌ಪಿ ಭರವಸೆ:ಹೊಸೂರು ಡಿಎಸ್‌ಬಿ ಬಾಬು ಪ್ರಶಾಂತ್ ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದರು. ಆದರೂ ಜಗ್ಗದ ಗ್ರಾಮಸ್ಥರು ಶವ ಸಾಗಿಸದಂತೆ ಪಟ್ಟು ಹಿಡಿದರು. ಬಳಿಕ ಸ್ಥಳಕ್ಕೆ ದೌಡಾಯಿಸಿದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸೂರೂಜ್ ಕುಮಾರ್ ಠಾಕೂರ್ ಗ್ರಾಮಸ್ಥರೊಂದಿಗೆ ಮಾತನಾಡಿ ಪರಿಸ್ಥಿತಿ ತಿಳಿಗೊಳಿಸಿದರು. ಈ ಬಗ್ಗೆ ತನಿಖೆ ನಡೆಸಿ ಪೊಲೀಸರ ವಿರುದ್ಧ ಕ್ರಮಜರುಗಿಸಲಾಗುಉದು ಎಂದು ಭರವಸೆ ನೀಡಿದ ಬಳಿಕ ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟರು. ಮರಣೋತ್ತರ ಪರೀಕ್ಷೆಗೆ ಶವಗಳನ್ನು ರವಾನಿಸಲಾಯಿತು. ಪೊಲೀಸರ ವಿರುದ್ಧ ತನಿಖೆ ನಡೆಸುವಂತೆ ಎಸ್‌ಪಿ ಆದೇಶಿಸಿದ್ದಾರೆ.