ಹನೂರು: ತಾಲೂಕಿನ ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿನ ಗೊಂಬೆಗಲ್ಲು ಗಿರಿಜನರ ಹಾಡಿ ಸಮೀಪ ಗುರುವಾರ ತಡರಾತ್ರಿ ಕಾಡಾನೆ ದಾಳಿಗೆ ವ್ಯಕ್ತಿ ಬಲಿಯಾಗಿದ್ದಾರೆ.
ತಾಲೂಕಿನ ಕಡಕಲಕಿಂಡಿ ಪೋಡು ನಿವಾಸಿ ನಾಗೇಶ್ (20) ಮೃತ ದುರ್ದೈವಿ. ಈತ ಗುರುವಾರ ಬೆಳಗ್ಗೆ ಸ್ನೇಹಿತರಾದ ನಂಜುಂಡ ಹಾಗೂ ಬಸವ ಎಂಬುವರೊಂದಿಗೆ ಬಿಳಿಗಿರಿರಂಗನ ಬೆಟ್ಟಕ್ಕೆ ತೆರಳಿ ದೇವರ ದರ್ಶನ ಪಡೆದು ರಾತ್ರಿ ಗ್ರಾಮಕ್ಕೆ ಹಿಂತಿರುಗುತ್ತಿದ್ದರು. ಈ ವೇಳೆ ಮದ್ಯ ಸೇವನೆ ಮಾಡಿ ಗೊಂಬೆಗಲ್ಲು ಹಾಡಿ ಸಮೀಪ ಮಲಗಿದ್ದರು. ಜತೆಯಲ್ಲಿದ್ದವರು ಮನೆಗೆ ತೆರಳಿದ್ದರು ಎನ್ನಲಾಗಿದ್ದು, ತಡರಾತ್ರಿ ಕಾಡಾನೆ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ.
ಸುದ್ದಿ ತಿಳಿದು ಶುಕ್ರವಾರ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ, ತಾಲೂಕು ಅಧಿಕಾರಿ ನವೀನ್ ಮಠದ್, ಎಸಿಎಫ್ ಸುರೇಶ್, ಆರ್‌ಎಫ್‌ಒ ಪ್ರಮೋದ್‌ಕುಮಾರ್ ಹಾಗೂ ಇನ್ಸ್‌ಪೆಕ್ಟರ್ ಶಶಿಕುಮಾರ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಬಳಿಕ ಮೃತದೇಹವನ್ನು ಹನೂರು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ನೀಡಲಾಯಿತು. ಈ ಸಂಬಂಧ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹನೂರು ತಾಲೂಕಿನ ಗೊಂಬೆಗಲ್ಲು ಹಾಡಿಯ ಬಳಿ ಆನೆ ದಾಳಿಗೆ ವ್ಯಕ್ತಿ ಮೃತಪಟ್ಟ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಂಜುಳಾ, ನವೀನ್ ಮಠದ್, ಸುರೇಶ್, ಪ್ರಮೋದ್‌ಕುಮಾರ್ ಇತರರು ಇದ್ದರು.