ಹೊನ್ನಾವರ: ಪೊಲೀಸ್ ಕಸ್ಟಡಿಯಲ್ಲಿ ಆರೋಪಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವನ್ನು ಸಿಐಡಿಗೆ ವಹಿಸಲಾಗುತ್ತಿದೆ. ಸೋಮವಾರವೇ ಸಿಐಡಿ ಅಧಿಕಾರಿಗಳು ಹೊನ್ನಾವರಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.
ಚಿನ್ನ ತೊಳೆದುಕೊಡುವ ನೆಪದಲ್ಲಿ ಜನರಿಗೆ ಮೋಸ ಮಾಡುತ್ತಿದ್ದ ಆರೋಪದ ಮೇಲೆ ಬಂಧಿತನಾಗಿದ್ದ ಬಿಹಾರ ಮೂಲದ ದಿಲೀಪ ಮಂಡಲ್ ಶನಿವಾರ ಪೊಲೀಸ್ ಠಾಣೆಯಲ್ಲೇ ಬಂಗಾರ ತೊಳೆಯುವ ರಾಸಾಯನಿಕ ಕುಡಿದು ಅಸ್ವಸ್ಥನಾಗಿದ್ದ.
ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಾಗದೆ ಆತ ಮೃತಪಟ್ಟಿದ್ದ. ಈ ಸಂಬಂಧ ಹೊನ್ನಾವರ ಠಾಣೆ ಇನ್ಸ್‌ಪೆಕ್ಟರ್ ಮಂಜುನಾಥ, ಅಪರಾಧ ವಿಭಾಗದ ಪಿಎಸ್‌ಐ ಮಂಜೇಶ್ವರ ಚಂದಾವರ, ಸಿಬ್ಬಂದಿ ಮಹಾವೀರ, ರಮೇಶ, ಸಂತೋಷ ಎಂಬುವವರನ್ನು ಅಮಾನತು ಮಾಡಲಾಗಿತ್ತು.
ಯಾವುದೇ ಕಸ್ಟೋಡಿಯಲ್ ಡೆತ್ ಪ್ರಕರಣವನ್ನು ಸಿಐಡಿ ವಿಚಾರಣೆ ನಡೆಸುವುದು ಒಂದು ಸಾಮಾನ್ಯ ಪ್ರಕ್ರಿಯೆ. ಅದರಂತೆ ಸಿಐಡಿ ಅಧಿಕಾರಿಗಳು ಸೋಮವಾರ ಹೊನ್ನಾವರ ಠಾಣೆಗೆ ಆಗಮಿಸಿದ್ದಾರೆ. ಅವರಿಗೆ ಪ್ರಕರಣದ ಕಡತಗಳನ್ನು ಶೀಘ್ರ ಹಸ್ತಾಂತರಿಸಲಾಗುವುದು ಎಂದು ಎಸ್‌ಪಿ ಎನ್.ವಿಷ್ಣುವರ್ಧನ ವಿಜಯವಾಣಿಗೆ ತಿಳಿಸಿದ್ದಾರೆ.