ಮುಳಬಾಗಿಲು : ತಾಲೂಕಿನ ಮುರುಕನಕುಂಟೆಯಲ್ಲಿ ರೈತರೊಬ್ಬರು ಶನಿವಾರ (ನ.23) ಹೃದಯಾಘಾತದಿಂದ ಮೃತಪಟ್ಟಿದ್ದು, ಇದಕ್ಕೆ ಅರಣ್ಯ ಇಲಾಖಾಧಿಕಾರಿಗಳ ಒತ್ತಡವೇ ಕಾರಣ ಎಂಬ ಆರೋಪದ ನಡುವೆಯೇ ಮಂಗಳವಾರ ಮತ್ತೊಬ್ಬ ರೈತ ಹೃದಯಾಘಾತದಿಂದ ಅಸುನೀಗಿದ್ದು, ಅರಣ್ಯ ಇಲಾಖೆ ವಿರುದ್ಧ ಆಕ್ರೋಶಕ್ಕೆ ಎಡೆಮಾಡಿದೆ.
ಕಗ್ಗಲನತ್ತ ಗ್ರಾಮದ ವೆಂಕಟರಾಮಪ್ಪ (68) ಮೃತರಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಮನೆಗೆ ನುಗ್ಗಿ ದಬ್ಬಾಳಿಕೆ ಮಾಡಿ, ಬಂಧಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದರಿಂದ ಮಂಗಳವಾರ ರಾತ್ರಿ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆ ಎಂದು ಮೃತನ ಪುತ್ರಿ ವರಲಕ್ಷಿ$್ಮ ನಂಗಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪಿಎಸ್ಐ ಅರ್ಜುನ್ಗೌಡ, ಯುಡಿಆರ್ ಪ್ರಕರಣ ದಾಖಲಿಸಿಕೊಂಡು ಮುಳಬಾಗಿಲು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ
ನಡೆಸಿ ಶವವನ್ನು ಕುಟುಂಬಸ್ಥರಿಗೆ ಒಪ್ಪಿಸಿದ್ದು, ಸಂಜೆ ಅಂತ್ಯಕ್ರಿಯೆ ನಡೆಸಲಾಗಿದೆ.
ಏನಿದು ವಿವಾದ?: -ಕಗ್ಗಲನತ್ತ ಗ್ರಾಮದ ದಲಿತ ರೈತ ವೆಂಕಟರಾಮಪ್ಪ ಅವರಿಗೆ 1991&-92ನೇ ಸಾಲಿನಲ್ಲಿ ಗ್ರಾಮದ ಸರ್ವೇ ನಂ.2ರ 453 ಎಕರೆಯಲ್ಲಿ 1.36 ಎಕರೆ ಭೂಮಿಯನ್ನು ಸರ್ಕಾರ ಮಂಜೂರು ಮಾಡಿ ತಾಲೂಕು ಆಡಳಿತ ಪಹಣಿ ಮ್ಯುಟೇಶನ್ ನೀಡಿತ್ತು. ಜಮೀನಿನಲ್ಲಿ ಮಾವು ಹಾಗೂ ಇತರ ಮರಗಳನ್ನು ನೆಡಲಾಗಿತ್ತು. ಇದರ ನಡುವೆ ರೈತ ಕುಟುಂಬ ಜೀವನ ನಿರ್ವಹಣೆಗೆಂದು ಬೆಂಗಳೂರಿನಲ್ಲಿ ಕೂಲಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಅರಣ್ಯ ಇಲಾಖೆ ಸದರಿ ಜಮೀನನ್ನು ವಶಕ್ಕೆ ಪಡೆದಿದೆ.
ಕರೊನಾ ವೇಳೆ ಗ್ರಾಮಕ್ಕೆ ವಾಪಸ್ ಬಂದ ವಿ.ವೆಂಕಟರಾಮಪ್ಪ ಅಂದಿನಿಂದಲೂ ಭೂಮಿಯನ್ನು ವಾಪಸ್ ಪಡೆಯಲು ಹೋರಾಟ ನಡೆಸುತ್ತಿದ್ದರು. ಕಳೆದ ಶುಕ್ರವಾರ ಈ ಬಗ್ಗೆ ಗ್ರಾಮದ 29 ರೈತ ಕುಟುಂಬಗಳು ಜಮೀನುಗಳಿಗೆ ಹೋಗಿ ಸ್ವಾಧಿನಕ್ಕೆ ಮುಂದಾಗಿದ್ದರು. ಈ ಸಮಯದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ರೈತರ ನಡುವೆ ತಳ್ಳಾಟ&ನೂಕಾಟ ನಡೆದಿದ್ದು, ಈ ಬಗ್ಗೆ ನಂಗಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ನಡುವೆಯೂ ಅರಣ್ಯ ಇಲಾಖೆ ಅಧಿಕಾರಿಗಳು, ರೈತರ ವಾಹನಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ಬಂಧನಕ್ಕೆ ಸಿದ್ಧತೆ ನಡೆಸುತ್ತಿದ್ದರು ಎಂದು ರೈತರು ಆರೋಪ ಮಾಡಿದ್ದಾರೆ.
ಕೊರಗಿನಲ್ಲೇ ಹೃದಯಾಘಾತ: ಶನಿವಾರ ಕಗ್ಗಲನತ್ತ ಬಳಿಯ ಮುರುಕನಕುಂಟೆ ಗ್ರಾಮದ ರೈತ ಅಬ್ದುಲ್ ಲತೀಫ್ (45) ಮನೆಯಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕಗ್ಗಲನತ್ತ ಬಳಿಯಲ್ಲಿ ಲತ್ೀ ಅವರ 15 ಎಕರೆ ಜಮೀನಿದ್ದು, ಅರಣ್ಯ ಅಧಿಕಾರಿಗಳು ಸರ್ವೇ ಮಾಡುವಾಗ ತಮ್ಮ ಜಮೀನನ್ನೂ ಒತ್ತುವರಿ ಮಾಡಿಕೊಳ್ಳಬಹುದು ಎಂಬ ಚಿಂತೆಯಲ್ಲೇ ಮಾನಸಿಕವಾಗಿ ಕೊರಗುತ್ತಿದ್ದರು ಎನ್ನಲಾಗಿದೆ. ಹೀಗಾಗಿ ಅವರು ಮೃತಪಟ್ಟಿದ್ದಾರೆ ಎಂದು ಮೃತರ ಕುಟುಂಬದವರು ಆರೋಪಿಸಿದ್ದಾರೆ.
ತಾಲೂಕು ಜೆಡಿಎಸ್ ಅಧ್ಯ ಕಾಡೇನಹಳ್ಳಿ ಕೆ.ಎನ್. ನಾಗರಾಜ್, ಹಿರಿಯ ರೈತ ಮುಖಂಡ ಎಂ.ಗೋಪಾಲ್, ಜಿಪಂ ಮಾಜಿ ಸದಸ್ಯ ಬಿ.ವಿ.ಚಾಮೇಗೌಡ, ಮುಖಂಡರಾದ ಮಂಡಿಕಲ್ ಎಂ.ಎಸ್. ಮಂಜುನಾಥ್, ಅವನಿ ಬಾಬು, ಎಂ. ಗೊಲ್ಲಹಳ್ಳಿ ಪ್ರಭಾಕರ್, ಭಾರತೀಯ ಕಿಸಾನ್ ಸಂದ ಜಿಲ್ಲಾ ಖಜಾಂಚಿ ವಕೀಲ ವಿ.ಜಯಪ್ಪ ಸೇರಿ ಹಲವು ಮುಖಂಡರು ರೈತನಿಗೆ ಶ್ರದ್ಧಾಂಜಲಿ ಸಲ್ಲಿಸಿ ಟನೆಗೆ ಕಾರಣರಾದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಅಧಿಕಾರಿಗಳಿಂದ ಜೀವಭಯ?
ಅರಣ್ಯ ಅಧಿಕಾರಿಗಳಿಂದ ಕಗ್ಗಲನತ್ತ ರೈತರು ಹಾಗೂ ನಮಗೆ ಪ್ರಾಣ ಭಯ ಇದ್ದು, ಪೊಲೀಸರು ರಕ್ಷಣೆ ನೀಡಬೇಕು ಹಾಗೂ ರೈತರ ಭೂಮಿಗೆ ಅರಣ್ಯ ಅಧಿಕಾರಿಗಳು ಬಾರದಂತೆ ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡ ಎಂ.ಗೋಪಾಲ್ ಸರ್ಕಾರಕ್ಕೆ ಮನವಿ ಮಾಡಿದರು.
ರೈತರು&ಅರಣ್ಯ ಇಲಾಖೆ ನಡುವೆ ಜಟಾಪಟಿ
ಕಗ್ಗಲನತ್ತ ಗ್ರಾಮದ ಬಳಿ ಎಂದಿನಂತೆ ಕೆಲವು ರೈತರು ಭಾನುವಾರ ಜಮೀನುಗಳಲ್ಲಿ ಕೃಷಿ ಚಟುವಟಿಕೆ ಮಾಡುತ್ತಿದ್ದಾಗ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರೈತರು ಜಮೀನುಗಳ ಒಳಗೆ ಬಾರದಂತೆ ತಿಳಿಸಿದ್ದಾರೆ. ಈ ವೇಳೆ ರೈತರು ಹಾಗೂ ಅರಣ್ಯ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ದಾಖಲೆ ಹೊಂದಿರುವ ಜಮೀನುಗಳಲ್ಲಿ ಕೃಷಿ ಮಾಡಿಕೊಳ್ಳುವಂತೆ ಇತ್ತೀಚೆಗೆ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಡೆದ ಸಭೆಯಲ್ಲಿ ಪೊಲೀಸರು ತಿಳಿಸಿದ್ದರಿಂದ ರೈತರು ಜಮೀನುಗಳಲ್ಲಿ ವ್ಯವಸಾಯ ಮಾಡಲು ಹೋಗಿದ್ದಾರೆ. ಆಗ ಏಕಾಏಕಿ ಸುಮಾರು 40 ಮಂದಿ ಅರಣ್ಯ ಅಧಿಕಾರಿಗಳು ರೈತರ ಮೇಲೆ ಹಲ್ಲೆ ಮಾಡಲು ಬಂದರು ಎಂದು ರೈತರು ಗಂಭೀರ ಆರೋಪ ಮಾಡಿದ್ದಾರೆ.