ಜಿಲ್ಲೆ

ಕಳೆದ ಮೂರೇ ವರ್ಷದಲ್ಲಿ ರಾಜ್ಯದಲ್ಲಿ ಮೃತಪಟ್ಟ ಹುಲಿ, ಆನೆಗಳೆಷ್ಟು ಗೊತ್ತಾ?: ಎಂಎಲ್‌ಸಿ ಮಧು ಮಾದೇಗೌಡ ಪ್ರಶ್ನೆಗೆ ಸಿಕ್ಕಿತು ಉತ್ತರ

ಮಂಡ್ಯ: ರಾಜ್ಯದಲ್ಲಿ ಕಳೆದ ಮೂರು ವರ್ಷದಲ್ಲಿ 237 ಆನೆ ಹಾಗೂ 49 ಹುಲಿ ಮೃತಪಟ್ಟಿವೆ. ಅಂತೆಯೇ ಇದೇ ಅವಧಿಯಲ್ಲಿ ಆನೆ ದಾಳಿಯಿಂದ 84 ಮತ್ತು ಹುಲಿ ದಾಳಿಗೆ 11 ಜನರು ಬಲಿಯಾಗಿದ್ದಾರೆಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಸದಸ್ಯ ಮಧು ಜಿ.ಮಾದೇಗೌಡ ಅವರ ಚುಕ್ಕೆ ಗುರುತ್ತಿಲ್ಲದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, 2020-21ರಲ್ಲಿ 14 ಹುಲಿ, 74 ಆನೆ, 2021-22ರಲ್ಲಿ 19 ಹುಲಿ, 90 ಆನೆ ಹಾಗೂ 2022-23ರಲ್ಲಿ 16 ಹುಲಿ, 73 ಆನೆ ಮೃತಪಟ್ಟಿವೆ. ಅಂತೆಯೇ ಹುಲಿ ದಾಳಿಯಿಂದ 11 ಜನರ ಕುಟುಂಬಕ್ಕೆ 105 ಲಕ್ಷ ರೂ ಹಾಗೂ ಆನೆ ದಾಳಿಯಿಂದ ಮೃತಪಟ್ಟ 84 ಜನರ ಕುಟುಂಬಕ್ಕೆ 695 ಲಕ್ಷ ರೂ ಪರಿಹಾರವನ್ನು ನೀಡಲಾಗಿದೆ ಎಂದಿದ್ದಾರೆ.
ಇನ್ನು ರಾಷ್ಟ್ರೀಯ ಹುಲಿ ಗಣತಿ 2022ರ ವರದಿ ಪ್ರಕಾರ ರಾಜ್ಯದಲ್ಲಿ 563 ಹುಲಿಗಳಿವೆ. 2023ನೇ ಸಾಲಿನಲ್ಲಿ ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ನೇರ ವೀಕ್ಷಣೆಯಿಂದ ನಡೆದ ಆನೆ ಗಣತಿ ವರದಿಯಂತೆ ರಾಜದಲ್ಲಿ ಅಂದಾಜು 6,395 ಆನೆಗಳಿವೆ. 2022-23ನೇ ಸಾಲಿನಲ್ಲಿ ಉತ್ತರ ಪ್ರದೇಶಕ್ಕೆ 4 ಹಾಗೂ ಮಧ್ಯಪ್ರದೇಶಕ್ಕೆ 14 ಬಂಧಿತ ಆನೆಗಳನ್ನು ಕಳುಹಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಪ್ರಾಜೆಕ್ಟ್ ಟೈಗರ್ ಕಾರ್ಯಕ್ರಮದಲ್ಲಿ ಆವಾಸ ಸ್ಥಾನಗಳ ಸಂರಕ್ಷಣೆಗಾಗಿ 6782.14 ಲಕ್ಷ ರೂ ಹಾಗೂ ಪ್ರಾಜೆಕ್ಟ್ ಎಲಿಫೆಂಟ್ ಕಾರ್ಯಕ್ರಮದಲ್ಲಿ ಆವಾಸಸ್ಥಾನಗಳ ಸಂರಕ್ಷಣೆಗಾಗಿ ಕ್ರಮವಾಗಿ 1312.41 ಲಕ್ಷ ರೂ ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದ್ದಾರೆ.