ವಿಜಯವಾಣಿ ಸುದ್ದಿಜಾಲ ದೊಡ್ಡಬೆಳವಂಗಲ
ಹೋಬಳಿಯ ಹುಲುಕುಡಿ ಬೆಟ್ಟದ ಸಮೀಪದ ಕೆರೆಯಲ್ಲಿ ತಾವರೆ ಹೂವು ಕೀಳಲು ಹೋಗಿ ತಂದೆ ಹಾಗೂ ಮಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ನಗರದ ಶಾಂತಿನಗರದಲ್ಲಿ ವಾಸವಿದ್ದ, ಸಕ್ಕರೆ ಗೊಲ್ಲಹಳ್ಳಿ ಸಮೀಪ ತಂಬೇನಹಳ್ಳಿ ನಿವಾಸಿ ಪುಟ್ಟರಾಜು(42) ಹಾಗೂ 10ನೇ ತರಗತಿ ಓದುತ್ತಿದ್ದ ಪುತ್ರ ಕೇಶವ್(16) ಮೃತರು.
ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ತಾವರೆ ಹೂವುಗಳನ್ನು ಕೀಳಲು ತಂದೆ-ಮಗ ಕೆರೆಬಳಿ ಹೋಗಿದ್ದರು. ಈ ವೇಳೆ ನೀರಿನಲ್ಲಿ ಮುಳುಗುತ್ತಿದ್ದ ಮಗನನ್ನು ರಕ್ಷಿಸಲು ಮುಂದಾದ ತಂದೆಯೂ ಮುಳುಗಿ ಮೃತಪಟ್ಟಿದ್ದಾರೆ. ಕೆರೆ ದಡದಲ್ಲಿ ಬಟ್ಟೆಗಳಿರುವುದನ್ನು ಗಮನಿಸಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ದೊಡ್ಡಬೆಳವಂಗಲ ಠಾಣೆ ಪೊಲೀಸರು ತಡರಾತ್ರಿವರೆಗೂ ಶವ ಹೊರತೆಗೆಯಲು ಕಾರ್ಯಾಚರಣೆ ನಡೆಸಿದರು. ಶವದೊರೆತಿಲ್ಲ. ರಕ್ಷಣಾ ಕಾರ್ಯಾಚರಣೆಗೆ ಧಾವಿಸುವಂತೆ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿದರೆ ವಾಹನ ಕೆಟ್ಟಿದೆ ಎಂಬ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ.