ಜಿಲ್ಲೆ

ಉಪ ಬಂಧೀಖಾನೆಯಲ್ಲಿ ಬಂಧಿತನ ಸಾವು, ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಆಕ್ರೋಶ

ಚಿಕ್ಕಬಳ್ಳಾಪುರ: ಉಪ ಬಂಧೀಖಾನೆಯಲ್ಲಿ ಗೌರಿಬಿದನೂರಿನ ನಗರಗೆರೆ ವೆಂಕಟೇಶಪ್ಪ ಸಾವಿನ ಪ್ರಕರಣದ ಸಮಗ್ರ ತನಿಖೆ ಹಾಗೂ ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಒತ್ತಾಯಿಸಿ ದಲಿತ ಸಂರ್ಷ ಸಮಿತಿ ಪ್ರತಿಭಟಿಸಿತು.
ಚಿಕ್ಕಬಳ್ಳಾಪುರದ ಅಂಬೇಡ್ಕರ್ ವೃತ್ತದಲ್ಲಿ ಧಿಕ್ಕಾರದ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಮೃತನ ಕುಟುಂಬಕ್ಕೆ ನ್ಯಾಯವನ್ನು ಒದಗಿಸಲು ಆಗ್ರಹಿಸಿದ್ದಾರೆ.
ಫೋಕ್ಸೋ ಪ್ರಕರಣದಡಿ ಪರಿಶಿಷ್ಟ ಜಾತಿಗೆ ಸೇರಿದ ವೆಂಕಟೇಶಪ್ಪ ಎಂಬುವವರನ್ನು ಬಂಧಿಸಿ, ಉಪ ಬಂಧೀಖಾನೆಯಲ್ಲಿರಿಸಿದ್ದು ಇದೇ ವೇಳೆ ಅಪಸ್ಮಾರ ಕಾಯಿಲೆಯಿಂದ ಅಸ್ವಸ್ಥಗೊಂಡರೂ ಆರೋಪಿಗೆ ಚಿಕಿತ್ಸೆ ಕೊಡಿಸಿಲ್ಲ. ಬದಲಿಗೆ ನಾಟಕವಾಡಲಾಗುತ್ತಿದೆ ಎಂಬ ಭಾವನೆಯಲ್ಲಿ ಕಡೆಗಣಿಸಲಾಗಿದೆ. ಇದರ ಬಗ್ಗೆ ಮಾಹಿತಿ ತಿಳಿದುಕೊಂಡು ಕುಟುಂಬಸ್ಥರು ಭೇಟಿ ಮಾಡಲು ಯತ್ನಿಸಿದರೂ ವೀಕ್ಷಣೆಗೆ ಅವಕಾಶ ನೀಡಿಲ್ಲ. ಕೊನೆಗೆ ಅಸ್ವಸ್ಥಗೊಂಡು ವೆಂಕಟೇಶಪ್ಪ ಮೃತಪಟ್ಟ ಬಳಿಕ ಮೊದಲೇ ಕಾಯಿಲೆ ಇರುವುದರ ಬಗ್ಗೆ ಹೇಳಿ ನುಣುಚಿಕೊಳ್ಳಲಾಗುತ್ತಿದೆ ಎಂದು ದಲಿತ ಸಂರ್ಷ ಸಮಿತಿ ರಾಜ್ಯ ಸಂಚಾಲಕ ಕೆ.ಸಿ.ರಾಜಾಕಾಂತ್ ಆರೋಪಿಸಿದ್ದಾರೆ.
ಬಂಧೀಖಾನೆಯಲ್ಲಿ ಸೂಕ್ತ ವ್ಯವಸ್ಥೆ ಇಲ್ಲದೇ ಅನೇಕ ಕೈದಿಗಳು ಮೃತಪಡುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಆದರೂ ಸಹ ಜೈಲಿನ ಸಿಬ್ಬಂದಿ ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ವೆಂಕಟೇಶಪ್ಪ ಸಾವಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ಕೈಗೊಳ್ಳಬೇಕು. ಹಾಗೆಯೇ ನಿರ್ಲಕ್ಷö್ಯ ತೋರಿದವರಿಗೆ ಕಾನೂನು ಪ್ರಕಾರ ಶಿಕ್ಷೆ ಹಾಗೂ ಸಂತ್ರಸ್ಥ ಕುಟುಂಬಕ್ಕೆ ನೆರವು ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ದಲಿತ ಸಂರ್ಷ ಸಮಿತಿ ರಾಜ್ಯ ಸಂಚಾಲಕ ಎನ್.ವೆಂಕಟೇಶ್, ಜಿಲ್ಲಾ ಸಂಚಾಲಕರಾದ ಸಿ.ಜಿ.ಗಂಗಪ್ಪ, ಬಿ.ವಿ.ವೆಂಕಟರವಣಪ್ಪ, ಸಂಟನಾ ಸಂಚಾಲಕ ಎನ್.ಎ.ವೆಂಕಟೇಶಪ್ಪ, ಖಜಾಂಚಿ ಜಿ.ವಿ.ಗಂಗಪ್ಪ, ಸಾಂಸತಿಕ ಸಂಚಾಲಕ ಬಿ.ವಿ.ಆನಂದ್, ತಾಲೂಕು ಸಂಚಾಲಕ ಪಿ.ನರಸಿಂಹಮೂರ್ತಿ ಮತ್ತಿತರರು ಭಾಗವಹಿಸಿದ್ದರು.