ಮೈಸೂರು: ಪಿಎಸ್‌ಐ ಪರಶುರಾಮ್ ಆತ್ಮಹತ್ಯೆಗೆ ಕಾರಣವಾಗಿರುವ ಶಾಸಕ ಚಿನ್ನಾರೆಡ್ಡಿ ಪಾಟೀಲ್ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು. ಜತೆಗೆ, ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.
ಪುರಭವನದ ಬಳಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 7 ತಿಂಗಳ ಹಿಂದಷ್ಟೇ ಯಾದಗಿರಿ ನಗರ ಪೊಲೀಸ್ ಠಾಣೆಗೆ ಪಿಎಸ್‌ಐ ಪರಶುರಾಮ್ ವರ್ಗಾವಣೆಯಾಗಿದ್ದರು. ಅದೇ ಸ್ಥಾನದಲ್ಲಿ ಮುಂದುವರಿಯಲು 30 ಲಕ್ಷ ರೂ.ಬೇಡಿಕೆ ಇಟ್ಟು ಶಾಸಕ ಚಿನ್ನಾರೆಡ್ಡಿ ಪಾಟೀಲ್ ಮತ್ತು ಆತನ ಮಗ ಸನ್ನಿಗೌಡ ಮಾನಸಿಕವಾಗಿ ಹಿಂಸಿಸಿ, ಅವಮಾನಿಸಿ, ಖಿನ್ನತೆಗೊಳಗಾಗುವಂತೆ ಮಾಡಿದ್ದರು.
ಇದು ಪರಶುರಾಮ್ ಆತ್ಮಹತ್ಯೆಗೆ ಶರಣಾಗಲು ಕಾರಣವಾಗಿದೆ ಎಂದು ಅವರ ಪತ್ನಿ ಎನ್.ವಿ.ಶ್ವೇತಾ ತಮ್ಮ ದೂರಿನಲ್ಲಿ ಸಲ್ಲಿಸಿದ್ದು, ಈ ದುರ್ಘಟನೆಯಿಂದ ನಾಗರಿಕ ಸಮಾಜವು ತಲೆತಗ್ಗಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಲಿತ ಸಂಘರ್ಷ ಸಮಿತಿಯ ಸಂಚಾಲಕ ಚೋರನಹಳ್ಳಿ ಶಿವಣ್ಣ ಮಾತನಾಡಿ, ಈ ಆತ್ಮಹತ್ಯೆ ಪ್ರಕರಣವನ್ನು ಉನ್ನತ ಮಟ್ಟದ ತನಿಖೆ ನಡೆಸಬೇಕು. ಶಾಸಕ ಚಿನ್ನಾರೆಡ್ಡಿ ಪಾಟೀಲ್, ಅವರ ಪುತ್ರ ಸನ್ನಿಗೌಡ ವಿರುದ್ಧ ಕಾನೂನು ಕ್ರಮ ಜರುಗಿಸಿ ಶಾಸಕರ ಆಸ್ತಿ ಮುಟ್ಟಗೋಲು ಹಾಕಿ ಮೃತ ಅಧಿಕಾರಿಯ ಕುಟುಂಬಕ್ಕೆ ಹಸ್ತಾಂತರಿಸಬೇಕು.
ಮೃತ ಅಧಿಕಾರಿ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಿ 50 ಲಕ್ಷ ರೂ. ಪರಿಹಾರ ನೀಡಬೇಕು. ಎಲ್ಲ ಇಲಾಖೆಗಳಲ್ಲೂ ಕೌನ್ಸಿಲಿಂಗ್ ಮೂಲಕವೇ ವರ್ಗಾವಣೆ ನೀತಿ ಜಾರಿ ಮಾಡಬೇಕು. ಈ ಮೂಲಕ ವರ್ಗಾವಣೆಯಲ್ಲಿ ರಾಜಕಾರಣಿಗಳ ಹಸ್ತಕ್ಷೇಪ ತಡೆಗಟ್ಟುವ ಕಾಯ್ದೆ ರೂಪಿಸಬೇಕು ಎಂದು ಒತ್ತಾಯಿಸಿದರು.
ಸಮಿತಿಯ ಸದಸ್ಯರಾದ ಮರಿಸ್ವಾಮಿ, ಮನೋಜ್, ಪ್ರಭಾಕರ್, ಅಣ್ಣಯ್ಯ ಇನ್ನಿತರರು ಇದ್ದರು.