ಹುಬ್ಬಳ್ಳಿ : ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಹತ್ತಿರ ನಡೆದ ಕಾಲ್ತುಳಿತದಲ್ಲಿ ಸುಮಾರು 11 ಜನ ಆರ್ಸಿಬಿ ಅಭಿಮಾನಿಗಳು ಮೃತಪಟ್ಟಿದ್ದು, ಇದಕ್ಕೆಲ್ಲ ರಾಜ್ಯ ಸರ್ಕಾರದ ಬೇಜವಾಬ್ದಾರಿ ಕಾರಣ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದ್ದಾರೆ.
ಕುಂಭಮೇಳದಲ್ಲಿ ಕೋಟ್ಯಾಂತರ ಭಕ್ತರು ಸೇರಿದಾಗ ಕಾಲ್ತುಳಿತದಿಂದ ಕೆಲ ಭಕ್ತರು ಮೃತಪಟ್ಟಿದ್ದರು. ಆಗ ಇದೇ ಕಾಂಗ್ರೆಸ್ ಪಕ್ಷದ ಮುಖಂಡರು ಕುಂಭಮೇಳದ ಆಯೋಜನೆ ಕುರಿತು ಪ್ರಶ್ನೆ ಎತ್ತಿದ್ದರು. ಈಗ ಕಾಂಗ್ರೆಸ್ ಸರ್ಕಾರ ಸಮರ್ಪಕ ಆಯೋಜನೆ, ಸೂಕ್ತ ವ್ಯವಸ್ಥೆ ಹಾಗೂ ಬಂದೋಬಸ್ತ ಮಾಡದಿರುವುದು ಎಷ್ಟು ಸರಿ ? ಎಂದು ಪ್ರಶ್ನಿಸಿದ್ದಾರೆ.
ಒಂದು ಕಡೆ ಐಪಿಎಲ್ ಕ್ರಿಕೆಟ್ನಲ್ಲಿ ಬೆಂಗಳೂರು ತಂಡ ಗೆದ್ದು ರಾಜ್ಯಾದ್ಯಂತ ಜನರು, ಕ್ರಿಕೆಟ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಮತ್ತೊಂದೆಡೆ ರಾಜ್ಯ ಸರ್ಕಾರ ತರಾತುರಿಯಲ್ಲಿ ಏರ್ಪಡಿಸಿದ ಸಂಭ್ರಮಾಚಾರಣೆ ಸೂತಕದ ವಾತಾವರಣ ನಿರ್ವಿುಸಿದಂತಿದೆ ಎಂದು ಶಾಸಕ ಟೆಂಗಿನಕಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರವು ಯಾವುದೇ ಮುಂದಾಲೋಚನೆ ಇಲ್ಲದೆ ಇಂತಹ ಕಾರ್ಯಕ್ರಮವನ್ನು ಕೈಗೆತ್ತಿಕೊಂಡು ಅನುಮತಿ ನೀಡಿದ್ದು ದೊಡ್ಡ ತಪು್ಪ. ಕ್ರಿಕೆಟ್ ಅಭಿಮಾನಿಗಳ ಸಾವಿಗೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ಹೊಣೆ ಹೊರಬೇಕೆಂದು ಹೇಳಿದ್ದಾರೆ.
ಮೃತರ ಕುಟುಂಬಕ್ಕೆ ಮತ್ತು ಗಾಯಾಳುಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿರುವ ಶಾಸಕ ಟೆಂಗಿನಕಾಯಿ, ಗಾಯಾಳುಗಳು ಶೀಘ್ರ ಗುಣಮುಖವಾಗಲಿ ಎಂದು ಹಾರೈಸಿದ್ದಾರೆ.