ಜಿಲ್ಲೆ

ಇಬ್ಬರು ಅಯ್ಯಪ್ಪ ಮಾಲಾಧಾರಿಗಳ ಸಾವು

ಹುಬ್ಬಳ್ಳಿ: ಸಿಲಿಂಡರ್ ಸ್ಫೋಟದಲ್ಲಿ ಗಾಯಗೊಂಡಿದ್ದ 9 ಅಯ್ಯಪ್ಪ ಮಾಲಾಧಾರಿಗಳಲ್ಲಿ ಇಬ್ಬರು ಇಲ್ಲಿಯ ಕೆಎಂಸಿಆರ್‌ಐನಲ್ಲಿ ಗುರುವಾರ ಬೆಳಗ್ಗೆ 2.30ರ ಸುಮಾರಿಗೆ ಮೃತಪಟ್ಟಿದ್ದಾರೆ.

ಉಣಕಲ್‌ನ ನಿವಾಸಿಗಳಾದ ಬಿಎ ವಿದ್ಯಾರ್ಥಿ ಸಂಜಯ ಸವದತ್ತಿ (18), ಗೌಂಡಿ ಕೆಲಸ ಮಾಡಿಕೊಂಡಿದ್ದ ನಿಜಲಿಂಗಪ್ಪ ಬೇಪುರಿ (ಅಜ್ಜಾಸ್ವಾಮಿ) (58) ಮೃತರು.

ಸಂಜಯ ಖಾಸಗಿ ಕಾಲೇಜ್‌ನಲ್ಲಿ ಓದುತ್ತಿದ್ದ. ಇದೇ ಮೊದಲ ಬಾರಿ ಅಯ್ಯಪ್ಪ ಸ್ವಾಮಿ ಮಾಲೆಧಾರಿಯಾಗಿದ್ದ. ನಿಜಲಿಂಗಪ್ಪ ಅವರು ಮೂರನೇ ಬಾರಿ ಮಾಲೆ ಧರಿಸಿದ್ದರು. ಡಿ. 23ರಂದು ಬೆಳಗ್ಗೆ ನಡೆದಿದ್ದ ಸಿಲಿಂಡರ್ ಸ್ಪೋಟದಲ್ಲಿ ಶೇ. 70ರಷ್ಟು ದೇಹದ ಭಾಗ ಸುಟ್ಟು ಹೋಗಿತ್ತು. ಬುಧವಾರ ಊಟ ಮಾಡುವುದಾಗಿಯೂ ಇಬ್ಬರು ತಿಳಿಸಿದ್ದರು. ನಿಯಮಿತವಾಗಿ ಆಹಾರವನ್ನೂ ಪೂರೈಸಲಾಗಿತ್ತು. ರಾತ್ರಿಯಿಡೀ ಗಾಯಾಳುಗಳು ಅಯ್ಯಪ್ಪನ ನಾಮಸ್ಮರಣೆ ಮಾಡುತ್ತಿದ್ದರು ಎಂದು ಕೆಲ ಅಯ್ಯಪ್ಪ ಮಾಲಾಧಾರಿಗಳು ತಿಳಿಸಿದರು.

ಆದರೆ, ಬೆಳಗ್ಗೆ ಮೃತಪಟ್ಟಿರುವುದು ಕೇಳಿ ಕುಟುಂಬದವರು ದಿಗ್ಭ್ರಾಂತರಾಗಿದ್ದು, ಶವಾಗಾರದ ಮುಂದೆ ಆಕ್ರಂದನ ಮುಗಿಲು ಮುಟ್ಟಿತ್ತು.

ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಜಿಲ್ಲಾಧಿಕಾರಿ ದಿವ್ಯಪ್ರಭು, ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಕೆಎಂಸಿಆರ್‌ಐ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ, ವೈದ್ಯಕೀಯ ಅಧೀಕ್ಷಕ ಡಾ. ಈಶ್ವರ ಹಸಬಿ, ತಹಸೀಲ್ದಾರ್ ಕಲಗೌಡ ಪಾಟೀಲ, ಪ್ರೇಮನಾಥ ಚಿಕ್ಕತುಂಬಳ ಇತರರು ಆಗಮಿಸಿದ್ದರು. ಇವರೆಲ್ಲ ಸೂಚನೆ ಮೇರೆಗೆ ಶವಾಗಾರದಿಂದ ಮಾಲಾಧಾರಿಗಳ ಶವವನ್ನು ಅಂತ್ಯ ಸಂಸ್ಕಾರಕ್ಕೆ ಆಂಬುಲೆನ್ಸ್‌ನಲ್ಲಿ ಕಳುಹಿಸಿಕೊಡಲಾಯಿತು.