ಜಿಲ್ಲೆ

ರಸ್ತೆ ಗುಂಡಿಗಳಿಗೆ ಬೇಸತ್ತು ಬೆಂಗಳೂರನ್ನೇ ತೊರೆಯಲು ಮುಂದಾದ ಬ್ಲ್ಯಾಕ್‌ಬಕ್‌ ಕಂಪನಿ: ಆಂಧ್ರದಿಂದ ಬಂತು ಆಫರ್​! Pothole

Pothole : ವಿಶ್ವಮಟ್ಟದಲ್ಲಿ ಖ್ಯಾತಿ ಪಡೆದಿರುವ ರಾಜಧಾನಿ ಬೆಂಗಳೂರು ಐಟಿ-ಬಿಟಿ ಹಬ್ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಇಲ್ಲಿ ಸಿಗುವಂತಹ ಸೌಕರ್ಯಗಳಿಂದಾಗಿ ವಿದೇಶ ಸೇರಿದಂತೆ ಅನೇಕ ಕಂಪನಿಗಳು ಇಲ್ಲಿ ತಮ್ಮದೇಯಾದ ಶಾಖೆಯನ್ನು ಸ್ಥಾಪಿಸಿವೆ. ಗೂಗಲ್​, ಅಮೆಜಾನ್​, ಮೈಕ್ರೋಸಾಫ್ಟ್​ ಸೇರಿದಂತೆ ಅನೇಕ ಜಾಗತಿಕ ಕಂಪನಿಗಳ ಕಚೇರಿಗಳು ಇಲ್ಲಿವೆ. ಸಾವಿರಾರು ಕಂಪನಿಗಳಿಗೆ ಬೆಂಗಳೂರು ತವರೂರಾಗಿದೆ. ಆದರೆ, ರಸ್ತೆ ಗುಂಡಿಯಿಂದಾಗಿ ಕಂಪನಿಯೊಂದು ಬೆಂಗಳೂರನ್ನೇ ತೊರೆಯಲು ಮುಂದಾಗಿದೆ ಅಂದರೆ, ನೀವು ನಂಬುತ್ತೀರಾ? ನಂಬಲು ಅಸಾಧ್ಯ ಎನಿಸಿದರು ಇದೇ ಸತ್ಯ.

ಹೌದು, ಬೆಂಗಳೂರಿಗರಿಗೆ ಕಾಡುತ್ತಿರುವ ಅನೇಕ ಸಮಸ್ಯೆಗಳಲ್ಲಿ ರಸ್ತೆ ಗುಂಡಿ ಸಮಸ್ಯೆಯು ಒಂದು. ಇದೇನು ಕೇವಲ ಸಣ್ಣ ಸಮಸ್ಯೆಯಲ್ಲ. ಇದೊಂದು ದೊಡ್ಡ ಸಮಸ್ಯೆ ಎಂದೇ ಹೇಳಬಹುದು. ಏಕೆಂದರೆ, ಅನೇಕರ ಜೀವ ಇದೇ ರಸ್ತೆ ಗುಂಡಿಯಿಂದ ಹೋಗಿದೆ. ಅಲ್ಲದೆ, ಅನೇಕ ಮಂದಿ ಇದೇ ರಸ್ತೆ ಗುಂಡಿಗಳಿಂದಾಗಿ ಕೈ ಕಾಲುಗಳನ್ನು ಮುರಿದುಕೊಂಡು ಹಾಸಿಗೆ ಹಿಡಿದಿದ್ದಾರೆ. ಇದೀಗ ಇದೇ ರಸ್ತೆ ಗುಂಡಿಗಳಿಗೆ ಹೆದರಿ ಕಂಪನಿಯೊಂದು ಬೆಂಗಳೂರನ್ನೇ ಬಿಟ್ಟು ಹೋಗಲು ನಿರ್ಧರಿಸಿದೆ.

ಸ್ಥಳಾಂತರ ಮಾಡ್ತೀವಿ

ಆನ್‌ಲೈನ್ ಟ್ರಕ್ಕಿಂಗ್ ಪ್ಲಾಟ್‌ಫಾರ್ಮ್ ಬ್ಲ್ಯಾಕ್‌ಬಕ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ರಾಜೇಶ್ ಯಬಾಜಿ ಅವರು ಪ್ರಯಾಣದಲ್ಲಿ ಉಂಟಾಗುತ್ತಿರುವ ತೊಂದರೆಗಳು ಮತ್ತು ಕಳಪೆ ರಸ್ತೆ ಮೂಲಸೌಕರ್ಯವನ್ನು ಉಲ್ಲೇಖಿಸಿ ಬೆಂಗಳೂರಿನ ಹೊರ ವರ್ತುಲ ರಸ್ತೆ (ORR) ಯಲ್ಲಿರುವ ತನ್ನ ಬೆಳ್ಳಂದೂರು ಕಚೇರಿಯನ್ನು ಸ್ಥಳಾಂತರ ಮಾಡುತ್ತಿರುವುದಾಗಿ ಘೋಷಿಸಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್​ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಯಬಾಜಿ ಅವರು, ಕಳೆದ 9 ವರ್ಷಗಳಿಂದ ಬೆಳ್ಳಂದೂರು ಹೊರ ವರ್ತುಲ ರಸ್ತೆಯಲ್ಲಿರುವ ನಮ್ಮ ಕಚೇರಿ, ನಮ್ಮ ಮನೆ ಆಗಿದೆ. ಆದರೆ, ಇದೀಗ ಇಲ್ಲಿ ಮುಂದುವರಿಯುವುದು ತುಂಬಾ ಕಷ್ಟವಾಗುತ್ತಿದೆ. ನಾವು ಹೊರಗೆ ಹೋಗಲು ನಿರ್ಧರಿಸಿದ್ದೇವೆ ಎಂದಿದ್ದಾರೆ.

ಬದಲಾಗುವ ಸೂಚನೆ ಕಾಣಿಸುತ್ತಿಲ್ಲ

ತಮ್ಮ ನಿರ್ಧಾರಕ್ಕೆ ಕಾರಣಗಳನ್ನು ಸಹ ಯಬಾಜಿ ಅವರು ವಿವರಿಸಿದ್ದಾರೆ. ದಿನ ನಿತ್ಯದ ಪ್ರಯಾಣಕ್ಕೆ ನನ್ನ ಸಹೋದ್ಯೋಗಿಗಳಿಗೆ ಸರಾಸರಿ ಒಂದೂವರೆ ಗಂಟೆಗಳಿಗಿಂತ ಹೆಚ್ಚು ಸಮಯ ಹಿಡಿಯುತ್ತಿದೆ. ಅದು ಕೂಡ ಒನ್​ ವೇನಲ್ಲಿ. ರಸ್ತೆಗಳೆಲ್ಲ ಗುಂಡಿಗಳು ಮತ್ತು ಧೂಳಿನಿಂದ ತುಂಬಿ ಹೋಗಿವೆ. ಅವುಗಳನ್ನು ಸರಿಪಡಿಸುವ ಕನಿಷ್ಠ ಉದ್ದೇಶವನ್ನು ತೋರುತ್ತಿಲ್ಲ. ಮುಂದಿನ 5 ವರ್ಷಗಳಲ್ಲಿ ಇವುಗಳಲ್ಲಿ ಯಾವುದೂ ಬದಲಾಗುವ ಸೂಚನೆ ನನಗೆ ಕಾಣುತ್ತಿಲ್ಲ ಎಂದು ಯಬಾಜಿ ಅವರು ಎಕ್ಸ್​ನಲ್ಲಿ ತಿಳಿಸಿದ್ದಾರೆ.

ಆಂಧ್ರದಿಂದ ಆಫರ್​

ಯಬಾಜಿ ಅವರು ಟ್ವೀಟ್​ ಮಾಡುತ್ತಿದ್ದಂತೆ ಬೇರೆ ರಾಜ್ಯದ ಕೆಲ ರಾಜಕೀಯ ನಾಯಕರು ಬ್ಲ್ಯಾಕ್‌ಬಕ್‌ ಕಂಪನಿಗೆ ಆಫರ್​ ನೀಡುತ್ತಿದ್ದಾರೆ. ಆಂಧ್ರ ಪದೇಶದ ಎಚ್​ಆರ್​ಡಿ ಸಚಿವ ನಾರಾ ಲೋಕೇಶ್​ ಅವರು ತಮ್ಮ ರಾಜ್ಯಕ್ಕೆ ಬಂದು ಕಂಪನಿ ತೆರೆಯುವಂತೆ ಆಹ್ವಾನ ನೀಡಿದ್ದಾರೆ. ನಮ್ಮ ರಾಜ್ಯಕ್ಕೆ ಬಂದರೆ ನಿಮಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ನಾವು ಕೊಡುತ್ತೇವೆ ಎಂದಿದ್ದಾರೆ.

ಸರ್ಕಾರದ ವಿರುದ್ಧ ಆಕ್ರೋಶ

ಇನ್ನು ಯಬಾಜಿ ಅವರು ಉದ್ಯೋಗಿಗಳ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಕ್ಕಾಗಿ ಅನೇಕ ನೆಟ್ಟಿಗರು ಅವರ ಬೆಂಬಲಕ್ಕೆ ನಿಂತರೆ, ಇನ್ಫೋಸಿಸ್‌ನ ಮಾಜಿ ಸಿಎಫ್‌ಒ ಮತ್ತು ಆರಿನ್ ಕ್ಯಾಪಿಟಲ್ ಮುಖ್ಯಸ್ಥ ಮೋಹನದಾಸ್ ಪೈ ಅವರು ಬ್ಲ್ಯಾಕ್‌ಬಕ್ ನಡೆಯನ್ನು "ಬೆಂಗಳೂರಿನಲ್ಲಿ ಆಡಳಿತದ ದೊಡ್ಡ ವೈಫಲ್ಯ" ಎಂದು ವ್ಯಾಖ್ಯಾನಿಸಿದ್ದಾರೆ. ಅಲ್ಲದೆ, ಸಿಎಂ ಹಾಗೂ ಡಿಸಿಎಂಗೆ ಟ್ವೀಟ್​ ಟ್ಯಾಗ್​ ಮಾಡಿದ್ದಾರೆ. ಮೋಹನ್​ದಾಸ್​ ಪೈ ಅವರ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿರುವ ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ, ಇದು ನಿಜಕ್ಕೂ ಗಂಭೀರ ವಿಷಯ. ಈ ಸಮಸ್ಯೆಗಳನ್ನು ಸರಿಪಡಿಸಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅವಶ್ಯಕತೆ ಇದೆ ಎಂದಿದ್ದಾರೆ.

ಇನ್ನು ಗ್ರೇಟರ್ ಬೆಂಗಳೂರು ಐಟಿ ಕಂಪನಿಗಳು ಮತ್ತು ಕೈಗಾರಿಕೆಗಳ ಸಂಘದ ಪ್ರಧಾನ ಕಾರ್ಯದರ್ಶಿ ಕೃಷ್ಣ ಕುಮಾರ್ ಗೌಡ ಅವರು ಈ ವಿಚಾರವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ORR ಉದ್ದಕ್ಕೂ ಮೂಲಸೌಕರ್ಯ ನಿರ್ಲಕ್ಷ್ಯವು ಗಂಭೀರ ಕಳವಳಕಾರಿಯಾಗಿದೆ ಎಂದರು. ಇದೀಗ ಅನೇಕ ಕಂಪನಿಗಳು ಬೆಂಗಳೂರು ತೊರೆಯುವ ನಿರ್ಧಾರ ತೆಗೆದುಕೊಳ್ಳುತ್ತಿವೆ. ಹೀಗಾಗಿ ಸರ್ಕಾರ ತುರ್ತು ಹಸ್ತಕ್ಷೇಪ ಮಾಡಬೇಕಿದೆ. ರಸ್ತೆಗಳು, ಮೆಟ್ರೋ ಸಂಪರ್ಕ ಮತ್ತು ಸಾರ್ವಜನಿಕ ಉಪಯುಕ್ತತೆಗಳನ್ನು ಸುಧಾರಿಸಲು ಪಾರದರ್ಶಕ ಮಾರ್ಗಸೂಚಿಗಾಗಿ ನಾವು ಒತ್ತಾಯಿಸುತ್ತೇವೆ. ಭಾರತದ ತಂತ್ರಜ್ಞಾನ ರಾಜಧಾನಿ ಎನಿಸಿಕೊಂಡಿರುವ ಬೆಂಗಳೂರಿನ ಸ್ಥಾನಮಾನವನ್ನು ಮರುಸ್ಥಾಪಿಸಲು ಅಧಿಕಾರಿಗಳೊಂದಿಗೆ ನಾವು ಉತ್ತಮವಾಗಿ ಸಹಕರಿಸುತ್ತೇವೆ ಎಂದಿದ್ದಾರೆ.

ನಾವು ಬದ್ಧರಾಗಿದ್ದೇವೆ ಎಂದ ಡಿಸಿಎಂ

ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಸೆಪ್ಟೆಂಬರ್ 14 ರಂದೇ ನಗರವು ರಸ್ತೆ ಅಭಿವೃದ್ಧಿಯಲ್ಲಿ ಪ್ರಮುಖ ಉತ್ತೇಜನ ಪಡೆದಿದೆ. ದುರಸ್ತಿ ಮತ್ತು ನಿರ್ಮಾಣಕ್ಕಾಗಿ 1,100 ಕೋಟಿ ರೂ.ಗಳನ್ನು ಸರ್ಕಾರ ಹಂಚಿಕೆ ಮಾಡಿದೆ. ಈ ಅನುದಾನದಿಂದ ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೂ ಪ್ರಯೋಜನವಾಗುವಂತೆ ನೋಡಿಕೊಳ್ಳಲು ಮತ್ತು ನಗರದಾದ್ಯಂತ ಸುಗಮ, ಗುಂಡಿ-ಮುಕ್ತ ರಸ್ತೆಗಳನ್ನು ನಿರ್ಮಿಸಲು ನಾವು ಬದ್ಧರಾಗಿದ್ದೇವೆ ಎಂದಿದ್ದಾರೆ. (ಏಜೆನ್ಸೀಸ್​)